More

    ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಮದಿಹಾಳ ಗ್ರಾಪಂ ಎದುರು ಕೂಲಿಕಾರರ ಪ್ರತಿಭಟನೆ

    ಮುದಗಲ್: ಉದ್ಯೋಗ ಖಾತ್ರಿ ಯೋಜನೆಯಡಿ ಪಿಡಿಒ ಕೆಲಸ ನೀಡುತ್ತಿಲ್ಲವೆಂದು ಆರೋಪಿಸಿ ನೂರಾರು ಕೂಲಿ ಕಾರ್ಮಿಕರು ಸಮೀಪದ ಆಮದಿಹಾಳ ಗ್ರಾಪಂ ಎದುರು ಮಂಗಳವಾರ ಧರಣಿ ನಡೆಸಿದರು.

    ಗ್ರಾಪಂ ವ್ಯಾಪ್ತಿಯ ಕನಸಾವಿಯಲ್ಲಿ ನೂರಾರು ಕೂಲಿಕಾರರಿದ್ದು, ಬರಗಾಲ ಮತ್ತು ಕರೊನಾ ಕಾರಣಕ್ಕೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಕ್ಕೆ ನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಿದರೆ ಪಿಡಿಒ ಕೇವಲ 8 ದಿನ ಕೆಲಸ ನೀಡಿ ಕೈತೊಳೆದುಕೊಂಡಿದ್ದಾರೆ. ಇದರಿಂದ ಕೈಯಲ್ಲಿ ಕಾಸು, ದುಡಿಯಲು ಕಾಯಕವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೆಲಸ ನೀಡುವಲ್ಲಿ ಪಿಡಿಒ ತಾರತಮ್ಯ ಮಾಡುತ್ತಿದ್ದಾರೆ. ಕೆಲ ಗ್ರಾಪಂ ಸದಸ್ಯರ ನೇತೃತ್ವದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೆಲಸದಲ್ಲಿ ಕಮಿಷನ್ ಪಡೆದು 14 ದಿನ ಕೆಲಸ ಮತ್ತು ಬಿಒಸಿ ಹಣ ಪಾವತಿಸುತ್ತಾರೆ. ಆದರೆ ಕೂಲಿಯನ್ನೇ ನಂಬಿಕೊಂಡ ನಮಗೆ ಕೆಲಸ ಇಲ್ಲವೆಂದು ಪಿಡಿಒ ಹಾರಿಕೆ ಉತ್ತರ ನೀಡುತಿದ್ದಾರೆ ಆರೋಪಿಸಿದರು.

    ಗುಳೆ ತಪ್ಪಿಸಲಿಕ್ಕಾಗಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಅಡಿ ನಿರಂತರ ಕೆಲಸ ನೀಡಲು ಆದೇಶಿಸಿದೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಪಿಡಿಒ ಸ್ಥಳಕ್ಕಾಗಮಿಸಿ ಕೆಲಸ ನೀಡುವ ಭರವಸೆ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟುಹಿಡಿದರು.

    ಸ್ಥಳಕ್ಕೆ ಬಾರದ ಕಾರಣ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ ಕೂಲಿಕಾರರ ವಿರುದ್ಧವೇ ಹರಿಹಾಯ್ದ ಪಿಡಿಒ, ಕೆಲಸ ನೀಡುವುದಿಲ್ಲ ಏನು ಬೇಕಾದರೂ ಮಾಡಿಕೊಳ್ಳಿ ಎಂದೇಳಿ ಕರೆ ಕಟ್ ಮಾಡಿದರು. ಇದರಿಂದ ರೊಚ್ಚಿಗೆದ್ದ ಕೂಲಿಕಾರರು, ಅಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದರು.

    ಧರಣಿಯಲ್ಲಿ ಅನ್ನದಾನಪ್ಪ, ಅಮರೇಗೌಡ ಪಾಟೀಲ್, ದೇವೇಂದ್ರಪ್ಪ ಬೆಳ್ಳಿಗನೂರು, ಅಮರೇಗೌಡ ಗೌಡರ್, ಮುತ್ತಣ್ಣ ಮೇಟಿ, ಹನುಮಂತ ತುಂಬದ, ಶರಣಪ್ಪ ಕುಂದಗೋಳ, ಅಂದಪ್ಪ ಲೆಕ್ಕಿಹಾಳ, ಬಸಣ್ಣ ಗೊಂಡಿ ಮತ್ತು ರೇಣಮ್ಮ, ಮಲ್ಲಮ್ಮ, ಲಕ್ಷ್ಮೀದೇವಿ, ಪಾರ್ವತಮ್ಮ ಸೇರಿ ನೂರಾರು ಕೂಲಿಕಾರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts