More

  ನಿಷೇಧಿತ ಪ್ರದೇಶದಲ್ಲಿ ಕಸ ಹಾಕದಿರಿ

  ಗಂಗಾವತಿ: ನಗರ ನೈರ್ಮಲ್ಯೀಕರಣಕ್ಕಾಗಿ ಕಾಲನಿಗಳಲ್ಲಿ ಚರಂಡಿ ಒತ್ತುವರಿಯಾಗಿರುವ ಕಟ್ಟಡ ತೆರವುಗೊಳಿಸಲಾಗುತ್ತಿದ್ದು, ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

  ನಗರಸಭೆಯಿಂದ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಿಟಿ ರೌಂಡ್‌ಅಪ್ ಅಭಿಯಾನದಡಿ 20ನೇ ವಾರ್ಡ್‌ನ ಅಗಸರ ಓಣಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.

  ಚರಂಡಿ ಮತ್ತು ರಸ್ತೆ ಒತ್ತುವರಿಯಾಗಿರುವ ಹಲವು ಪ್ರಕರಣಗಳಿದ್ದು, ಸ್ವಚ್ಛತೆಗೂ ಅವಕಾಶವಿಲ್ಲದಂತಾಗಿದೆ. ಒತ್ತುವರಿ ಪ್ರದೇಶ ತೆರವುಗೊಳಿಸಲು ಕಟ್ಟಡ ಮಾಲೀಕರಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗುತ್ತಿದ್ದು, ದಾಖಲಾತಿ ಸಲ್ಲಿಸಬೇಕು. ನಗರಸಭೆಯಲ್ಲಿ ಗಾಂವಠಾಣ ನಕ್ಷೆ ಆಧಾರದಡಿ ಸರ್ವೇ ಕೈಗೊಳ್ಳಲಾಗುವುದು. ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  ತ್ಯಾಜ್ಯ ಹಾಕುವಂತಿಲ್ಲ: ನಗರಸಭೆಯಿಂದ ನಿಯೋಜಿಸಿರುವ ವಾಹನದಲ್ಲಿ ತ್ಯಾಜ್ಯ ಹಾಕಬೇಕಿದ್ದು, ರಸ್ತೆ ಮತ್ತು ಖಾಲಿ ಪ್ರದೇಶದಲ್ಲಿ ಸಂಗ್ರಹಿಸುವಂತಿಲ್ಲ. ಕಸ ಹಾಕುವರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ನಿಷೇಧಿತ ಪ್ರದೇಶದಲ್ಲಿ ತ್ಯಾಜ್ಯ ಹಾಕಿರುವ ಬಗ್ಗೆ ಮಾಹಿತಿ ಸಿಕ್ಕರೆ ದಂಡ ಹಾಕಲಾಗುತ್ತಿದೆ. ವೈಯಕ್ತಿಕ ಶೌಚಗೃಹ ಕಡ್ಡಾಯ ನಿರ್ಮಿಸಿಕೊಳ್ಳಬೇಕಿದ್ದು, ಬಯಲು ಬಹಿರ್ದೆಸೆಗೆ ಅವಕಾಶವಿಲ್ಲ. ಜಾಗವಿಲ್ಲದವರು ಸಾರ್ವಜನಿಕ ಶೌಚಗೃಹ ಬಳಕೆ ಮಾಡಬೇಕು. ಆಯಾ ವಾರ್ಡ್ ಸದಸ್ಯರು ಮತ್ತು ಪ್ರಮುಖರ ಸಮ್ಮುಖದಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಸಭೆ ಆಯೋಜಿಸಲಾಗುವುದು ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

  ಬಸವಣ್ಣ ವೃತ್ತ, ಮಿಠಾಯಿಗಾರ ಓಣಿ, ಹೊಸಳ್ಳಿ ರಾಮಲಿಂಗಪ್ಪ ಏರಿಯಾ, ಅಗಸರ ಓಣಿ, ಗಾಂಧಿನಗರ, ಕಡ್ಡಿಪುಡಿ ಓಣಿ, ಪುತ್ತೂರು ಆಸ್ಪತ್ರೆ ಪ್ರದೇಶದಲ್ಲಿ ಸಂಚರಿಸಿದ ಅಧಿಕಾರಿಗಳ ತಂಡ, ಸ್ವಚ್ಛತೆ ಕುರಿತು ಜನರಿಗೆ ಮಾಹಿತಿ ನೀಡಿದರು. ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ, ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ಮಾಜಿ ಸದಸ್ಯ ಸಿದ್ದಾಪುರ ರಾಚಪ್ಪ, ಪ್ರಭಾರ ಎಇಇ ಶಂಕರಗೌಡ, ಪರಿಸರ ಇಂಜಿನಿಯರ್ ಚೇತನನಾಯ್ಕ, ಆರೋಗ್ಯ ನಿರೀಕ್ಷ ಎ.ನಾಗರಾಜ್, ಎಇಗಳಾದ ಶಿವಕುಮಾರ, ಪ್ರವೀಣಕುಮಾರ, ನೈರ್ಮಲ್ಯ ನಿರೀಕ್ಷಕಿ ಶೋಭಾ ಅಂಗಡಿ ಇತರರಿದ್ದರು.

  ಗಿಡ ನೆಡುವ ಅಭಿಯಾನ: ರಸ್ತೆಯಲ್ಲಿ ಕಸ ಸಂಗ್ರಹವಾಗುತ್ತಿದ್ದ ಕಡ್ಡಿಪುಡಿ ಓಣಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ಥಳೀಯರು ಸ್ವಚ್ಛತೆಗೆ ಕೈಜೋಡಿಸುವ ಭರವಸೆ ನೀಡಿದರಲ್ಲದೆ, ತ್ಯಾಜ್ಯ ವಾಹನದಲ್ಲಿ ಕಸ ಹಾಕುವ ನಿರ್ಧಾರ ಕೈಗೊಂಡರು. ಕಟ್ಟಡ ತೆರವಿಗೆ ಕೆಲ ಮಾಲೀಕರು ಒಪ್ಪಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

  ನಗರದ ಬಹುತೇಕ ಕಾಲನಿಗಳಲ್ಲಿ ಚರಂಡಿ ಒತ್ತುವರಿಯಾಗಿದ್ದು, ಕೆಲವೆಡೆ ಕಟ್ಟಡಗಳ ಕೆಳಗೆ ಹೂತು ಹೋಗಿವೆ. ಹೀಗಾಗಿ ಎಲ್ಲೆಂದರಲ್ಲಿ ಚರಂಡಿ ತುಂಬಿ ಹರಿಯುತ್ತಿವೆ. ಸ್ವಚ್ಛತೆಗಾಗಿ ತೆರವು ಕಾರ್ಯಾಚರಣೆ ಅನಿವಾರ್ಯವಾಗಿದೆ.
  ಆರ್. ವಿರೂಪಾಕ್ಷಮೂರ್ತಿ, ಪೌರಾಯುಕ್ತ, ನಗರಸಭೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts