More

    ಮೋದಿ ಆಗಮನ, ಜಿಲ್ಲೆಯಲ್ಲಿ ಸಂಚಲನ; ನಾಳೆ ಗುಬ್ಬಿ ಎಚ್‌ಎಎಲ್ ಉದ್ಘಾಟನೆ

    ತುಮಕೂರು: ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನೆಗೆ ಫೆ.6ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಈ ಐತಿಹಾಸಿಕ ಕಾರ್ಯಕ್ರಮದ ಭಾಗವಾಗಲು 1 ಲಕ್ಷ ಜನ ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಖಾಕಿ ಭದ್ರಕೋಟೆ ನಿರ್ಮಿಸಲಾಗಿದೆ.

    ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನ 615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಎಚ್‌ಎಎಲ್ ಹೆಲಿಕಾಪ್ಟರ್ ಘಟಕವು ದೇಶಿ ನಿರ್ಮಿತ ಹೆಲಿಕಾಪ್ಟರ್ ಉತ್ಪಾದನೆ, ಬಿಡಿಭಾಗಗಳ ನಿರ್ಮಾಣ ಸೇರಿ ಯಾವುದೇ ರೀತಿಯ ರಿಪೇರಿ, ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ಒಂದೇ ಸೂರು ಇದಾಗಲಿದೆ.

    ಈ ಘಟಕದಿಂದ ನೇರ, ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಅಲ್ಲದೆ, ಸುತ್ತಮುತ್ತಲಿನ ಹಳ್ಳಿಗಳು ಸಿಎಸ್‌ಆರ್ ನಿಧಿಯಿಂದ ಅಭಿವೃದ್ಧಿಗೊಳ್ಳುವ ನಿರೀಕ್ಷೆ ಎಲ್ಲರದ್ದಾಗಿದೆ.

    ಎಚ್‌ಎಎಲ್ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸಿ ಇದರ ರಾಜಕೀಯ ಲಾಭ ಪಡೆಯಲು ರಾಜ್ಯ, ಜಿಲ್ಲಾ ಬಿಜೆಪಿ ಸಿದ್ಧತೆ ನಡೆಸಿದೆ. ಹಾಗಾಗಿ, ಜಿಲ್ಲೆ ಹೊರಜಿಲ್ಲೆಗಳಿಂದ 50 ಸಾವಿರ ಜನರನ್ನು ಕರೆತರಲು 1 ಸಾವಿರ ಬಸ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿ ತಯಾರಿ ಮಾಡಿಕೊಳ್ಳಲಾಗಿದೆ. ಇದಲ್ಲದೆ, ಸ್ವಂತ ವಾಹನ, ದ್ವಿಚಕ್ರವಾಹನಗಳಲ್ಲೂ ಸ್ವಯಂಪ್ರೇರಿತರಾಗಿ ಅಭೂತಪೂರ್ವದ ಭಾಗವಾಗಲು ಪಕ್ಷದ ಕಾರ್ಯಕರ್ತರು ಬರುವ ಸಾಧ್ಯತೆ ಇದ್ದು ಒಟ್ಟಾರೆ 1 ಲಕ್ಷ ಜನರು ಸೇರಲಿದ್ದಾರೆ.

    3 ಸಾವಿರ ಭದ್ರತಾ ಸಿಬ್ಬಂದಿ: ಐವರು ಪೊಲೀಸ್ ವರಿಷ್ಠಾಧಿಕಾರಿಗಳು, 14 ಡಿಎಸ್ಪಿ, 55 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 119 ಸಬ್ ಇನ್‌ಸ್ಪೆಕ್ಟರ್‌ಗಳು, 239 ಎಎಸ್‌ಐಗಳು, 1202 ಮುಖ್ಯಪೇದೆ/ ಪೇದೆಗಳು, 400 ಹೋಂ ಗಾರ್ಡ್‌ಗಳು ಹಾಗೂ 14 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕುಡಿ, 12 ಕೆಎಸ್‌ಆರ್‌ಪಿ ತುಕುಡಿಗಳು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ.

    150 ಎಕರೆನಲ್ಲಿ ಪಾರ್ಕಿಂಗ್: ಎಚ್‌ಎಎಲ್ ಘಟಕದ ಹಿಂಭಾಗದ ಗೇಟ್‌ಗೆ ಸಮೀಪದ ಮಾರಶೆಟ್ಟಿಹಳ್ಳಿ ರಸ್ತೆಯ ಕಡೆ 150 ಎಕರೆ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 1 ಸಾವಿರ ಬಸ್‌ಗಳು, ಇತರ ವಾಹನಗಳ ನಿಲುಗಡೆ ವ್ಯವಸ್ಥೆ ಇರಲಿದೆ. ಇನ್ನು ಎಚ್‌ಎಎಲ್ ಮುಖ್ಯದ್ವಾರದ ಮುಂಭಾಗಕ್ಕೆ ಬರುವ ಸೋಪನಹಳ್ಳಿ-ಯಲ್ಲಾಪುರ ಕಡೆಯೂ 6 ಸಾವಿರ ಕಾರು, ಜೀಪು, ಟೆಂಪೋ ಟ್ರಾವಲೆರ್‌ಗಳು, 5 ಸಾವಿರ ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

    ಸಂಜೆವರೆಗೂ ದಾಸೋಹ
    ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಎಲ್ಲರಿಗೂ ಬೆಳಗಿನಿಂದಲೇ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಉಪಹಾರಕ್ಕೆ ಚಿತ್ರಾನ್ನ ಇರಲಿದೆ. 11ರ ನಂತರ ಪಲಾವ್, ಮೊಸರಬಜ್ಜಿ, ಪಾಯಸ ಇರಲಿದೆ. ಮಾರಶೆಟ್ಟಿಹಳ್ಳಿ ಪಾರ್ಕಿಂಗ್ ಭಾಗದಲ್ಲಿ 64 ಕೌಂಟರ್, ಸೋಪನಹಳ್ಳಿ ಪಾರ್ಕಿಂಗ್ ಜಾಗದಲ್ಲಿ 24 ಕೌಂಟರ್ ತೆರೆಯಲಾಗಿದೆ. 300 ಬಾಣಸಿಗರು ತಯಾರಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts