More

    ಮೋದಿ ಬರ್ತ್‌ಡೇಗೆ ನೋಟಿನ ಡೈರಿ

    ಬಂಟ್ವಾಳ: ಅಪರೂಪದ ಫ್ಯಾನ್ಸಿ ನಂಬರ್ ನೋಟುಗಳ ಸಂಗ್ರಹದಲ್ಲಿ ಹೆಸರು ಮಾಡಿರುವ ‘ಕಲ್ಲಡ್ಕ ಮ್ಯೂಸಿಯಂ’ನ ಯಾಸೀರ್ ಕಲ್ಲಡ್ಕ ಅವರು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಅವರ ಜನ್ಮದಿನವನ್ನು ಪ್ರತಿನಿಧಿಸುವ ಸಂಖ್ಯೆಯ ನೋಟುಗಳನ್ನು ಪ್ರದರ್ಶಿಸಿ ವಿಶೇಷ ಮೆರುಗು ನೀಡಿದ್ದಾರೆ.

    17/09/1950 ಮೋದಿ ಜನ್ಮದಿನವಾಗಿದ್ದು, ಈ ಸಂಖ್ಯೆಯ ನೋಟಿನ ಜತೆಗೆ ಕಲೆಕ್ಷನ್ ಆಫ್ 100 ಬರ್ತ್ ಡೇಟ್ ನೋಟ್ಸ್ ಎನ್ನುವ ಡೈರಿಯನ್ನು ಯಾಸೀರ್ ಸಿದ್ಧಪಡಿಸಿದ್ದಾರೆ. ಮೋದಿ ಆಡಳಿತದಲ್ಲಿ ಚಲಾವಣೆಗೆ ಬಂದಿರುವ 20 ರೂ. ಹೊಸ ನೋಟಿನಲ್ಲಿ ಅವರ 100 ವರ್ಷದವರೆಗಿನ ಜನ್ಮದಿನಗಳು ಹೊಂದುವಂತೆ (17091951, 17091952, 17091953.. ಹೀಗೆ) ಆ ನೋಂದಣಿಯ 100 ನೋಟುಗಳನ್ನು ಸಂಗ್ರಹಿಸಿದ್ದಾರೆ. ಪುಟದಲ್ಲಿ 5 ನೋಟಿನಂತೆ 20 ಪುಟಗಳಲ್ಲಿ ನೋಟುಗಳನ್ನು ಜೋಡಿಸಿದ್ದು, ಮೋದಿ ಜೀವನದ ಪ್ರಮುಖ ಘಟ್ಟಗಳನ್ನೂ ದಾಖಲಿಸಲಾಗಿದೆ. ಮೋದಿ ಚುನಾವಣೆಯಲ್ಲಿ ಗೆಲುವು, ಮೋದಿ ಹವಾ, ಪ್ರಮಾಣ ವಚನಕ್ಕೆ ಸಂಬಂಧಿಸಿದ ಪತ್ರಿಕೆ ಸಹಿತ ಇತರ ಹಲವು ದಾಖಲೆಗಳನ್ನೂ ಯಾಸೀರ್ ಸಂಗ್ರಹಿಸಿದ್ದಾರೆ.

    ಅಪರೂಪದ ಮ್ಯೂಸಿಯಂ: ಕಲ್ಲಡ್ಕದಲ್ಲಿ ಮ್ಯೂಸಿಯಂನಲ್ಲಿ ಗತಕಾಲದ ಪಾತ್ರೆ, ದಿನಬಳಕೆಯ ವಸ್ತುಗಳು, ಬೆಂಕಿಪೊಟ್ಟಣ, ಸಾಫ್ಟ್ ಡ್ರಿಂಕ್ಸ್ ಬಾಟಲಿ, ಪತ್ರಿಕೆಗಳು, ಅಂಚೆಚೀಟಿ ಹೀಗೆ ಅಪರೂಪದ ವಸ್ತುಗಳ ಸಂಗ್ರಹವಿದೆ. ಲೋಕಲ್ ಸಾಫ್ಟ್ ಡ್ರಿಂಕ್ ಬಾಟಲಿಗಳು, ವಿವಿಧ ದೇಶಗಳ ಕುಡಿಯುವ ನೀರಿನ ಬಾಟಲಿಗಳು, ಮೌರ್ಯ, ಅಲುಪ, ಗಂಗ, ಕದಂಬ, ಪಲ್ಲವ, ಚೋಳ, ಕೆಳದಿ, ಟಿಪ್ಪು, ಮೈಸೂರಿನ ಒಡೆಯರು, ಮೊಘಲ್ ಹೀಗೆ ರಾಜಮಹಾರಾಜರ ಕಾಲದ ನಾಣ್ಯ, ನೋಟು, ಪರಿಕರಗಳು, ಅರ್ಧ ಆಣೆಯಿಂದ 10 ರೂವರೆಗಿನ ನಾಣ್ಯ, 1ರಿಂದ 2 ಸಾವಿರವರೆಗಿನ ನೋಟುಗಳು, ರಾಜ್ಯದ ಮುಖ್ಯಮಂತ್ರಿ, ದೇಶದ ಎಲ್ಲ ಪ್ರಧಾನಿಗಳು, ಅಮೆರಿಕ, ಭಾರತದ ಅಧ್ಯಕ್ಷರ ಸಹಿತ ಗಣ್ಯರ ಜನನ ದಿನಾಂಕ, ಗಣರಾಜ್ಯ ದಿನ, ಸ್ವಾತಂತ್ರ್ಯ ದಿನ, ವರ್ಷ ಇವುಗಳನ್ನು ತಿಳಿಸುವ ವಿವಿಧ ಮುಖಬೆಲೆಯ ನೋಟುಗಳು, ದೇಶ, ವಿದೇಶಗಳ ಪ್ಲಾಸ್ಟಿಕ್ ನೋಟುಗಳು ಯಾಸೀರ್ ಸಂಗ್ರಹದಲ್ಲಿದೆ.

    ನಮ್ಮ ದೇಶದ ಎಲ್ಲ ಪ್ರಧಾನಿಗಳ, ರಾಷ್ಟ್ರಪತಿಗಳ ಜನ್ಮ ದಿನಾಂಕವಿರುವ ನೋಟುಗಳ ಸಂಗ್ರಹ ನನ್ನಲ್ಲಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಸಂದರ್ಭ 100 ವರ್ಷದ ಪರಿಕಲ್ಪನೆಯಲ್ಲಿ ಡೈರಿ ಸಿದ್ಧಪಡಿಸಿದ್ದೇನೆ. ಈ ವರ್ಷ 71 ಪೂರೈಸುತ್ತಿರುವ ಪ್ರಧಾನಿ ಮೋದಿಯವರ ಬದುಕಿನ ಪ್ರಮುಖ ಘಟ್ಟಗಳನ್ನು ರಾಜಕೀಯೇತರವಾಗಿ ದಾಖಲಿಸಲು ಪ್ರಯತ್ನಿಸಿದ್ದೇನೆ.
    -ಯಾಸೀರ್ ಕಲ್ಲಡ್ಕ, ವಸ್ತು ಸಂಗ್ರಾಹಕ, ಕಲ್ಲಡ್ಕ ಮ್ಯೂಸಿಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts