More

    ಗೆದ್ದವರ ಚಿತ್ತ ಈಗ ಮೀಸಲಾತಿಯತ್ತ

    ಹಾವೇರಿ: ಜಿಲ್ಲೆಯ 209 ಗ್ರಾಮ ಪಂಚಾಯಿತಿಗಳಿಗೆ ಅಂತೂ ಚುನಾವಣೆ ಮುಗಿದು ಹೊಸ ವರ್ಷಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಇದೀಗ ಎಲ್ಲರ ಚಿತ್ತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದತ್ತ ನೆಟ್ಟಿದೆ. ಯಾವ ಗ್ರಾಪಂಗೆ ಯಾವ ಮೀಸಲಾತಿ ಬರುತ್ತದೆ ಎಂಬ ಲೆಕ್ಕಾಚಾರವೂ ಜೋರಾಗಿದೆ.

    ಪದೇಪದೆ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿದರೆ ಅಭಿವೃದ್ಧಿ ಅಷ್ಟಾಗಿ ನಡೆಯುವುದಿಲ್ಲ. ಅಲ್ಪ ಅವಧಿಯಲ್ಲಿ ಬರೀ ಅಧಿಕಾರಕ್ಕಾಗಿ ಕಸರತ್ತು ನಡೆಯುತ್ತದೆ ಎಂಬ ಉದ್ದೇಶದಿಂದ ಕಳೆದ ಬಾರಿಯ ಮೀಸಲಾತಿ ಅವಧಿಯನ್ನು 30 ತಿಂಗಳ ಬದಲು 5 ವರ್ಷಗಳವರೆಗೆ ನಿಗದಿಪಡಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆದರೆ, ಸರ್ಕಾರದ ಉದ್ದೇಶ ಮಾತ್ರ ಬಹುತೇಕ ಗ್ರಾಪಂಗಳಲ್ಲಿ ಈಡೇರಲಿಲ್ಲ. 10, 20, 30 ತಿಂಗಳಿಗೊಬ್ಬರಂತೆ ಅಧ್ಯಕ್ಷ ಸ್ಥಾನದ ಬದಲಾವಣೆ ನಡೆಯಿತು. ಹೀಗಾಗಿ ಈ ಬಾರಿ ಅದನ್ನು ಎರಡೂವರೆ ವರ್ಷಕ್ಕೆ ಇಳಿಕೆ ಮಾಡಲಾಗಿದೆ. ನರೇಗಾ, 14ನೇ ಹಣಕಾಸು ಆಯೋಗ ಸೇರಿ ವಿವಿಧ ಯೋಜನೆಗಳಲ್ಲಿ ವಾರ್ಷಿಕ ಕೋಟ್ಯಂತರ ರೂಪಾಯಿ ಅನುದಾನ ಬರುವ ಗ್ರಾಪಂನ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಗೌರವ ಹಾಗೂ ಅಧಿಕಾರವಿದೆ. ಆ ಸ್ಥಾನ ಅಲಂಕರಿಸಲು ಪ್ರತಿಯೊಬ್ಬ ಸದಸ್ಯರು ಮೀಸಲಾತಿ ಘೊಷಣೆಗಾಗಿ ಈಗ ಕಾಯá-ತ್ತಿದ್ದಾರೆ.

    ತಾಲೂಕುವಾರು ಆಯ್ಕೆ ಸಭೆ: ಗ್ರಾಪಂ ಫಲಿತಾಂಶ ಪ್ರಕಟಗೊಂಡ ತಿಂಗಳ ಅವಧಿಯೊಳಗೆ ಮೀಸಲಾತಿ ಪ್ರಕಟಿಸಬೇಕಿದೆ. ಅಲ್ಲದೆ, ಚುನಾವಣಾ ಆಯೋಗದಿಂದ ತಾಲೂಕುವಾರು ಮೀಸಲಾತಿ ವರ್ಗೀಕರಿಸಿ ಪಟ್ಟಿ ಪ್ರಕಟಿಸಬೇಕಿದೆ. ಅದು ಪ್ರಕಟಗೊಂಡ ಬಳಿಕ ಜಿಲ್ಲಾಧಿಕಾರಿಗಳು ತಾಲೂಕುವಾರು ಸಭೆ ನಡೆಸಿ ರೋಸ್ಟರ್ ಪ್ರಕಾರ ಮೀಸಲಾತಿಯನ್ನು ಗ್ರಾಪಂಗೆ ಆಯ್ಕೆಯಾಗಿರುವ ನೂತನ ಸದಸ್ಯರ ಸಮ್ಮುಖದಲ್ಲಿಯೇ ನಿಗದಿಪಡಿಸುತ್ತಾರೆ. ತಾಲೂಕುವಾರು ಮೀಸಲಾತಿ ವರ್ಗೀಕರಣದ ವೇಳೆ ಒಂದೇ ಮೀಸಲಾತಿ ಪದೇಪದೆ ಕೆಲವು ಗ್ರಾಪಂಗಳಿಗೆ ಬರುವ ಸಾಧ್ಯತೆಗಳು ಇರುವುದರಿಂದ ಅಂತಹ ಸಮಯದಲ್ಲಿ ಮೀಸಲಾತಿ ನಿಗದಿಗೆ ಜಿಲ್ಲಾಡಳಿತ ಲಾಟರಿ ಮೂಲಕವೂ ಆಯ್ಕೆ ಮಾಡಬಹುದಾಗಿದೆ.

    ಮಹಿಳೆಯರಿಗೆ ಶೇ. 50ರಷ್ಟು ಮೀಸಲು

    ರಾಜ್ಯ ಚುನಾವಣಾ ಆಯೋಗವು ಈಗಾಗಲೇ ತಾಲೂಕುವಾರು ಮೀಸಲಾತಿ ವರ್ಗೀಕರಣ ಮಾಡಿ ಅದನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ. 1993ರಿಂದ ಆಗಿರುವ ಮೀಸಲಾತಿಯನ್ನು ಪರಿಗಣಿಸಿ ಅವಕಾಶ ಸಿಗದ ವರ್ಗಗಳಿಗೆ ಆದ್ಯತೆ ನೀಡಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಬೇಕು. ಹೀಗಾಗಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಈ ಹಿಂದಿನ ಅವಧಿಯಲ್ಲಿ ಯಾವಯಾವ ವರ್ಗಗಳಿಗೆ ಅವಕಾಶ ದೊರೆತಿದೆ ಎಂಬ ಮಾಹಿತಿ ಕಲೆಹಾಕಿ ಪಟ್ಟಿ ಸಿದ್ಧಪಡಿಸುತ್ತಿದೆ. ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕು. ಹೀಗಾಗಿ ಜಿಲ್ಲೆಯ 209 ಗ್ರಾಪಂಗಳಲ್ಲಿ ಅರ್ಧಕ್ಕೂ ಹೆಚ್ಚು ಗಾಪಂಗಳಲ್ಲಿ ಮಹಿಳೆಯರೇ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ. ಎಸ್​ಸಿ., ಎಸ್​ಟಿಗೆ ಜನಸಂಖ್ಯೆ ಆಧಾರದಲ್ಲಿ ಶೇ. 13ರಷ್ಟು ಹಾಗೂ ಒಬಿಸಿ ‘ಅ’, ‘ಬ’ ವರ್ಗದ ಸದಸ್ಯರ ಸಂಖ್ಯೆ ಆಧರಿಸಿ 1/3ರಷ್ಟು ಮೀಸಲಾತಿ ಸಿಗಲಿದೆ. ಜೊತೆಗೆ ಮೀಸಲಾತಿ ಪ್ರಮಾಣವನ್ನೂ ಶೇ. 50ಕ್ಕೆ ನಿಗದಿಗೊಳಿಸಲಾಗಿದೆ.

    ರಾಜಕೀಯ ಒತ್ತಡಕ್ಕೆ ಯತ್ನ: ಚುನಾವಣೆಯು ರಾಜಕೀಯ ಪಕ್ಷಗಳ ಚಿಹ್ನೆಯಡಿ ನಡೆಯದೇ ಇದ್ದರೂ ಗ್ರಾಪಂನಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತರೇ ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಲ ದೊಡ್ಡ ಗ್ರಾಪಂಗಳಲ್ಲಿ ಅಧಿಕಾರ ಗದ್ದುಗೆಗೇರಲು ಹಾಲಿ, ಮಾಜಿ ಶಾಸಕರು, ಸಚಿವ ಮೂಲಕ ಅಧಿಕಾರಗಳ ಮೇಲೆ ಒತ್ತಡ ತಂದು ಮೀಸಲಾತಿ ತಮ್ಮ ಪರ ಬರುವಂತೆ ಮಾಡಿಕೊಡಿ ಎಂದು ಕೆಲ ಸದಸ್ಯರು ದುಂಬಾಲು ಬಿದ್ದಿದ್ದಾರೆ. ರೋಸ್ಟರ್ ಪ್ರಕಾರ ಮೀಸಲಾತಿ ನಿಗದಿಗೆ ಕಾನೂನಿದ್ದರೂ ಅದರಲ್ಲಿಯ ಕೆಲ ಲೋಪಗಳನ್ನು ವರವಾಗಿಸಿಕೊಂಡು ಯಾವ ರೀತಿ ಮೀಸಲಾತಿಯನ್ನು ಗಿಟ್ಟಿಸಿಕೊಳ್ಳಬಹುದು ಎಂಬ ಸಲಹೆಯನ್ನು ನೀಡುತ್ತಿದ್ದಾರೆ.

    ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗುವುದು. ತಾಲೂಕುವಾರು ಮೀಸಲಾತಿ ವರ್ಗೀಕರಣದ ಪಟ್ಟಿ ಇನ್ನೂ ಆಯೋಗದಿಂದ ನಮಗೆ ಬಂದಿಲ್ಲ. ಬಂದ ಕೂಡಲೆ ಜಿಲ್ಲಾಧಿಕಾರಿ ಸೂಚನೆಯಂತೆ ತಾಲೂಕುವಾರು ಸಭೆ ನಡೆಸಿ ಸದಸ್ಯರ ಸಮ್ಮುಖದಲ್ಲಿಯೇ ಮೀಸಲಾತಿಯನ್ನು ರೋಸ್ಟರ್ ಪ್ರಕಾರ ನಿಗದಿಗೊಳಿಸಲಾಗುವುದು.
    | ಪ್ರಶಾಂತ ನಾಲವಾರ, ಚುನಾವಣಾ ತಹಸೀಲ್ದಾರ್ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts