More

    ಗುಜರಿ ಸೈಕಲ್‌ನಲ್ಲಿ ಎಡೆಕುಂಟೆ ಹೊಡೆದ ಯುವಕ

    ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ಆಧುನಿಕತೆ ಬೆಳೆದಂತೆಲ್ಲಾ ಕೃಷಿ ಚಟುವಟಿಕೆಗಳಲ್ಲಿ ಹೊಸ ತಂತ್ರಜ್ಞಾನ ಬಳಕೆ ಆಗುತ್ತಿವೆ. ಬೆಳೆ ನಾಟಿ ಮಾಡಲು, ಕಟಾವಿನ ಕಾರ್ಯ ಚಟುವಟಿಕೆಗಳಿಗೆ ಕಾರ್ಮಿಕರ ಬಳಕೆ ಕಡಿಮೆಯಾಗುತ್ತಿದೆ.

    ಇನ್ನು ಹೊಲ ಉಳುಮೆಗೆ ಜಾನುವಾರಗಳ ಕೊರತೆ ಎದುರಿಸುತ್ತಿರುವ ರೈತಾಪಿ ವರ್ಗ, ಯಂತ್ರಗಳ ಮೊರೆ ಹೋಗಿರುವುದು ಕಾಣುತ್ತದೆ.

    ಒಟ್ಟಾರೆ ನೂರು ಜನ ಕೂಲಿಕಾರರು ಮಾಡುವ ಕೃಷಿ ಕೆಲಸವನ್ನು ಒಂದೇ ದಿನದಲ್ಲಿ ಯಂತ್ರದ ಸಹಾಯ ಬಳಕೆಯಲ್ಲಿ ಪೂರೈಸಿಕೊಳ್ಳುವ ಜಾಣ್ಮೆ ರೈತರು ಕಂಡುಕೊಂಡಿದ್ದಾರೆ.

    ಆದರೆ, ಇಂತಹ ವೈವಿದ್ಯಮಯ ಬದಲಾವಣೆಯಲ್ಲಿ ಬಡತನದ ಕೆಲ ರೈತ ಕುಟುಂಬ ತನ್ನ ಜಮೀನಿನ ಉಳುಮೆಗೆ ಮಕ್ಕಳಿಗೆ ನೊಗ ಬಾರ ಹೊರೆಸಿ ಬೇಸಾಯ ಮಾಡುವ ಸ್ಥಿತಿಯೂ ಇದೆ.

    ಇದಕ್ಕೆ ಪೂರಕ ಎಂಬುವಂತೆ ಇಲ್ಲೊಬ್ಬ ರೈತ ತನ್ನ ಜಮೀನಿನ ಕೃಷಿ ಕಾರ್ಯಕ್ಕೆ ಕಾರ್ಮಿಕರನ್ನು ಮತ್ತು ಜಾನುವಾರುಗಳ ಬೇಸಾಯಕ್ಕೆ ಶಕ್ತಿ ಇಲ್ಲದೆ ತನ್ನ ಮನೆಯಲ್ಲಿನ 20 ವರ್ಷದ ಹಳೆ ಸೈಕಲ್‌ನ್ನು ಎಡೆಕುಂಟೆ ಹೊಡೆಯುವ ಸಾಧನವಾಗಿ ರೂಪಿಸಿಕೊಂಡಿದ್ದಾನೆ.

    ತಾಲೂಕಿನ ಸಾಣೀಕೆರೆ ಗ್ರಾಮದ ರೈತ ಎಸ್.ಜೆ. ಶಿವರಾಜ್, ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆಗೆ ಕಳೆದ ಜು.1ರಂದು ಶೇಂಗಾ, ಇನ್ನು ಎರಡು ಎಕರೆಗೆ ತೊಗರಿ ಬಿತ್ತನೆ ಮಾಡಿದ್ದಾನೆ.

    ಶೇಂಗಾ ಗಿಡಗಳಲ್ಲಿ ಎಡೆ ಹೊಡೆಯಲು ಒಂದು ದಿನದ ದನಗಳ ಬೇಸಾಯಕ್ಕೆ 4 ಸಾವಿರ ಬಾಡಿಗೆ ಕೊಡುವ ಸ್ಥಿತಿ ಇಲ್ಲದ ಶಿವರಾಜು, ತನ್ನ ಮನೆಯಲ್ಲಿನ

    ಹಳೆಯ ಸೈಕಲ್ಲಿನ ಅರ್ಧ ಭಾಗವನ್ನು ಬಳಕೆ ಮಾಡಿಕೊಂಡು ಇದಕ್ಕೆ ಕುಂಟೆ ಜೋಡಣೆ ಮಾಡಿ, ಮುಂದಿನ ಸೈಕಲ್ ಚಕ್ರ ಸುಲಭವಾಗಿ ಉರುಳಿದಂತೆ ಸರಾಗವಾಗಿ ಕಳೆ ನಾಶ ಮಾಡುವ ರೀತಿಯಲ್ಲಿ ಎಡೆಕುಂಟೆ ಹೊಡೆಯುವುದನ್ನು ರೂಪಿಸಿಕೊಂಡಿದ್ದಾನೆ.

    ಹೆಚ್ಚು ಶ್ರಮ ಇಲ್ಲದೆ ಮತ್ತೆ ಸಂಪೂರ್ಣ ಕಳೆ ನಾಶ ಆಗುವ ರೀತಿಯಲ್ಲಿ ಸೈಕಲ್ ಬಳಸಿ ದಿನಕ್ಕೆ ಒಂದು ಎಕರೆಯಂತೆ 4 ದಿನದಲ್ಲಿ ಶೇಂಗಾ ಮತ್ತು ತೊಗರಿ ಬೆಳೆಯಲ್ಲಿ ಎಡೆಕುಂಟೆ ಹೊಡೆದಿದ್ದಾರೆ.

    ರಾಜ್ಯ ಹೆದ್ದಾರಿ ಸಮೀಪ ಶಿವರಾಜ್ ಜಮೀನಿನಲ್ಲಿ ಸೈಕಲ್ ಬಳಕೆ ಮಾಡಿ ಎಡೆಕುಂಟೆ ಹೊಡೆಯುವುದನ್ನು ಕಾರು, ಬೈಕ್ ಸವಾರರು ವಾಹನ ನಿಲ್ಲಿಸಿ ವೀಕ್ಷಿಸುತ್ತಿದ್ದಾರೆ.

    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ರೈತ ಶಿವರಾಜ್, ನಮ್ಮ ಸಂಬಂಧಿಕರ ಊರಾದ ಆಂಧ್ರ ಪ್ರದೇಶದ ರಾಯಪುರಕ್ಕೆ ಹೋಗಿದ್ದ ವೇಳೆ ಈ ರೀತಿಯ ಸೈಕಲ್ ಬಳಕೆ ಬೇಸಾಯ ನೋಡಿಕೊಂಡಿದ್ದೆ.

    ಊರಿನ ಕೂಲಿ ಲೆಕ್ಕಾಚಾರ ಬಹಳ ದೊಡ್ಡ ಮಟ್ಟಕ್ಕಿದೆ. ಒಂದು ದಿನದ ಒಬ್ಬ ಕೂಲಿ ಆಳಿಗೆ 400, ಇನ್ನು ಎತ್ತಿನ ಬೇಸಾಯಕ್ಕೆ 3500 ರೂ ಕೇಳುತ್ತಾರೆ.
    ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬೇಸಾಯ ಕಷ್ಟವಾಗಿತ್ತು.

    ಆದರೂ, ಬಿತ್ತನೆ ಶೇಂಗಾ ಬೆಳೆ ಉಳಿಸಿಕೊಳ್ಳಲು ಹಳೆಯ ಸೈಕಲ್ ಬಳಸಿ ಎರಡೆರೆಡು ಬಾರಿ ಕಳೆ ಇಲ್ಲದಂತೆ ಎಡೆಕುಂಟೆ ಸಲೀಸಾಗಿ ಹೊಡೆದುಕೊಂಡಿದ್ದೇನೆ ಎಂದಿದ್ದಾರೆ.

    ಸಂಕೋಚಪಡದ ರೈತರು ಮನೆಯಲ್ಲಿನ ಅನುಪಯುಕ್ತ ಸೈಕಲ್ ಬಳಸಿ ಸುಲಭವಾಗಿ ಜಮೀನಿನ ಕೆಲಸ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts