More

    ಚೇತರಿಕೆ ಹಾದಿಯಲ್ಲಿ ಎಂಆರ್‌ಪಿಎಲ್

    ಮಂಗಳೂರು: ಆರ್ಥಿಕ ಹಿಂಜರಿತ ಹಾಗೂ ಕರೊನಾಘಾತದ ಕಾರಣದಿಂದ ದಿಢೀರ್ ತೈಲ ಬೇಡಿಕೆ ಕುಸಿತ ಕಂಡಿದ್ದ ರಿಫೈನರಿ ಮಂಗಳೂರಿನ ಎಂಆರ್‌ಪಿಎಲ್ ಚೇತರಿಕೆಯ ಹಾದಿಯಲ್ಲಿದೆ.
    ಕೆಲ ದಿನಗಳ ಹಿಂದಿನವರೆಗೂ ಎರಡನೇ ಹಂತದ ಉತ್ಪಾದನಾ ಘಟಕ ಷಟ್‌ಡೌನ್ ಆಗಿದ್ದು ಉಳಿದ ಘಟಕದಲ್ಲಿ ಉತ್ಪಾದನೆಯಾಗುವ ಡೀಸೆಲ್, ಪೆಟ್ರೋಲನ್ನೂ ಹೊರದೇಶಗಳಿಗೆ ಕಳುಹಿಸಲಾಗುತ್ತಿತ್ತು. ಆದರೆ ಈಗ ರಫ್ತು ನಿಲ್ಲಿಸಿದ್ದು ದೇಶದೊಳಗೆಯೇ ಬೇಡಿಕೆ ಹೆಚ್ಚಿರುವುದರಿಂದ ಇಂಧನ ಪೂರೈಕೆ ಮುಂದುವರಿಸಲಾಗಿದೆ.

    ಎಂಆರ್‌ಪಿಎಲ್ ವಾರ್ಷಿಕ 6 ಮಿಲಿಯನ್ ಟನ್ ಡೀಸೆಲ್, 1 ಮಿ.ಟನ್ ಪೆಟ್ರೋಲ್ ಹಾಗೂ 1 ಮಿ.ಟನ್ ಎಲ್‌ಪಿಜಿಯನ್ನು ಎಂಆರ್‌ಪಿಎಲ್ ಉತ್ಪಾದಿಸುತ್ತದೆ. ಈ ಬಾರಿ ಏಪ್ರಿಲ್‌ನಲ್ಲಿ ಲಾಕ್‌ಡೌನ್ ಕಾರಣಕ್ಕೆ ಉತ್ಪಾದನಾ ಸಾಮರ್ಥ್ಯದ ಶೇ.40ಕ್ಕೆ ಇಳಿಸಲಾಗಿತ್ತು. ಉತ್ಪಾದನೆಯಾಗುತ್ತಿದ್ದ ಇಂಧನದಲ್ಲೂ ಶೇ.50ರಷ್ಟು(ಮುಖ್ಯವಾಗಿ ಡೀಸೆಲ್) ಮಲೇಷ್ಯಾ, ಸಿಂಗಾಪುರ, ಚೀನಾ ಸೇರಿದಂತೆ 20 ದೇಶಗಳಿಗೆ ರಫ್ತು ಮಾಡಬೇಕಾಗಿ ಬಂದಿದೆ. ಆದರೆ ಸದ್ಯ ರಫ್ತನ್ನು ಪೂರ್ಣ ನಿಲ್ಲಿಸಲಾಗಿದೆ. ರಾಜ್ಯದ ಇತರ ಭಾಗಗಳಿಗೆ ಅಲ್ಲದೆ ಗೋವಾ, ಗುಜರಾತ್, ಮುಂಬೈ ಸೇರಿದಂತೆ ನಗರಗಳಿಗೆ ಹಡಗಿನ ಮೂಲಕ ತೈಲವನ್ನು ರವಾನಿಸಲಾಗುತ್ತಿದೆ ಎಂದು ಎಂಆರ್‌ಪಿಎಲ್ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನೂ ಒಂದು ಘಟಕ ಕಾರ್ಯಾರಂಭ ನಿರೀಕ್ಷೆ
    ಏಪ್ರಿಲ್‌ನಲ್ಲಿ ಷಟ್‌ಡೌನ್ ಆಗಿರುವ ಎರಡನೇ ಫೇಸ್ ಘಟಕ ಪ್ರಾರಂಭಗೊಂಡಿಲ್ಲ. ಹಂತ ಹಂತವಾಗಿ ಉತ್ಪಾದನೆ ಏರಿಕೆಯಾಗುತ್ತಿದ್ದಂತೆಯೇ ಅದೂ ಕೂಡ ಕಾರ್ಯಾರಂಭಗೊಳ್ಳಬಹುದು. ಸದ್ಯ ಬೇಡಿಕೆ ಹೆಚ್ಚುತ್ತಿರುವುದು ಆಶಾದಾಯಕ ಎನ್ನುತ್ತಾರೆ ಅಧಿಕಾರಿಗಳು. ಎಂಆರ್‌ಪಿಎಲ್ ಒಟ್ಟು 3 ಘಟಕಗಳನ್ನು ಹೊಂದಿದ್ದು, ಮೂರರಲ್ಲೂ ಡೀಸೆಲ್, ಪೆಟ್ರೋಲ್ ಸಹಿತ ಇತರ ಪೆಟ್ರೊಕೆಮಿಕಲ್‌ಗಳನ್ನೂ ಉತ್ಪಾದಿಸಬಹುದು.

    ಕಳೆದ ವರ್ಷವೂ ಕುಸಿದಿತ್ತು ಬೇಡಿಕೆ
    ಆರ್ಥಿಕ ಮುಗ್ಗಟ್ಟಿನ ಕಾರಣ ದೇಶದಲ್ಲಿ 2019ರ ಅಕ್ಟೋಬರ್-ನವೆಂಬರ್‌ನಲ್ಲಿ ಡೀಸೆಲ್‌ಗೆ ಬೇಡಿಕೆ ಕುಸಿದಿತ್ತು. ಮೊದಲು ಶೇ.20ರಷ್ಟನ್ನು ಮಾತ್ರವೇ ರಫ್ತು ಮಾಡುತ್ತಿದ್ದ ಎಂಆರ್‌ಪಿಎಲ್‌ನ ಡೀಸೆಲ್ ರಫ್ತು ಪ್ರಮಾಣ ಆಗ ಶೇ.40ಕ್ಕೆ ಏರಿಕೆಯಾಗಿತ್ತು. ಈ ವರ್ಷ ಫೆಬ್ರವರಿ ವೇಳೆಗೆ ಮತ್ತೆ ಬೇಡಿಕೆ ದೇಶದಲ್ಲಿ ಹೆಚ್ಚಿದ್ದು ಸಹಜಸ್ಥಿತಿಗೆ ಬರುವ ಹಂತದಲ್ಲೇ ಕರೊನಾ ಆಘಾತ ಕೊಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts