More

    ರಾಮನಗರದಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

    ರಾಮನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಎಪಿಎಂಸಿ, ಭೂ ಸುಧಾರಣೆ, ಕಾರ್ವಿುಕ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರನ್ನು ಮತ್ತು ಕಾರ್ವಿುಕರನ್ನು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಆರೋಪಿಸಿ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ರಾಜ್ಯ ಬಂದ್​ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ ಬಿಸಿಲೇರುತ್ತಿದ್ದಂತೆ ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿತು. ಬೆಳಗ್ಗೆ 6ರಿಂದ ಸಂಜೆ 6ವರೆಗೆ ಬಂದ್ ಸಮಯ ನಿಗದಿಯಾಗಿತ್ತಾದರೂ ರಾಮನಗರದಲ್ಲಿ 9 ಗಂಟೆ ನಂತರವೇ ಬಂದ್ ವಾತಾವರಣ ಆರಂಭಗೊಂಡಿತು. ನಗರದ ಎಪಿಎಂಸಿ ಪ್ರಾಂಗಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಗರದ ಪ್ರಮುಖ ರಸ್ತೆಯ ಅಂಗಡಿ ಮುಂಗಟ್ಟು ಬಾಗಿಲು ಬಂದ್ ಮಾಡಿ ಬಂದ್​ಗೆ ಬೆಂಬಲ ಸೂಚಿಸಿದವು.

    ಕರೊನಾ ಹಿನ್ನೆಲೆಯಲ್ಲಿ ಪ್ರಮುಖ ಕೇಂದ್ರಗಳಿಗೆ ಜಿಲ್ಲಾ ಕೇಂದ್ರದಿಂದ ಬಸ್​ಗಳನ್ನು ಬಿಡಲಾಗಿದ್ದು ಈ ಬಸ್​ಗಳು ಬೆಳಗ್ಗೆ 11 ಗಂಟೆವರೆಗೆ ರಸ್ತೆಗೆ ಇಳಿಯಲಿಲ್ಲವಾದರೂ ನಂತರ ಎಂದಿನಂತೆ ಸಂಚರಿಸಿದವು. ಜಿಲ್ಲೆಯ ಮಾರುಕಟ್ಟೆಗಳಲ್ಲಿ ವಹಿವಾಟು ಎಂದಿನಂತೆ ನಡೆದವು. ಆಟೋಗಳ ಸಂಚಾರ ಸಾಮಾನ್ಯವಾಗಿತ್ತು. ಆಸ್ಪತ್ರೆ, ಮೆಡಿಕಲ್ ಶಾಪ್​ಗಳು ತೆರೆದಿದ್ದವು.

    ಉದ್ಯಮಿಗಳ ಪರವಾಗಿ ಸರ್ಕಾರ

    ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಕರೊನಾ ಸಂದರ್ಭದಲ್ಲಿ ಹಲವಾರು ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು ಕಿಡಿಕಾರಿದರು.

    ವಿವಿಧ ಸಂಘಟನೆಗಳು ಕಾರ್ಯಕರ್ತರು ನಗರದ ಎಪಿಎಂಸಿ ಸಭಾಂಗಣದಿಂದ ಐಜೂರು ವೃತ್ತದವರೆಗು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೊಷಣೆ ಕೂಗಿ, ಮಾನವ ಸರಪಳಿ ನಿರ್ವಿುಸಿ ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ, ಸ್ವಾಧೀನ ಕಾಯ್ದೆ, ವಿದ್ಯುತ್ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ವಿುಕ ಕಾನೂನು ಹೀಗೆ ಎಲ್ಲವನ್ನೂ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಯಾವ ಕಾಯ್ದೆಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ಮಧ್ಯೆ ಚರ್ಚೆ ಆಗಿ, ಪ್ರಜಾ ಪ್ರತಿನಿಧಿಗಳಿರುವ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಚರ್ಚೆ ಆಗಿ ತಿದ್ದುಪಡಿ ಆಗಬೇಕಿತ್ತೋ, ಆ ಕೆಲಸ ಯಾವುದೂ ಆಗಲಿಲ್ಲಿ. ಯಾರೋ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅವಕಾಶ ಮಾಡಿಕೊಡಲು ಈ ಕೆಲಸ ಮಾಡಲಾಗಿದ್ದು, ರೈತರ ಸರ್ವ ನಾಶಕ್ಕೆ ಕಾರಣವಾಗುವ ಈ ಕಾನೂನುಗಳ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ ಮಾತನಾಡಿ, ರೈತ ಕುಲಕ್ಕೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ.ರವಿ, ಕರುನಾಡ ಸೇನೆಯ ಐಜೂರು ಜಗದೀಶ್, ಜಯಕುಮಾರ್ ಕನ್ನಡ ಜನಮನ ವೇದಿಕೆ ಅಧ್ಯಕ್ಷ ಕನ್ನಡ ರಾಜು, ರೈತ ಸಂಘದ ತುಂಬೇನಹಳ್ಳಿ ಶಿವಕುಮಾರ್, ಶಿವುಗೌಡ, ಆಶಾ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts