More

    ಕೆರೆ ನೀರು ಬಳಕೆಗೆ ಕಾಯುತ್ತಿರುವ ಮೊಳಕಾಲ್ಮೂರು ರೈತರು

    ಕೆ.ಕೆಂಚಪ್ಪ ಮೊಳಕಾಲ್ಮೂರು
    ತಾಲೂಕಿನಲ್ಲಿ ಈ ಬಾರಿ ಸುರಿದ ಉತ್ತಮ ಮಳೆಯಿಂದ ಜಲಮೂಲಗಳು ಬಹುತೇಕ ತುಂಬಿದ್ದು, ಕೃಷಿಗೆ ನೀರು ಬಳಸಿಕೊಳ್ಳಲು ಅಚ್ಚುಕಟ್ಟು ಪ್ರದೇಶಗಳ ರೈತರು ಜಿಲ್ಲಾಡಳಿತದ ಅನುಮತಿಗೆ ಕಾಯುತ್ತಿದ್ದಾರೆ.

    ಸತತ ಏಳೆಂಟು ವರ್ಷಗಳ ಕಾಲ ಮಳೆ ಅಭಾವದಿಂದ ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಆವರಿಸಿತ್ತು. ಜನ, ಜಾನುವಾರುಗಳ ಕುಡಿಯುವ ನೀರಿಗೂ ಕೂಡ ಕಷ್ಟವಾಗಿತ್ತು. ಈ ಕಾರಣಕ್ಕೆ ಜಿಲ್ಲಾಡಳಿತ ಕೃಷಿಗೆ ಕೆರೆ ಕಟ್ಟೆಗಳ ನೀರು ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಿತ್ತು. ಅಂದಿನಿಂದ ಈವರೆಗೆ ಕೆರೆಗಳ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಬಳಕೆ ಮಾಡಿಕೊಂಡಿರಲಿಲ್ಲ.

    ಬತ್ತಿ ಹೋಗಿದ್ದ ಕೆರೆ ಕಟ್ಟೆಗಳು, ಹಳ್ಳ, ಕೊಳ್ಳಗಳು ಈ ವರ್ಷ ತುಂಬಿ ಹರಿಯುತ್ತಿದ್ದು, ಎಲ್ಲಿ ನೋಡಿದರೂ ಜೀವಕಳೆ ಕಾಣಿಸುತ್ತಿದೆ. ರಂಗಯ್ಯನದುರ್ಗ ಜಲಾಶಯ ಸೇರಿ ಒಟ್ಟು 21 ಕೆರೆಗಳು ಬಹುತೇಕ ಭರ್ತಿಯಾಗಿದ್ದು, ಹೆಚ್ಚಾದ ನೀರು ಆಂಧ್ರ ಸೇರುತ್ತಿದೆ.

    ಅರ್ಧ ಟಿಎಂಸಿ ಅಡಿ ಸಾಮರ್ಥ್ಯವಿರುವ ರಂಗಯ್ಯನದುರ್ಗ ಜಲಾಶಯ 795 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತದೆ. ಜಲಾಶಯ ತುಂಬಲು ಐದಾರು ಅಡಿ ಬಾಕಿ ಇದೆ. ಪಕ್ಕುರ್ತಿ ಕೆರೆ ಬಳಿ 160 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ, ನಾಗಸಮುದ್ರ ಕೆರೆ 90, ಅಶೋಕಸಿದ್ದಾಪುರ ಕೆರೆ 85, ದೇವಸಮುದ್ರ 90, ಕೋನಸಾಗರ 33, ಭಟ್ರಹಳ್ಳಿ 65, ಚಿಕ್ಕನಹಳ್ಳಿ 60, ಗೌರಸಮುದ್ರ 70, ಹೊಸಹಳ್ಳಿ 55, ಮುತ್ತಿಗಾರಹಳ್ಳಿ 80, ಅಮುಕುಂದಿ 68, ಹಿರೆಕೇರಹಳ್ಳಿ 160, ತುಪ್ಪದಕನಹಳ್ಳಿ 85 ಒಟ್ಟು 1960 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ.

    ಜಿಪಂ ಇಂಜಿನಿಯರ್ ವಿಭಾಗದ ಸುಪರ್ದಿಯಲ್ಲಿರುವ ಮೊಳಕಾಲ್ಮೂರಿನ ಕೋತಲಗುಂದಿ ಕೃಷ್ಣರಾಜಪುರ, ಗುಂಡ್ಲೂರು, ಚಿಕ್ಕೋಬನಹಳ್ಳಿ, ಕಾಟನಾಯಕನಹಳ್ಳಿ, ಗುಂಡ್ಲೂರು ಚಿಕ್ಕೆರೆಗಳು ತುಂಬುವ ಹಂತದಲ್ಲಿವೆ.

    ಮುಂಗಾರಿನ ಆರಂಭದಿಂದ ಚಿನ್ನಹಗರಿ ಹಳ್ಳದಿಂದ ಹರಿಯುತ್ತಿರುವ ನೀರು ಆಂಧ್ರದ ಪಾಲಾಗುತ್ತಿದೆ. ಇದೇ ನೀರನ್ನು ಸಂಗ್ರಹಣೆ ಮಾಡಿಕೊಂಡರೆ ಹಳ್ಳದ ದಡದಲ್ಲಿರುವ ಸಾವಿರಾರು ರೈತರ ಬದುಕು ಹಸನಾಗಲಿದೆ. ಕೃಷಿಗೆ ನೀರು ಬಳಸಲು ಅಚ್ಚುಕಟ್ಟು ಪ್ರದೇಶದ ರೈತರಿಗೆ ಜಿಲ್ಲಾಡಳಿತದ ಆದೇಶ ಬೇಕಿದೆ.
    ಈಶ್ವರಗೆರೆಯಲ್ಲಿ 37 ಮಿಮೀ ಮಳೆ
    ಚಿತ್ರದುರ್ಗ: ಅ.13ರಂದು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಆಗಿದೆ. ಹಿರಿಯೂರು ತಾಲೂಕು ಈಶ್ವರಗೆರೆ 37.8, ಸೂಗೂರು 15.2, ಇಕ್ಕನೂರು 3.6, ಹೊಳಲ್ಕೆರೆ-2.2, ಬಿ.ದುರ್ಗ 17, ಎಚ್.ಡಿ.ಪುರ 9, ಚಿಕ್ಕಜಾಜೂರು 19.2, ಮೊಳಕಾಲ್ಮೂರು 2.5, ರಾಂಪುರ 19.3, ದೇವಸಮುದ್ರ 16.2, ಸಿರಿಗೆರೆ 3.4, ತುರುವನೂರಿನಲ್ಲಿ 5.6 ಮಿ.ಮೀ ಮಳೆಯಾಗಿದೆ.

    ತೀವ್ರ ಬರದಿಂದ ಅಂರ್ಜಲ ಕುಸಿದು ಕುಡಿವ ನೀರಿಗೂ ಹಾಹಾಕಾರ ಉಂಟಾಗಿತ್ತು. ಕೆರೆಗಳ ಅಚ್ಚುಕಟ್ಟು ಪ್ರದೇಶದ ರೈತಾಪಿ ವರ್ಗ ಕೂಡ ಕೆರೆ ನೀರಿನ ಬಳಕೆ ಮಾಡಿಕೊಂಡಿರಲಿಲ್ಲ. ಈಗ ವರುಣನ ಕೃಪೆಯಿಂದ ಕೆರೆಗಳು ತುಂಬಿವೆ. ಕೆರೆ ಏರಿ ಮತ್ತು ತೂಬುಗಳಲ್ಲಿ ಸೂರಿಕೆಯಾಗುತ್ತಿರುವ ನೀರನ್ನು ತಡೆಯುವ ಕೆಲಸವಾಗಬೇಕು. ಜನವರಿಯಲ್ಲಿ ಭತ್ತದ ಬದಲು ಅರೆ ನೀರಾವರಿ ಅಲ್ಪಾವಧಿ ಅವಕಾಶ ನೀಡಬೇಕು.
    ಲಕ್ಷ್ಮೀಪತಿ ತಾಲೂಕಾಧ್ಯಕ್ಷ, ಕೆರೆ ನೀರು ಬಳಕೆದಾರರ ಸಂಘ

    ಅಂತರ್ಜಲ ಹೆಚ್ಚಿಸಲು ಖಾತ್ರಿ ಯೋಜನೆಯಡಿ 363 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಜಲಾಮೃತದಡಿ ಮೂರು ದೊಡ್ಡ ಕಲ್ಯಾಣಿಗಳನ್ನು ನಿರ್ಮಿಸಿದ್ದು, ಅವು ತುಂಬಿವೆ. ಎರಡ್ಮೂರು ವರ್ಷ ಕುಡಿವ ನೀರಿನ ಸಮಸ್ಯೆ ನೀಗಲಿದೆ.
    ಪ್ರಕಾಶ್ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts