More

    ಸ್ವಚ್ಛತೆಯಲ್ಲಿ ನಂ.1 ಸ್ಥಾನ ನಿಶ್ಚಿತ

    ಮೈಸೂರು: ಸ್ವಚ್ಛತೆಯಲ್ಲಿ ಮೈಸೂರನ್ನು ದೇಶದ ಯಾವುದೇ ನಗರಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸ್ವಚ್ಛತೆಯಲ್ಲಿ ನಾವು ಸಾಕಷ್ಟು ಮುಂದಿದ್ದರೂ ನಂ.1 ಪಟ್ಟ ಪಡೆಯಲು ತಾಂತ್ರಿಕವಾಗಿ ಹಿಂದುಳಿದಿದ್ದೇವೆ. ಆ ತಪ್ಪನ್ನು ಈ ಬಾರಿ ಸರಿಪಡಿಸಿಕೊಂಡು ಮತ್ತೆ ನಂ.1 ಸ್ಥಾನ ಪಡೆಯುವುದು ನಿಶ್ಚಿತ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲಾ ಪತ್ರಕರ್ತರ ಸಂಘದಿಂದ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸ್ವಚ್ಛ ಸರ್ವೇಕ್ಷಣೆ ವಿಚಾರವಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.

    ಕಳೆದ ಬಾರಿ ಸಿಟಿಜನ್ ಫೀಡ್‌ಬ್ಯಾಕ್ ಸೇರಿದಂತೆ ಕೆಲವೊಂದು ವಿಚಾರಗಳಲ್ಲಿ ಮಾತ್ರ ನಾವು ಒಟ್ಟು 5,000 ಅಂಕಗಳ ಪೈಕಿ 622 ಅಂಕಗಳನ್ನು ಕಳೆದುಕೊಂಡಿದ್ದೆವು. ಈ ಬಾರಿ ಆ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.

    ಕಳೆದ ಬಾರಿ ಘನತ್ಯಾಜ್ಯ ನಿರ್ವಹಣೆಯಲ್ಲಿ ನಾವು ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಕೆಲವು ಅಂಕಗಳನ್ನು ಕಳೆದುಕೊಂಡೆವು. ಇದೀಗ ಘನತ್ಯಾಜ್ಯ ವಿಲೇವಾರಿಗೆ ಡಿಪಿಆರ್ ಆಗಿದೆ. ಅದೇ ರೀತಿ ಸಿ ಆ್ಯಂಡ್ ಡಿ ವೇಸ್ಟ್ ಮ್ಯಾನೇಜ್‌ಮೆಂಟ್ (ಕನ್‌ಸ್ಟ್ರಕ್ಷನ್ ಆ್ಯಂಡ್ ಡೆಮೋಲಿಷನ್ ವೇಸ್ಟ್) ನಲ್ಲಿ ಅಂಕ ಕಳೆದುಕೊಂಡಿದ್ದೆವು. ಇದೀಗ ಅದಕ್ಕೂ ಡಿಪಿಆರ್ ಮಾಡಲಾಗಿದ್ದು, ನಗರದ ಹೊರ ವರ್ತುಲ ರಸ್ತೆ ಬಳಿ ಸಿ ಆ್ಯಂಡ್ ಡಿ ವೇಸ್ಟ್ ನಿರ್ವಹಣೆಗೆ 8 ಎಕರೆ ಜಾಗ ಗುರುತಿಸಲಾಗಿದೆ ಎಂದರು.

    ಸಿಟಿಜನ್ ಫೀಡ್‌ಬ್ಯಾಕ್‌ಗೆ ಈ ಬಾರಿ 1,500 ಅಂಕಗಳನ್ನು ನಿಗದಿ ಮಾಡಲಾಗಿದೆ. ಈಗಾಗಲೇ ನಾವು ವಿವಿಧ ಸಂಘ ಸಂಸ್ಥೆಗಳು ಮುಖ್ಯಸ್ಥರು, ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಸಿಟಿಜನ್ ಫೀಡ್‌ಬ್ಯಾಕ್ ನೀಡುವಂತೆ ಮನವಿ ಮಾಡಿದ್ದೇವೆ. ಅಲ್ಲದೆ ಯಾವ ರೀತಿ ಫೀಡ್‌ಬ್ಯಾಕ್ ನೀಡಬೇಕೆಂಬ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನರು 1969 ಸಂಖ್ಯೆಗೆ ಕರೆ ಮಾಡಿ ಅಥವಾ ಆನ್‌ಲೈನ್ ಮೂಲಕ ತಮ್ಮ ಫೀಡ್‌ಬ್ಯಾಕ್ ನೀಡಬಹುದು ಎಂದರು.

    ನಾನು ದೇಶದ ಎಲ್ಲ ನಗರಗಳಿಗೂ ಭೇಟಿ ನೀಡಿದ್ದೇನೆ. ಆದರೆ, ಮೈಸೂರಿನಷ್ಟು ಸ್ವಚ್ಛವಾಗಿರುವ ನಗರವನ್ನು ನಾನು ಎಲ್ಲೂ ಕಂಡಿಲ್ಲ. ಹಾಗಂತ ಮೈಸೂರು ಸ್ವಚ್ಛತೆಯಲ್ಲಿ ಶೇ.100 ರಷ್ಟು ಪರಿಪೂರ್ಣವಾಗಿದೆ ಎಂದು ಹೇಳಲು ಬಯಸುವುದಿಲ್ಲ. ನಮ್ಮಲ್ಲೂ ಸಾಕಷ್ಟು ಲೋಪದೋಷಗಳು ಇವೆ. ಆದರೆ, ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ನಾವು ಸ್ವಚ್ಛತೆಯಲ್ಲಿ ಮುಂದೆ ಇದ್ದೇವೆ. ನಗರದ ಜನರು ವರ್ಷದ 11 ತಿಂಗಳು ಸ್ವಚ್ಛತೆ ವಿಚಾರದಲ್ಲಿ ಪಾಲಿಕೆ ಬಗ್ಗೆ ಟೀಕೆ, ವಿಮರ್ಶೆ ಮಾಡಲಿ. ನಾವು ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡುತ್ತೇವೆ. ಆದರೆ, ಸ್ವಚ್ಛ ಸರ್ವೇಕ್ಷಣೆ ನಡೆಯುವ ಒಂದು ತಿಂಗಳು ನಗರದ ಜನರು ನಮ್ಮೊಂದಿಗೆ ಕೈ ಜೋಡಿಸಿ ನಗರ ಸ್ವಚ್ಛತೆಯಲ್ಲಿ ನಂ.1 ಸ್ಥಾನ ಪಡೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.

    ನಗರದ ಹೃದಯ ಭಾಗದಲ್ಲಿ ಫುಟ್‌ಪಾತ್ ಒತ್ತುವರಿ ಹಾಗೂ ವ್ಯಾಪಾರಕ್ಕೆ ಕಡಿವಾಣ ಹಾಕಿದ್ದೇವೆ. ಉಳಿದ ಕಡೆಗಳಲ್ಲೂ ಫುಟ್‌ಪಾತ್ ವ್ಯಾಪಾರಕ್ಕೆ ಹಂತ ಹಂತವಾಗಿ ಕಡಿವಾಣ ಹಾಕಲಾಗುವುದು. ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರು ಬಹುತೇಕ ಬಡ ವರ್ಗದವ ರಾಗಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಾಗ ಗುರುತಿಸಲಾಗಿದೆ. ಇತ್ತೀಚೆಗೆ ಕೆಲವು ಇ-ಶೌಚಗೃಹಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಅವುಗಳನ್ನು ಇದೀಗ ಸರಿಪಡಿಸಲಾಗಿದ್ದು, ಎಲ್ಲ ಶೌಚಗೃಹಗಳು ಸುಸ್ಥಿತಿಯಲ್ಲಿ ಇವೆ ಎಂದರು.

    ವಲಯ ಕಚೇರಿ 1, 2 ಮತ್ತು 3ರಲ್ಲಿ ಮನೆ ಮನೆಗಳಿಂದ ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಪಡೆಯಲಾಗುತ್ತಿದೆ. ಬೇರ್ಪಡಿಸಿ ನೀಡದೆ ಇರುವವರಿಗೆ ಅರಿವು ಮೂಡಿಸಲಾಗುತ್ತಿದೆ. ಒಂದುವೇಳೆ ಅವರಿಂದ ನಿರಂತರವಾಗಿ ಸಹಕಾರ ದೊರೆಯದೆ ಇದ್ದರೆ ದಂಡ ಹಾಕಲಾಗುವುದು. ಕಳೆದ 3 ತಿಂಗಳ ಅವಧಿಯಲ್ಲಿ ಸ್ವಚ್ಛತೆಗೆ ಸಹಕರಿಸದ ಜನರಿಗೆ 6 ಲಕ್ಷ ರೂ. ದಂಡ ವಿಧಿಸಿದ್ದೇವೆ ಎಂದು ತಿಳಿಸಿದರು.

    ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ಬಾಬು, ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಬಿ. ರಾಘವೇಂದ್ರ ಇದ್ದರು.

    ಪಾಲಿಕೆ ಸದಸ್ಯರೊಂದಿಗೆ ಮತ್ತೆ ಸಭೆ: ಸ್ವಚ್ಛತೆ ವಿಚಾರದಲ್ಲಿ ನಗರ ಪಾಲಿಕೆಯ ಎಲ್ಲ ಸದಸ್ಯರು ಸಹಕಾರ ನೀಡುವ ವಿಶ್ವಾಸ ಇದೆ. ಪಾಲಿಕೆ ಸಭಾಂಗಣದಲ್ಲಿ ಸ್ವಚ್ಛತೆ ವಿಚಾರದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಅನುದಾನ ವಿಚಾರ ಚರ್ಚೆಯಾಗಿ ಸದಸ್ಯರು ಸಭೆ ಬಹಿಷ್ಕರಿಸಿದರು. ಆದರೆ, ಎಲ್ಲರೂ ಸ್ವಚ್ಛ ಸರ್ವೇಕ್ಷಣೆಗೆ ಸಹಕಾರ ನೀಡುವ ವಿಶ್ವಾಸ ಇದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು.

    ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ನಗರ ಪಾಲಿಕೆ ಎಂಬುದು ಒಂದು ಕುಟುಂಬ ಇದ್ದಂತೆ. ಪಾಲಿಕೆಯಲ್ಲಿ ಸದಸ್ಯರು ಹಾಗೂ ಆಯುಕ್ತರಿಗೆ ತಮ್ಮದೇ ಆದ ಒತ್ತಡಗಳು ಇರುತ್ತವೆ. ಇಂಥ ಒತ್ತಡ ಸಂದರ್ಭಗಳಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಆಗುವುದು ಸಹಜ. ಆದರೆ, ನಗರದ ಅಭಿವೃದ್ಧಿಗೆ ನಾವು ಒಗ್ಗೂಡಿ ಸಾಗುತ್ತೇವೆ. ಸ್ವಚ್ಛ ಸರ್ವೇಕ್ಷಣೆ ವಿಚಾರವಾಗಿ ಸದಸ್ಯರ ಮನವೊಲಿಸಲು ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts