More

    ಥ್ಯಾಂಕ್ ಯೂ ಧೋನಿ: 15 ವರ್ಷದ ಟೀಂ ಇಂಡಿಯಾ ಜರ್ನಿಗೆ ವಿದಾಯ

    ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕ ಎನಿಸಿದ ಮಹೇಂದ್ರ ಸಿಂಗ್ ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ಈ ಮೂಲಕ ಕಳೆದ ಒಂದು ವರ್ಷದಿಂದ ಧೋನಿ ಭವಿಷ್ಯದ ಕುರಿತು ಹರಿದಾಡುತ್ತಿದ್ದ ಗಾಳಿ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ. ಜಾಣ್ಮೆಯ ನಿರ್ಧಾರಗಳ ನಾಯಕತ್ವದ ಮೂಲಕ ವಿಶ್ವ ಕ್ರಿಕೆಟ್​ನ ಗಮನಸೆಳೆದಿದ್ದ ಎಂಎಸ್ ಧೋನಿ, ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶನಿವಾರ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಬಿಸಿಸಿಐ ಕೂಡ ಧೋನಿ ನಿವೃತ್ತಿಯನ್ನು ದೃಢಪಡಿಸಿದೆ.

    ‘ವೃತ್ತಿಜೀವನದುದ್ದಕ್ಕೂ ನೀವು ನೀಡಿದ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ಇಂದು ಸಂಜೆ 7.29ರಿಂದ ನಾನು ನಿವೃತ್ತಿ ಹೊಂದಿದ್ದೇನೆ ಎಂದು ಪರಿಗಣಿಸಿ’ ಎಂದು ಧೋನಿ ಇನ್​ಸ್ಟಾಗ್ರಾಂನಲ್ಲಿ ಶನಿವಾರ ಸಂಜೆ ಬರೆದುಕೊಂಡಿದ್ದಾರೆ. ಐಪಿಎಲ್ ಸಿದ್ಧತೆಗಾಗಿ ಶುಕ್ರವಾರ ಚೆನ್ನೈಗೆ ಬಂದಿಳಿದ ಮರುದಿನವೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವೇ ಧೋನಿ ಅವರ ಕಡೇ ಅಂತಾರಾಷ್ಟ್ರೀಯ ಪಂದ್ಯವೆನಿಸಿದೆ. ಭಾರತ ತಂಡದ ಯಶಸ್ಸಿನಲ್ಲಿ ಧೋನಿ ಪಾತ್ರ ಪ್ರಮುಖವಾಗಿತ್ತು. ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿದ್ದ ಧೋನಿ ಮೂರು ಐಸಿಸಿ ಟ್ರೋಫಿ ಗೆದ್ದು ಕೊಟ್ಟಿದ್ದರು. 39 ವರ್ಷದ ಎಂಎಸ್ ಧೋನಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಬಿಸಿಸಿಐ ಆಶಿಸಿದೆ.

    ಕ್ಯಾಪ್ಟನ್ ಕೂಲ್ ಎಂದು ಹೆಸರು

    2007ರ ಏಕದಿನ ವಿಶ್ವಕಪ್​ನಲ್ಲಿ ಲೀಗ್ ಹಂತದಲ್ಲೇ ಭಾರತ ನಿರ್ಗಮಿಸಿದ ಬಳಿಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ವೇಳೆ ತಂಡದ ನೇತೃತ್ವ ವಹಿಸಿಕೊಂಡ ಧೋನಿ, ಕ್ಯಾಪ್ಟನ್ ಕೂಲ್ ಎಂದೇ ಹೆಸರಾದರು. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಪಡೆ ಚಾಂಪಿಯನ್​ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ಯುವ ಪಡೆಯೊಂದಿಗೆ ತಂಡ ಕಟ್ಟಿದ ಧೋನಿ, ಇದರ ಫಲವಾಗಿ ತವರಿನಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಇದರೊಂದಿಗೆ 28 ವರ್ಷಗಳ ಬಳಿಕ ಭಾರತ ವಿಶ್ವಚಾಂಪಿಯನ್ ಆಯಿತು. ಜತೆಗೆ ಐಪಿಎಲ್​ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಬಾರಿ ಚಾಂಪಿಯನ್ ಆಗಿದೆ.

    ರೈನಾ ಕೂಡ ವಿದಾಯ

    ಎಂಎಸ್ ಧೋನಿಯ ಪರಮಾಪ್ತ ಎಂದು ಗುರುತಿಸಿಕೊಂಡಿದ್ದ ಎಡಗೈ ಬ್ಯಾಟ್ಸ್​ಮನ್ ಸುರೇಶ್ ರೈನಾ ಕೂಡ ನೆಚ್ಚಿನ ನಾಯಕನ ವಿದಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಧೋನಿ ಜತೆಗೂಡಿ ಚೆನ್ನೈನಲ್ಲಿ ಐಪಿಎಲ್ ಸಿದ್ಧತೆ ಆಗಮಿಸಿದ್ದ ರೈನಾ, ಅವರೂ ಶನಿವಾರ ದಿಢೀರ್ ವಿದಾಯ ಹೇಳಿದ್ದಾರೆ. 33 ವರ್ಷದ ಸುರೇಶ್ ರೈನಾ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಧೋನಿ ಸಾರಥ್ಯದ ಸಿಎಸ್​ಕೆ ತಂಡದ ಪ್ರಮುಖ ಆಟಗಾರನಾಗಿರುವ ರೈನಾ, ನಾನು ನಿಮ್ಮ ಜತೆಯಲ್ಲೇ ಸಾಗಲು ಇಷ್ಟಪಡುವೆ ಧೋನಿ ಎಂದು ಇನ್​ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ರೈನಾ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿ ದ್ದರು. ಜತೆಗೆ ಐಪಿಎಲ್ ಆರಂಭದಿಂದಲೂ ಧೋನಿ ಜತೆಯಲ್ಲೇ ಸಿಎಸ್​ಕೆ ತಂಡದಲ್ಲಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್​ನಿಂದಾಗಿ ಸಿಎಸ್​ಕೆ ಎರಡು ವರ್ಷ ನಿಷೇಧದಲ್ಲಿದ್ದಾಗ ರೈನಾ ಗುಜರಾತ್ ಲಯನ್ಸ್ ತಂಡದಲ್ಲಿದ್ದರೆ, ಧೋನಿ ಪುಣೆ ತಂಡದ ಪರ ಆಡಿದ್ದರು. ಉತ್ತರ ಪ್ರದೇಶದ ಸುರೇಶ್ ರೈನಾ, 18 ಟೆಸ್ಟ್ ಪಂದ್ಯಗಳಿಂದ 768 ರನ್ ಕಲೆಹಾಕಿದ್ದರೆ, 226 ಏಕದಿನ ಪಂದ್ಯಗಳಿಂದ 5 ಶತಕ ಸೇರಿದಂತೆ 5615 ರನ್, 78 ಟಿ20 ಪಂದ್ಯಗಳಿಂದ 1 ಶತಕ, 5 ಅರ್ಧಶತಕ 1605 ರನ್ ಬಾರಿಸಿದ್ದಾರೆ.

    ಧೋನಿ ಮೈಲಿಗಲ್ಲುಗಳು

    • ಐಸಿಸಿಯ ಎಲ್ಲ ಟ್ರೋಫಿಗಳನ್ನು (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್​ಷಿಪ್ ಗದೆ) ಜಯಿಸಿದ ವಿಶ್ವದ ಏಕೈಕ ನಾಯಕ.
    • ಏಕದಿನ (2011) ಮತ್ತು ಟಿ20 ವಿಶ್ವಕಪ್ (2007) ಜಯಿಸಿದ ಏಕೈಕ ನಾಯಕ.
    • ಟಿ20 ವಿಶ್ವಕಪ್ ಜಯಿಸಿದ ಮೊದಲ ನಾಯಕ. ್ಝ ಕಪಿಲ್ ದೇವ್ ಬಳಿಕ ಏಕದಿನ ವಿಶ್ವಕಪ್ ಜಯಿಸಿದ 2ನೇ ಭಾರತೀಯ ನಾಯಕ.
    • ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಜಯಿಸಿದ ಎರಡನೇ ಭಾರತೀಯ ನಾಯಕ.
    • ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ (10,773) ರನ್ ಸಿಡಿಸಿದ ಭಾರತೀಯ ವಿಕೆಟ್ ಕೀಪರ್​-ಬ್ಯಾಟ್ಸ್​ಮನ್.
    • ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು (2008, 2009) ಸತತ 2 ಬಾರಿ ಜಯಿಸಿದ ಮೊದಲ ಆಟಗಾರ.
    • ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್​ರತ್ನಕ್ಕೆ ಭಾಜನರಾದ 2ನೇ ಕ್ರಿಕೆಟಿಗ.
    • ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ ಪಡೆದ 2ನೇ ಕ್ರಿಕೆಟಿಗ.
    • ಭಾರತವನ್ನು ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೇರಿಸಿದ ಮೊದಲ ನಾಯಕ.

    ನಿವೃತ್ತಿಯಲ್ಲೂ ಸಸ್ಪೆನ್ಸ್..!

    ಧೋನಿ ನಿವೃತ್ತಿಯಲ್ಲೂ ಸಸ್ಪೆನ್ಸ್ ಕಾಯ್ದುಕೊಂಡರು. 2019ರ ಏಕದಿನ ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ನಲ್ಲಿ ನಿರ್ಗಮಿಸಿದ ಬೆನ್ನಲ್ಲಿಯೇ ಎಲ್ಲರೂ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಕಾದಿದ್ದವರಿಗೆ ಧೋನಿ ಅಚ್ಚರಿ ನೀಡಿದರು. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು, ಸೇನೆಯಲ್ಲಿ ಎರಡು ತಿಂಗಳು ಕಾರ್ಯನಿರ್ವಹಿಸಲು ತೆರಳಿದರು. ಬಳಿಕ ತವರಿನ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಸರಣಿಯಿಂದಲೂ ಹೊರಗುಳಿದರು. ಈ ನಡುವೆ ವಿರಾಟ್ ಕೊಹ್ಲಿ ಒಂದು ದಿನ ಧೋನಿಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ ಬೆನ್ನಲ್ಲಿಯೇ, ಇಡೀ ಭಾರತದಲ್ಲಿ ಧೋನಿ ನಿವೃತ್ತಿಯ ಊಹಾಪೋಹಗಳು ಎದ್ದವು. ಬಹುಶಃ ನಿವೃತ್ತಿ ಘೋಷಣೆ ಮಾಡುವ ಮುನ್ನವೂ ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಗುಟ್ಟು ಬಿಟ್ಟುಕೊಡದೆ ದಿಢೀರ್ ನಿವೃತ್ತಿ ಘೋಷಿಸಿದರು.

    ಎಂಎಸ್ ಧೋನಿ ಭಾರತೀಯ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಅಪಾರ ವಾದುದು. 2011ರ ವಿಶ್ವಕಪ್ ಜತೆಯಾಗಿ ಗೆದ್ದಿದ್ದು ನನ್ನ ಜೀವನದ ಶ್ರೇಷ್ಠ ಕ್ಷಣ. ನಿಮ್ಮ 2ನೇ ಇನಿಂಗ್ಸ್​ಗಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭ ಹಾರೈಕೆಗಳು.

    | ಸಚಿನ್ ತೆಂಡುಲ್ಕರ್ ಕ್ರಿಕೆಟ್ ದಿಗ್ಗಜ

    ವಿಶ್ವಕಪ್ ಗೆಲುವಿನವರೆಗೆ…

    ಸಚಿನ್ ತೆಂಡುಲ್ಕರ್ ನಂತರದಲ್ಲಿ ಭಾರತದ ಅತ್ಯಂತ ಪ್ರಖ್ಯಾತ ಹಾಗೂ ಸೂಕ್ಷ್ಮದರ್ಶಿಯ ಕ್ರಿಕೆಟಿಗ ಎಂಎಸ್ ಧೋನಿ. ಗಣಿಗಾರಿಕೆಯನ್ನೇ ಆದಾಯವನ್ನಾಗಿಸಿಕೊಂಡ, ಕ್ರಿಕೆಟ್​ನ ಗಂಧಗಾಳಿಯೇ ಇರದ ರಾಜ್ಯ ಜಾರ್ಖಂಡ್​ನಿಂದ ಬಂದ ಧೋನಿ, ತಮ್ಮ ಭಿನ್ನ ಶೈಲಿಯ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ತಂತ್ರಗಾರಿಕೆ ಹಾಗೂ ತಮ್ಮದೇ ಶೈಲಿಯ ಹೊಸತನದ ನಾಯಕತ್ವದ ಮೂಲಕ ಯಶಸ್ಸು ಕಂಡವರು. ಮೊದಮೊದಲು ಕ್ರಿಕೆಟ್​ನ ಸಂಪ್ರದಾಯವಾದಿಗಳು ಫುಟ್​ವರ್ಕ್ ಇಲ್ಲದ ಧೋನಿಯ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಬಗ್ಗೆ ಆರಂಭದಲ್ಲಿ ಟೀಕೆ ಮಾಡಲು ಆರಂಭಿಸಿದ್ದರಾದರೂ, ಹಂತಹಂತವಾಗಿ ಕ್ರಿಕೆಟ್​ನ ಯಶಸ್ಸಿನ ಮೆಟ್ಟಿಲೇರಿದ ಬಳಿಕ ಧೋನಿ ಶೈಲಿಯ ಆಟವನ್ನು ಮೆಚ್ಚಿಕೊಂಡರು.

    ಧೋನಿಯ ನಾಯಕತ್ವದಲ್ಲಿ ಭಾರತ ಎಲ್ಲ ಮಾದರಿಯಲ್ಲೂ ಅಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 2009ರ ಡಿಸೆಂಬರ್​ನಿಂದ ಆರಂಭವಾಗಿ 18 ತಿಂಗಳ ಕಾಲ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ.1 ಆಗಿದ್ದರೆ, ಏಕದಿನ ಮಾದರಿಯಲ್ಲಿ 2011ರಲ್ಲಿ ತವರಿನಲ್ಲಿ ವಿಶ್ವಕಪ್ ಜಯಿಸಿತ್ತು. 2007ರಲ್ಲಿ ನಾಯಕತ್ವದ ಜವಾಬ್ದಾರಿ ತೆಗೆದುಕೊಂಡ ಮೊದಲ ಸರಣಿಯಲ್ಲಿಯೇ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ದಿಗ್ಗಜ ನಾಯಕ. ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಇನ್ಸ್​ಪೆಕ್ಟರ್ ಆಗಿ ಕೆಲಸ ಮಾಡಿದ್ದ ಧೋನಿ, ಮಧ್ಯಮ ವರ್ಗದ ಕುಟುಂಬದ ಹಿನ್ನಡೆಗಳನ್ನೆಲ್ಲಾ ಮೆಟ್ಟಿನಿಂತು ಕ್ರಿಕೆಟಿಗ ಆಗಬೇಕು ಎನ್ನು ಆಸೆ ಹೊತ್ತುಕೊಂಡು 23ನೇ ವರ್ಷಕ್ಕೆ ಕೋಲ್ಕತ ಸೇರಿಕೊಂಡರು. 2004ರಲ್ಲಿ ನೈರೋಬಿಯಲ್ಲಿ ನಡೆದ ಭಾರತ ಎ ತಂಡದ ತ್ರಿಕೋನ ಏಕದಿನ ಸರಣಿಯಲ್ಲಿ ಎರಡು ಶತಕ ಬಾರಿಸಿದ್ದೇ, ಉದ್ದ ಕೂದಲುಗಳ, ನಿರ್ಭೀತಿಯ ಆಟಗಾರನ ಬಗ್ಗೆ ಆಯ್ಕೆ ಸಮಿತಿ ಎಚ್ಚರಗೊಂಡಿತ್ತು. ಈ ಸರಣಿಯ ಬೆನ್ನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಧೋನಿ, ಒಂದೇ ವರ್ಷದಲ್ಲಿ ಏಕದಿನ ಪಂದ್ಯದ ಎರಡು ಇನಿಂಗ್ಸ್​ನಲ್ಲಿ 148 ಹಾಗೂ 183 ರನ್ ಸಿಡಿಸುವ ಮೂಲಕ ಅಭಿಮಾನಿಗಳ ಡಾರ್ಲಿಂಗ್ ಆಗಿ ಬದಲಾದರು. ಏನನ್ನಾದರೂ ಸಾಧಿಸುವ ಹಂಬಲವಿದ್ದಲ್ಲಿ, ಶ್ರೀಮಂತ-ಬಡವ-ಮಧ್ಯಮವರ್ಗ ಇದ್ಯಾವುದೂ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಧೋನಿಯ ದೊಡ್ಡ ಉದಾಹರಣೆ. ಧೋನಿ ಎಂದೂ ಪ್ರಸಿದ್ಧಿ, ಪ್ರಖ್ಯಾತಿಗಳಿಗೆ ಗೌರವ ನೀಡಿದವರಲ್ಲ. ಆದರೆ, ಯಾವುದನ್ನೂ ಅಗೌರವದಿಂದ ನೋಡಿದವರಲ್ಲ. ಪ್ರತಿ ಹಂತದಲ್ಲೂ ಕಲಿತು, ಪ್ರತಿ ಹಂತದಲ್ಲೂ ಪ್ರಗತಿ ಕಂಡು ಯಶಸ್ಸಿನ ಉತ್ತುಂಗಕ್ಕೆ ಏರಿದ ವ್ಯಕ್ತಿ. ತಂಡದ ಮೊತ್ತ ಏರಿಸುವ ಸಂದರ್ಭ ಬಂದಾಗ ವೇಗದ ಇನಿಂಗ್ಸ್, ಚೇತರಿಕೆ ನೀಡುವ ಸಂದರ್ಭವಿದ್ದಾಗ ತಾಳ್ಮೆಯ ಇನಿಂಗ್ಸ್ ಆಡುತ್ತಿದ್ದ ಧೋನಿಯ ಮ್ಯಾಚ್ ಫಿನಿಷಿಂಗ್ ವೇಳೆ ಬಾರಿಸುತ್ತಿದ್ದ ದೈತ್ಯ ಸಿಕ್ಸರ್​ಗಳು ಇನ್ನುಮುಂದೆ ಕ್ರಿಕೆಟ್​ನ ನೆನಪುಗಳಾಗಿ ಮಾತ್ರವೇ ಉಳಿದುಕೊಳ್ಳಲಿವೆ.

    ಧೋನಿ ಕುರಿತಾಗಿ ಬಂದಿದೆ ಚಿತ್ರ!

    ಎಂಎಸ್ ಧೋನಿ ಕ್ರಿಕೆಟ್ ಜೀವನ ಹಾಗೂ ವಿಶ್ವಕಪ್​ವರೆಗೆ ಅವರ ಸಾಧನೆಯ ಕುರಿತಾಗಿ ಬಾಲಿವುಡ್ ಚಿತ್ರ ಕೂಡ ತೆರೆ ಕಂಡಿದೆ. ಸುಶಾಂತ್ ಸಿಂಗ್ ರಜಪೂತ್ ಮುಖ್ಯ ಭೂಮಿಕೆಯಲ್ಲಿರುವ ‘ಎಂಎಸ್ ಧೋನಿ: ಅಲ್​ಟೋಲ್ಡ್ ಸ್ಟೋರಿ’ 2016ರಲ್ಲಿ ತೆರೆ ಕಂಡಿತ್ತು. ಧೋನಿಯ ಕ್ರಿಕೆಟ್ ಜೀವನದೊಂದಿಗೆ ವೈಯಕ್ತಿಕ ಜೀವನದ ಬಗ್ಗೆಯೂ ಇದರಲ್ಲಿ ವಿವರಿಸಲಾಗಿತ್ತು.

    ಎಲ್ಲ ಕ್ರಿಕೆಟಿಗರೂ ಒಂದಲ್ಲ ಒಂದು ದಿನ ತಮ್ಮ ಜರ್ನಿ ನಿಲ್ಲಿಸಬೇಕಾಗುತ್ತದೆ. ನಮ್ಮಿಬ್ಬರ ನಡುವಿನ ಪರಸ್ಪರ ಗೌರವ ಮತ್ತು ನಾನು ನಿಮ್ಮಿಂದ ಪಡೆದ ಪ್ರೀತಿ ಯಾವಾಗಲೂ ನನ್ನಲ್ಲಿರುತ್ತದೆ.
    | ವಿರಾಟ್ ಕೊಹ್ಲಿ ನಾಯಕ
    • ಟೆಸ್ಟ್ ಪದಾರ್ಪಣೆ: 2005ರಲ್ಲಿ, ಶ್ರೀಲಂಕಾ ವಿರುದ್ಧ, ಚೆನ್ನೈ
    • ಕೊನೆಯ ಪಂದ್ಯ: 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್
    • ಏಕದಿನ ಪದಾರ್ಪಣೆ: 2004ರಲ್ಲಿ ಬಾಂಗ್ಲಾದೇಶ ವಿರುದ್ಧ, ಚಿತ್ತಗಾಂಗ್
    • ಕೊನೆಯ ಪಂದ್ಯ: 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ, ಮ್ಯಾಂಚೆಸ್ಟರ್
    • ಟಿ20 ಪದಾರ್ಪಣೆ: 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಜೊಹಾನ್ಸ್​ಬರ್ಗ್
    • ಕೊನೆಯ ಪಂದ್ಯ: 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಬೆಂಗಳೂರು.
    ಇದು ಯುಗವೊಂದರ ಅಂತ್ಯ. ದೇಶ ಮತ್ತು ವಿಶ್ವ ಕ್ರಿಕೆಟ್​ಗೆ ಅವರೆಂಥ ಆಟಗಾರರಾಗಿದ್ದರು. ಅವರ ನಾಯಕತ್ವ ಗುಣಕ್ಕೆ ಸರಿಸಾಟಿಯಾಗುವುದು ಕಠಿಣ. ಅದರಲ್ಲೂ ವಿಶೇಷವಾಗಿ ಚುಟುಕು ಕ್ರಿಕೆಟ್ ಪ್ರಕಾರದಲ್ಲಿ. ಆರಂಭಿಕ ದಿನಗಳಲ್ಲಿ ಅವರು ಏಕದಿನ ಕ್ರಿಕೆಟ್​ನಲ್ಲಿ ತೋರಿದ ಬ್ಯಾಟಿಂಗ್ ಅವರಲ್ಲಿನ ಸ್ವಾಭಾವಿಕ ಪ್ರತಿಭೆಯನ್ನು ವಿಶ್ವವೇ ಗಮನಿಸುವಂತೆ ಮಾಡಿತ್ತು. ಅವರ ಜೀವನಕ್ಕೆ ನಾನು ಶುಭ ಹಾರೈಸುತ್ತೇನೆ.
    | ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ

    ಎಂಎಸ್ ಧೋನಿ ಪ್ರತಿನಿಧಿಸಿದ ತಂಡಗಳು: ಭಾರತ, ಏಷ್ಯಾ ಇಲೆವೆನ್, ಬಿಹಾರ, ಚೆನ್ನೈ ಸೂಪರ್ ಕಿಂಗ್ಸ್, ಜಾರ್ಖಂಡ್, ಪುಣೆ ಸೂಪರ್ ಜೈಂಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts