More

    ಮಾತೃಭಾಷೆಯೇ ಎಲ್ಲ ಸಾಧನೆಗೂ ಮೆಟ್ಟಿಲು

    ಹುಣಸೂರು: ಮಾತೃಭಾಷೆಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅವಕಾಶವನ್ನು ಸರ್ಕಾರ ನೀಡಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಸಾಧನೆಯತ್ತ ಸಾಗಬೇಕು ಎಂದು ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಹೇಳಿದರು.


    ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಮಾತೃಭಾಷೆಯೇ ಎಲ್ಲ ಸಾಧನೆಗೂ ಮೆಟ್ಟಿಲು ಆಗಲು ಸಾಧ್ಯ. ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅಂತರ್ಜಾಲಗಳ ಸದ್ಬಳಕೆಯಿಂದಾಗಿ ಜ್ಞಾನ ವೃದ್ಧಿಸಲು ಸಾಧ್ಯವಿದೆ. ಇದೀಗ ಕೇಂದ್ರ ಆಯೋಜಿಸುವ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್‌ನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶವೂ ಲಭ್ಯವಾಗಿದೆ. ನಿಮಗೆ ಸುಲಭ ಎನಿಸುವ, ಸಾಧಿಸಬಲ್ಲೇ ಎನ್ನುವ ವಿಶ್ವಾಸ ನೀಡುವ ಭಾಷೆಯನ್ನೂ ನೀವೇ ಆಯ್ದುಕೊಳ್ಳಿರಿ. ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು.


    ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ನಾಲ್ಕು ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ಹೊಂದಿರುವ ವಿಶ್ವದ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಆಗಿದೆ. ಕನ್ನಡ ಭಾಷೆ, ನೆಲ, ಜಲ ಉಳಿಸುವತ್ತ ಶತಮಾನಗಳ ಹೋರಾಟದ ಇತಿಹಾಸ ಇದೆ. ಕನ್ನಡಿಗರಾಗಿ ನಾವು ಮೊದಲು ಕನ್ನಡ ಬಳಕೆಯನ್ನು ಮನೆಯಿಂದಲೇ ಆರಂಭಿಸಬೇಕು. ಬೇರೆ ಭಾಷಿಕರಿಗೆ ಕನ್ನಡ ಕಲಿಸುವ ಹೊಣೆ ಹೊರಬೇಕು. ಹೀಗಾದಲ್ಲಿ ಭಾಷೆಯ ಮೇಲಿನ ಪ್ರೀತಿ, ಕಾಳಜಿ ಹೆಚ್ಚಲು ಸಾಧ್ಯ. ಕನ್ನಡ ಭಾಷೆಯ ಅಂತಃಸತ್ವವನ್ನು ಅರಿತು ಭಾಷೆಯೊಂದಿಗೆ ನಾವೂ ಬೆಳೆಯೋಣ ಎಂದರು.


    ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿದರು. ಪ್ರಾಂಶುಪಾಲ ಪುಟ್ಟಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ಟಿ.ಲೋಕೇಶ್, ಪದಾಧಿಕಾರಿಗಳಾದ ಚಿಲ್ಕುಂದ ಮಹೇಶ್, ಕಲಾವತಿ, ಮಹದೇವಮ್ಮ, ನಂಜುಂಡಸ್ವಾಮಿ, ಕುಮಾರ್ ಅರಸೇಗೌಡ, ಕುಮಾರ್, ವಾಸುಕಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


    ಯುಪಿಎಸ್‌ಸಿ ಪರೀಕ್ಷೆಯಲ್ಲಿ 777ನೇ ರ‌್ಯಾಂಕ್ ಪಡೆದ ತಾಲೂಕಿನ ಎಂ.ಲೇಖನ್, ಚರ್ಚಾಸ್ಪರ್ಧೆಯ ವಿಜೇತ ಶ್ಯಾಂಪ್ರಸಾದ್, ಸ್ನಾತಕೋತ್ತರ ವಿಭಾಗದ ಚಿನ್ನದ ಪದಕ ವಿಜೇತೆ ಅಮೃತಾ ಹಾಗೂ ಸ್ನೇಕ್ ಶಮೀಲ್ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts