More

    ಮಾದರಿಯಾದ ಚೆನ್ನಂಗಿ ಸರ್ಕಾರಿ ಶಾಲೆ

    ಸಿದ್ದಾಪುರ: ಶಿಕ್ಷಣ ಕಲಿಕೆಗೆ ಆಸಕ್ತಿ ತೋರಿ ಸರ್ಕಾರಿ ಶಾಲೆಗೆ ತಪ್ಪದೆ ಹಾಜರಾಗುವ ಮೂಲಕ ಕಲಿಕೆಯಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಶಿಕ್ಷಕರ ಮಾರ್ಗದರ್ಶನಕ್ಕೆ ವಿದ್ಯಾರ್ಥಿಗಳು ಸಾಥ್ ನೀಡಿದ್ದು, ಮಾದರಿ ಶಾಲೆಯಾಗಿ ಹೊರಹೊಮ್ಮಿದ ಚೆನ್ನಂಗಿ ಸರ್ಕಾರಿ ಶಾಲೆಯ ಬಗ್ಗೆ ಅಧಿಕಾರಿಗಳು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶೇ.90ರಷ್ಟು ಆದಿವಾಸಿ ಕುಟುಂಬಕ್ಕೆ ಸೇರಿದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಿನನಿತ್ಯ ಕಾಡುಪ್ರಾಣಿಗಳ ಭಯದ ನಡುವೆಯೂ ಶಾಲೆಗೆ ತೆರಳಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಪ್ರಸಕ್ತ 42 ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಪ್ರಾರಂಭದಲ್ಲಿ 1ರಿಂದ 4ನೇ ತರಗತಿಯವರೆಗಿದ್ದ ಶಿಕ್ಷಣ ಇದೀಗ 7ನೇ ತರಗತಿವರೆಗೆ ಏರಿಕೆಯಾಗಿದೆ.

    ಒಂದು ಎಕರೆ ಸುತ್ತಳತೆ ವಿಸ್ತೀರ್ಣದ ಜಾಗದಲ್ಲಿ 1956ರಲ್ಲಿ ಸರ್ಕಾರಿ ಶಾಲೆ ಪ್ರಾರಂಭಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆ, ಸಮಾಜಸೇವೆ ಮತ್ತು ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಶಿಕ್ಷಣದಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಕೆಲವೊಮ್ಮೆ ಶಿಕ್ಷಕರೇ ಹುಡುಕಿಕೊಂಡು ಹಾಡಿಗೆ ತೆರಳಿ ಪಾಲಕರ ಮನವೊಲಿಸಿ ಶಾಲೆಗೆ ಕರೆತರುತ್ತಿದ್ದಾರೆ. ದಾನಿಗಳು ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಕೈಜೋಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್, ಮೂಲ ಸಾಮರ್ಥ್ಯದ ಕಲಿಕೆ, ವೃತ್ತಿಶಿಕ್ಷಣ, ಪರಿಸರ ಜಾಗೃತಿ, ಸಂಗೀತ, ಕ್ರೀಡೆ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, ಮಕ್ಕಳ ಹಾಜರಾತಿ ಹೆಚ್ಚಿಸುವಲ್ಲಿ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಾರೆ.

    ಅಚ್ಚ ಹಸಿರಿನಿಂದ ಕೂಡಿರುವ ಪರಿಸರದಲ್ಲಿ ಶಾಲಾ ಕಟ್ಟಡವಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ವರ್ಣ ರಂಜಿತ ಕಲಾಕೃತಿಗಳು ಹಾಗೂ ಅಕ್ಷರಮಾಲೆಗಳು ಪಾಲಕರು ಹಾಗೂ ಮಕ್ಕಳ ಆಕರ್ಷಿಸುತ್ತಿವೆ. ಶಾಲಾ ಆವರಣದಲ್ಲಿ ಅಲಂಕಾರಿಕ ಹೂವಿನ ಗಿಡಗಳು ನೋಡುಗರ ಗಮನ ಸೆಳೆಯುತ್ತವೆ.
    ಡಿಸೆಂಬರ್‌ನಲ್ಲಿ ಶಾಲಾ ಊರ ಹಬ್ಬ ಆಚರಣೆಗೆ ಸಿದ್ಧತೆ ಕೈಗೊಂಡಿದ್ದಾರೆ. ಹಳೆಯ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಒಗ್ಗೂಡಿ 64 ವರ್ಷ ಪೂರೈಸಿದ ಶಾಲೆಯಲ್ಲಿ ಮತ್ತಷ್ಟು ದಾಖಲಾತಿ ಹೆಚ್ಚಿಸುವ ಮೂಲಕ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಡಿಸೆಂಬರ್‌ನಲ್ಲಿ ಅದ್ದೂರಿ ಶಾಲಾ ಊರಿನ ಹಬ್ಬವಾಗಿ ಆಚರಣೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕಿ ಕೆ.ಕೆ.ಸುಶಾ ತಿಳಿಸಿದ್ದಾರೆ.

    ವಿರಾಜಪೇಟೆ ಕ್ಷೇತ್ರಶಿಕ್ಷಣಾಧಿಕಾರಿ ಪ್ರಕಾಶ್ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಮಾರ್ಗದರ್ಶನ, ಮಕ್ಕಳ ಕಲಿಕೆಯ ಆಸಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts