More

    ಶೇಂಗಾ ಕಾಯಿ ಖರೀದಿಗೆ ಒಲವು ತೋರದ ರೈತ

    ಮೊಳಕಾಲ್ಮೂರು: ಶೇಂಗಾ ಬಿತ್ತನೆ ಕಾಯಿ ದರ ದುಪ್ಪಟ್ಟಾಗಿದ್ದು, ರೈತರು ಖರೀದಿಗೆ ಒಲವು ತೋರದ ಕಾರಣ ವಾರದಿಂದ ಕೇವಲ 390 ಕ್ವಿಂಟಲ್ ಬಿತ್ತನೆ ಕಾಯಿ ಖರ್ಚಾಗಿದೆ.

    ಪ್ರಸಕ್ತ ವರ್ಷದ ಮುಂಗಾರು ಶೇಂಗಾ ಬಿತ್ತನೆಗೆ ಒಂದು ತಿಂಗಳು ಬಾಕಿ ಇದೆ. ಆದರೆ, ಕೃಷಿ ಇಲಾಖೆಯ ಸಬ್ಸಿಡಿ ಬಿತ್ತನೆ ಕಾಯಿ ಖರೀದಿಸಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ.

    ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ರೈತರಲ್ಲಿ ಹಣವಿಲ್ಲವೋ ಅಥವಾ ಸರ್ಕಾರದ ಸಬ್ಸಿಡಿ ಬೀಜ ದುಬಾರಿಯೋ ಎಂಬುದು ತಿಳಿಯುತ್ತಿಲ್ಲ. ಜೂನ್ 3 ರಿಂದ ಈವರೆಗೆ 11 ಗ್ರಾಪಂ ಮಟ್ಟದ 60 ಕ್ಕೂ ಅಧಿಕ ಗ್ರಾಮಗಳ 400 ರೈತರು ಕೇವಲ 390 ಕ್ವಿಂಟಾಲ್ ಕಾಯಿ ಖರೀದಿ ಮಾಡಿದ್ದಾರೆ. ಕಳೆದ ವರ್ಷ 6600 ಕ್ವಿಂಟಾಲ್ ಮಾರಾಟವಾಗಿತ್ತು.

    ಮೊಳಕಾಲ್ಮೂರು ತಾಲೂಕಿನಲ್ಲಿ ಶೇಂಗಾ ಪ್ರಧಾನ ಬೆಳೆ. ಪ್ರತಿ ವರ್ಷ 12 ಸಾವಿರಕ್ಕೂ ಅಧಿಕ ರೈತರು 26,500 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡುತ್ತಾರೆ. ಇದಕ್ಕೆ ಕೊರತೆ ಆಗದಂತೆ ಕೃಷಿ ಇಲಾಖೆ ಅಧಿಕಾರಿ ಡಾ.ಜೆ.ಅಶೋಕ್ ಬೀಜ ನಿಗಮ ಮಂಡಳಿಗೆ 13 ಕ್ವಿಂಟಲ್ ಬೇಡಿಕೆ ಪಟ್ಟಿ ಸಲ್ಲಿಸಿದ್ದರು. ಆರಂಭದಲ್ಲಿ ಅಗತ್ಯ ಪ್ರಮಾಣದಲ್ಲಿ ಕಾಯಿ ದಾಸ್ತಾನಿಟ್ಟಿದ್ದರು.

    ಮೊಳಕಾಲ್ಮೂರು, ರಾಂಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಪಂಚಾಯಿತಿವಾರು ಜೂನ್ 3 ರಿಂದ ಟೋಕನ್ ವ್ಯವಸ್ಥೆಯಲ್ಲಿ ವಿತರಿಸುತ್ತಿದ್ದು, ಇನ್ನು 5 ಗ್ರಾಪಂ ಉಳಿದಿವೆ. ರೈತರು ಖರೀದಿಗೆ ಆಸಕ್ತಿ ತೋರದಿದ್ದರೆ ಒಂದು ಸಾವಿರ ಕ್ವಿಂಟಲ್ ದಾಟುವುದೋ ಇಲ್ಲವೋ ಎಂಬ ಅನುಮಾನವಿದೆ.

    ಕಳೆದ ವರ್ಷ ಶೇಂಗಾ ಬೆಳೆ ನಿರೀಕ್ಷಿತ ಫಲ ಕೊಡದ ಕಾರಣ ನಷ್ಟವೇ ಹೆಚ್ಚಾಗಿತ್ತು. ಪ್ರಸಕ್ತ ಸಾಲಿನಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ರೈತರ ಕೈಯಲ್ಲಿ ಹಣವಿಲ್ಲ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದನ್ನು ಮನಗಂಡು ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಕೊಟ್ಟು ರೈತರ ಹಿತ ಕಾಯಬೇಕು.
    ಬೆಳಗಲ್ ಈಶ್ವರಯ್ಯಸ್ವಾಮಿ, ಅಧ್ಯಕ್ಷ, ತಾಲೂಕು ರೈತ ಸಂಘ.
    ಬೇಡರಡ್ಡಿಹಳ್ಳಿ ಬಸವರಡ್ಡಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts