ರಾಜ್ಯದಲ್ಲಿ ಜಾರಿಯಾಗದ ಆಯುಷ್ಮಾನ್ ಯೋಜನೆ : ಸಂಸದ ಕ್ಯಾ.ಚೌಟ ಕಳವಳ

IMG-20240408-WA0344
Published on



ಮಂಗಳೂರು : ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಕರ್ನಾಟಕ ಸರ್ಕಾರ ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಸೋಮವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಈ ಗಂಭೀರ ವಿಷಯ ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ ‘ ಈ ಯೋಜನೆಗೆ ಕರ್ನಾಟಕ ಸರ್ಕಾರ ತನ್ನ ಪಾಲಿನ ಶೇ.40
ನೆರವು ನೀಡಲು ನಿರಾಕರಿಸಿದೆ. ಇದರಿಂದ ಕರ್ನಾಟಕದಲ್ಲಿರುವ ಹಿರಿಯ ನಾಗರಿಕರಿಗೆ ಈ ಯೋಜನೆಯ ಫಲಾನುಭವ ಪಡೆಯುವುದಕ್ಕೆ
ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಧಾರದಿಂದ ಈ ಯೋಜನೆಯನ್ನು ಅವಲಂಬಿಸಿಕೊಂಡಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಅಗತ್ಯ ಜೀವ ರಕ್ಷಕ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಳಕಳ ವ್ಯಕ್ತಪಡಿಸಿದರು.
ಮಂಗಳೂರು ಭಾಗದಲ್ಲಿ 70 ವರ್ಷ ದಾಟಿರುವ ಸುಮಾರು 80 ಸಾವಿರ ಹಿರಿಯ ನಾಗರಿಕರಿದ್ದಾರೆ.ಕರ್ನಾಟಕ ಸರ್ಕಾರದ
ತೀರ್ಮಾನದಿಂದಾಗಿ ಈ ಆಯುಷ್ಮಾನ್ ಭಾರತ್ ಯೋಜನೆಯಡಿ ವಾರ್ಷಿಕವಾಗಿ 5 ಲಕ್ಷ ರೂ. ವಿಮಾ ಸೌಲಭ್ಯದಡಿ ಆಸ್ಪತ್ರೆಗೆ
ದಾಖಲಾಗಿ ಉಚಿತ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ
ಬಡವರ್ಗದವರಿಗೆ ತಮ್ಮ ವೃದ್ಧಾಪ್ಯ ಜೀವನದಲ್ಲಿ ಎದುರಾಗುವ ಕಾಯಿಲೆಗಳಿಗೆ ಯಾರ ಆಶ್ರಯವೂ ಇಲ್ಲದೆ ಗುಣಮಟ್ಟದ ಚಿಕಿತ್ಸೆ
ಪಡೆಯಬೇಕೆಂಬ ಬಹಳ ದೊಡ್ಡ ಆಶಯ, ಕಳಕಳಿಯೊಂದಿಗೆ ಆಯುಷ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದಾರೆ.ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ತಕ್ಷಣ ಕರ್ನಾಟಕದಲ್ಲಿರುವ ಹಿರಿಯ ನಾಗರಿಕರ ಆರೋಗ್ಯದ ಹಕ್ಕೆ ಸಂರಕ್ಷಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಆಯುಷ್ಮಾನ್ ಯೋಜನೆ ಮಾನದಂಡಗಳನ್ನು ಪೂರೈಕೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂಸದ ಕ್ಯಾ. ಚೌಟ ಅವರು ಸದನದಲ್ಲಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net