More

  ರೋಗ ಬರದಂತೆ ಕ್ರಮವಹಿಸಲು ಆರೋಗ್ಯ, ಪುರಸಭೆ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಲಿಂಗೇಶ್ ಸೂಚನೆ

  ಬೇಲೂರು: ಸಾಂಕ್ರಾಮಿಕ ರೋಗಗಳು ಹರಡಿದ ಸಂದರ್ಭ ಕ್ರಿಮಿನಾಶಕ ಸಿಂಪಡಿಸುವುದಕ್ಕಿಂತ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿ ರೋಗಗಳೇ ಬಾರದಂತೆ ಆರೋಗ್ಯ ಮತ್ತು ಪುರಸಭೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

  ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಬೇಸಿಗೆ ಸಂದರ್ಭ ತಾಲೂಕಿನಾದ್ಯಂತ ಸಾಂಕ್ರಾಮಿಕ ರೋಗಗಳ ಕಾಟಕ್ಕೆ ಜನರು ಬೇಸತ್ತು ಹೋಗಿದ್ದರು. ಆದರೆ ಈ ಬಾರಿ ಅದು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ತಿಪ್ಪೆ ಗುಂಡಿಗಳಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಅವುಗಳನ್ನು ಮೊದಲು ತೆರವುಗೊಳಿಸಬೇಕು ಎಂದರು.

  ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿದ್ದರೆ ಮತ್ತು ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡಬೇಕು. ಒತ್ತ್ತುವರಿದಾರರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಮುಖ್ಯಾಧಿಕಾರಿ ಮಂಜುನಾಥ್‌ಗೆ ಸೂಚಿಸಿದರು.

  ಜಿಪಂ ಸದಸ್ಯ ಸಯ್ಯದ್ ತೌಫಿಕ್ ಮಾತನಾಡಿ, ರೈತರು ಕೃಷಿ ಇಲಾಖೆಯ ಯಂತ್ರೋಪಕರಣಗಳನ್ನು ಖರೀದಿಸಲು ಬಂದರೆ ಖಾಸಗಿ ಅಂಗಡಿಗಳಿಗೆ ಕಳುಹಿಸುತ್ತಾರೆ ಎಂಬ ಆರೋಪ ಇದೆ ಎಂದರು.

  ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, 2017ನೇ ಸಾಲಿನಲ್ಲಿ ಕೃಷಿ ಹೊಂಡ ಮಾಡಿಸಿದ ರೈತರಿಗೆ ಇನ್ನೂ ಪೈಪ್‌ಗಳನ್ನು ಏಕೆ ಕೊಟ್ಟಿಲ್ಲ ? ರೈತರಿಗೆ ಕಂಪನಿಯವರು ಇಂತಹ ಯಂತ್ರೋಪಕರಣವನ್ನೇ ಕೊಳ್ಳಬೇಕು ಎಂದು ಒತ್ತಡ ಹಾಕಬಾರದು. ಇಲಾಖೆಯಡಿ ದೊರೆಯುವ ಸವಲತ್ತ್ತುಗಳ ಬಗ್ಗೆ ತಿಳಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

  ಜಿಪಂ ಸದಸ್ಯೆ ಲತಾ ದಿಲೀಪ್‌ಕುಮಾರ್ ಮಾತನಾಡಿ, ಸರ್ಕಾರ ರಾಗಿಯನ್ನು ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ. ಆದರೆ ರಾಗಿ ಬೆಳೆದ ರೈತರ ಪಹಣಿಯಲ್ಲಿ ಬೇರೆ ಬೆಳೆ ಬರುತ್ತಿರುವುದರಿಂದ ತೊಂದರೆಯಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ರಾಗಿ ಬೆಳೆದಿರುವ ಬಗ್ಗೆ ಸರ್ಟಿಫಿಕೇಟ್ ಕೊಟ್ಟಲ್ಲಿ ಅನುಕೂಲವಾಗುತ್ತದೆ ಎಂದರು.

  ಸರ್ವೇ ಮತ್ತು ಕಂದಾಯ ಇಲಾಖೆ ನಡುವೆ ಹೊಂದಾಣಿಕೆ ಕೊರತೆಯಿಂದ ರೈತರು, ಸಾರ್ವಜನಿಕರು ಪರದಾಡುವಂತಾಗಿದೆ. ಎರಡೂ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಕಚೇರಿಗೆ ಬರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

  ಜಿಪಂ ಸದಸ್ಯ ಸಯ್ಯದ್ ತೌಫಿಕ್ ಮಾತನಾಡಿ, ಸಮರ್ಪಕ ದಾಖಲಾತಿಗಳಿದ್ದರೂ ಜಮೀನಿನ ಸರ್ವೇ ಮಾಡಿಸಲು ಒಂದು ವರ್ಷ ಎಂಟು ತಿಂಗಳು ಕಾಯುವ ಸ್ಥಿತಿ ತಾಲೂಕಿನಲ್ಲಿದೆ. ರೈತರು ನಿತ್ಯವೂ ಅಲೆಯುವಂತಾಗಿದೆ ಹೇಳಿದರು.
  ತಹಸೀಲ್ದಾರ್ ಎನ್.ವಿ.ನಟೇಶ್ ಮಾತನಾಡಿ, ಸರ್ವೇ ಮಾಡಿಸುವುದಕ್ಕೆ ಇಲಾಖೆಯಲ್ಲಿ ಸರಿಯಾದ ಆರ್‌ಟಿಸಿ ಇಲ್ಲದ್ದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ನಮ್ಮೊಂದಿಗೆ ವಾರಕ್ಕೊಮ್ಮೆ ಇಲಾಖೆ ಕಮಿಷನರ್ ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗೆ ನಾವು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಕೆಲಸ ಮಾಡಿಸುತ್ತಿದ್ದೇವೆ ಎಂದರು.

  ಇದೇ ಸಂದರ್ಭ ಆರೋಗ್ಯ ಇಲಾಖೆಯಿಂದ ಪೋಲಿಯೋ ಲಸಿಕೆ ಹಾಕಿಸುವ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ತಾಪಂ ಅಧ್ಯಕ್ಷ ರಂಗೇಗೌಡ, ಉಪಾಧ್ಯಕ್ಷೆ ಜಮುನಾ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಜಿಪಂ ಸದಸ್ಯರಾದ ಲತಾ ದಿಲೀಪ್‌ಕುಮಾರ್, ಲತಾ ಮಂಜೇಶ್ವರಿ, ಇಒ ರವಿಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

   ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ: ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ನೇರವಾಗಿ ವೈನ್‌ಶಾಪ್‌ನವರೇ ದಿನಸಿ ಅಂಗಡಿಗಳಿಗೆ ವಾಹನಗಳಲ್ಲಿ ತೆರಳಿ ಮದ್ಯ ಕೊಡುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ಮೊದಲು ತಡೆಗಟ್ಟಿ ಎಂದು ಶಾಸಕ ಕೆ.ಎಸ್.ಲಿಂಗೇಶ್ ಅಬಕಾರಿ ಅಧಿಕಾರಿಗೆ ಸೂಚಿಸಿದರು.

  ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಬೇಲೂರು ತಾಲೂಕು ಪ್ರಥಮ ಅಥವಾ ನಂತರದ ಸ್ಥಾನದಲ್ಲಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಇಒ ಲೋಕೇಶ್‌ಗೆ ಸೂಚಿಸಿದರು.

   ಮಾತಿನ ಚಕಮಕಿ: ಸಭೆಯಲ್ಲಿ ತಾಲೂಕಿನ ಐದಳ್ಳ ವಲಯ ಅರಣ್ಯ ಪ್ರದೇಶದ ಸರ್ವೇ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ, ಎತ್ತಿನ ಹೊಳೆ ಯೋಜನೆ ಇಂಜಿನಿಯರ್ ಹಾಗೂ ವಲಯ ಅರಣ್ಯಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು.

  ಎತ್ತಿನ ಹೊಳೆ ಯೋಜನೆಯವರು ಅನುಮತಿ ಇಲ್ಲದೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಮಾಡಿರುವುದು ತಪ್ಪು. ನಿಮ್ಮ ಮೇಲೆ ಕೇಸು ದಾಖಲಿಸಬಹುದಿತ್ತು ಎಂದು ವಲಯ ಅರಣ್ಯಾಧಿಕಾರಿ ಎತ್ತಿನಹೊಳೆ ಇಂಜಿನಿಯರ್ ರಮೇಶ್‌ಗೆ ಹೇಳಿದರು.

  ಈ ಸಂದರ್ಭ ಶಾಸಕ ಕೆ.ಎಸ್.ಲಿಂಗೇಶ್ ಮಧ್ಯ ಪ್ರವೇಶಿಸಿ, ಈ ಬಗ್ಗೆ ಎರಡು ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ನಂತರ ಜಂಟಿ ಸರ್ವೇ ಮೂಲಕ ಸಮಸ್ಯೆ ಇತ್ಯರ್ಥಪಡಿಸೋಣ ಎಂದು ಸಮಾಧಾನಪಡಿಸಿದರು.

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts