More

    ಅಸ್ಪೃಶ್ಯತೆ ಆಚರಣೆ ಸಹಿಸುವುದಿಲ್ಲ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

    ಚಿಕ್ಕನಾಯಕನಹಳ್ಳಿ : ಸಂವಿಧಾನದ ಪ್ರಕಾರ ಕಾನೂನಿನಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ. ಹಾಗೇನಾದರೂ ತಾಲೂಕಿನಲ್ಲಿ ಅನಿಷ್ಟ ಪದ್ಧತಿ ಕಂಡುಬಂದಲ್ಲಿ ಲಿಖಿತದೂರು ನೀಡಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಪೊಲೀಸರು ಹಾಗೂ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ತಾಲೂಕು ಮಟ್ಟದ ಹಿತರಕ್ಷಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳಲ್ಲಿ ಎಸ್‌ಸಿ, ಎಸ್‌ಟಿ ಜನಾಂಗಗಳ ಶೇ.23, 24 ಅನುದಾನಗಳು ಸರಿಯಾಗಿ ಬಳಕೆಯಾಗಬೇಕು. ದಲಿತರು ಯಾವುದೇ ಸಮಸ್ಯೆಗಳಿದ್ದರೂ ಸಭೆಯಲ್ಲಿ ಗಮನಕ್ಕೆ ತಂದರೆ ಶೀಘ್ರ ಪರಿಹರಿಸಲು ಸಹಕಾರಿಯಾಗುತ್ತದೆ ಎಂದರು.

    ಪುರಸಭೆಯಲ್ಲಿ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಶೌಚಗುಂಡಿ ಸ್ವಚ್ಛಗೊಳಿಸಲು ದಲಿತ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ. ಪಟ್ಟಣದ ಖಾಸಗಿ ಆಸ್ಪತ್ರೆಯಾದ ಸಾಯಿಗಂಗಾ ಆಸ್ಪತ್ರೆಯಲ್ಲಿ ಚಿಕ್ಕಪುಟ್ಟ ಚಿಕಿತ್ಸೆಗಳಿಗೂ ಹೆಚ್ಚಿನ ಹಣ ವಸೂಲಿ ವಾಡುತ್ತಿದ್ದಾರೆ ಎಂದು ದಲಿತ ಮುಖಂಡ ಲಿಂಗದೇವರು ಆರೋಪ ಮಾಡಿದರು. ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಇತ್ತೀಚೆಗೆ ನೇಮಕಗೊಂಡಿರುವ ನೌಕರರಿಗೆ ಸಂಬಳ ನೀಡಬೇಕಾಗಿದೆ. ಹಣಕಾಸು ಕೊರತೆಯಿಂದ ಸಂಬಳ ನೀಡುವುದು ತಡವಾಗಿದೆ ಎಂದರು.

    ಶೌಚಗೃಹದ ಗುಂಡಿ ಸ್ವಚ್ಛಗೊಳಿಸಲು ದಲಿತ ಯುವಕರನ್ನು ಬಳಸಿಕೊಳ್ಳುವುದು ಕಂಡುಬಂದಲ್ಲಿ ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಚಂದನ್‌ಕುಮಾರ್ ಹೇಳಿದರು. ಸಾಯಿಗಂಗಾ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯರ ವ್ಯವಸ್ಥೆ ಇಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಪರೀಶಿಲನೆ ನಡೆಸಿ ಆಸ್ಪತ್ರೆ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗೆ ಸಚಿವ ಮಾಧುಸ್ವಾಮಿ ಸೂಚಿಸಿದರು.

    ಕಾತ್ರಿಕೆಹಾಳ್ ಸ್ಮಶಾನ ಒತ್ತುವರಿ ತೆರವುಗೊಳಿಸಬೇಕು ಎಂದು ಮುಖಂಡ ಗೋವಿಂದರಾಜು ಒತ್ತಾಯ ಮಾಡಿದಾಗ ಪ್ರತಿಕ್ರಿಯಿಸಿದ ತಹಸೀಲ್ದಾರ್ ತೇಜಸ್ವಿನಿ, ಸ್ಥಳ ಪರಿಶೀಲಿಸಿದ್ದು, 20 ಗುಂಟೆ ಜಾಗ ಎಲ್ಲೂ ಒತ್ತುವರಿಯಾಗಿಲ್ಲ. ಅದನ್ನು ಗ್ರಾಪಂ ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು. ದಲಿತ ಮುಖಂಡ ಮಲ್ಲಿಕಾರ್ಜುನ್ ಎಸ್‌ಸಿಪಿ ಕಾಮಗಾರಿಯನ್ನು ಪುರಸಭೆಯ ವ್ಯಾಪ್ತಿಯಲ್ಲಿ ಸವರ್ಣೀಯರ ರಸ್ತೆಯಲ್ಲಿ ವಾಡಿದ್ದಾರೆ. ಅಲ್ಲಿ ಯಾರೂ ಎಸ್‌ಸಿಗಳಿಲ್ಲ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಅದು ಈ ಹಿಂದೆ 2015ರಲ್ಲಿ ನಡೆದಿದ್ದು, ಅದರ ಬಗ್ಗೆ ವಾಹಿತಿ ಇಲ್ಲ ಎಂದರು.

    ನಿವೇಶನ ನೀಡಿ : ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನಿವೇಶನರಹಿತರಿಗೆ ನಿವೇಶನ ನೀಡಲು ಹಾಗೂ ಸ್ಮಶಾನಕ್ಕೆ ನೀಡಲು ಸರ್ಕಾರಿ ಜಾಗಗಳನ್ನು ಗುರುತಿಸಿ ವಾಹಿತಿ ನೀಡುವಂತೆ ಸಚಿವ ಮಾಧುಸ್ವಾಮಿ ತಹಸೀಲ್ದಾರ್‌ಗೆ ಸೂಚಿಸಿದರು. ಈ ವೇಳೆ ಉತ್ತರಿಸಿದ ತಹಸೀಲ್ದಾರ್ ತೇಜಸ್ವಿನಿ, ತಾಲೂಕಿನ 236 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವಿದ್ದು, ಕೇವಲ 25 ಗ್ರಾಮಗಳಿಗೆ ಜಾಗ ಗುರುತಿಸಬೇಕಾಗಿದೆ. ಇದರಲ್ಲಿ 18 ಗ್ರಾಮಗಳಲ್ಲಿ ಜಾಗವಿಲ್ಲ. ಇವುಗಳಲ್ಲಿ 7 ಗ್ರಾಮಗಳಲ್ಲಿ ಜಾಗ ಗುರುತಿಸಲಾಗಿದೆ ಎಂದರು.

    ಖಾತೆ ಮಾಡಿಕೊಡಲು ಮನವಿ : ಬಗರ್‌ಹುಕುಂ ಕಮಿಟಿಯಲ್ಲಿ ಮಂಜೂರಾಗಿರುವ ಜಮೀನುಗಳ ಖಾತೆಗಳನ್ನು ವಾಡಿಕೊಡುವಂತೆ ಬೇವಿನಹಳ್ಳಿ ಚನ್ನಬಸವಯ್ಯ ಮನವಿ ಮಾಡಿದಾಗ ಸ್ಪಂದಿಸಿದ ಸಚಿವ ಮಾಧುಸ್ವಾಮಿ, 2013 ರಿಂದ 2018ರವರೆಗೆ ಮಂಜೂರಾಗಿರುವ ಜಮೀನುಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಅದು ಉಪವಿಭಾಗಾಧಿಕಾರಿ ಜವಾಬ್ದಾರಿಯಾಗಿದೆ. ಅವರು ಸರ್ಕಾರಕ್ಕೆ ವರದಿ ನೀಡಿದ ನಂತರವೇ ಆದೇಶ ಬರುತ್ತದೆ, ಅಲ್ಲಿಯವರೆಗೆ ಖಾತೆ ವಾಡಲು ಸಾಧ್ಯವಿಲ್ಲ ಎಂದರು.

    ಇಒ ವಸಂತ್‌ಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಜು, ದಲಿತ ಮುಖಂಡರಾದ ಕೆಂಪರಾಜು, ಜೆ.ಸಿ.ಪುರ ಗೋವಿಂದರಾಜು, ಪುರಸಭೆ ಮಾಜಿ ಸದಸ್ಯ ಆಶೋಕ್, ಅಗಸರಹಳ್ಳಿ ನರಸಿಂಹಮೂರ್ತಿ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts