More

    ನಾರಾಯಣಗೌಡರಿಗೆ ರಾಜಕೀಯ ಅಸ್ಥಿರತೆ: ಬಿಜೆಪಿಯಲ್ಲಿ ತಳಮಳ, ಕಾಂಗ್ರೆಸ್‌ನಲ್ಲಿ ವಿರೋಧ

    ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಾಗೂ ಜಿಲ್ಲೆಯ ಮೊದಲ ಬಿಜೆಪಿ ಶಾಸಕ ಎನ್ನುವ ಹೆಗ್ಗಳಿಕೆ ಹೊಂದಿರುವ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ದಿಢೀರ್ ಬೆಳವಣಿಗೆಗಳಿಂದ ರಾಜಕೀಯ ಅಸ್ಥಿರತೆ ಕಾಡಲಾರಂಭಿಸಿದೆ. ಕಮಲ ಬಿಟ್ಟು ಕಾಂಗ್ರೆಸ್ ಪಾಳಯ ಸೇರಲು ಸಜ್ಜಾಗಿರುವ ಹೊತ್ತಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಪರಿಣಾಮ ಇತ್ತ ಬಿಜೆಪಿಯಲ್ಲಿ ಸಕ್ರಿಯವಾಗಿರಲಾರದೇ, ಅತ್ತ ‘ಕೈ’ ಹಿಡಿಯಲು ಸಾಧ್ಯವಾಗದೇ ಯೋಚಿಸುವಂತಾಗಿದೆ.
    ಪಕ್ಷಾಂತರಿ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಕೆಸಿಎನ್ ಅವರ ರಾಜಕೀಯ ಭವಿಷ್ಯದ ಬಗ್ಗೆ ದಿನಕ್ಕೊಂದು ಚರ್ಚೆ ನಡೆಯಲಾರಂಭಿಸಿದೆ. ದಿನವೂ ಒಂದಿಲ್ಲೊಂದು ಬೆಳವಣಿಗೆ ನಡೆಯುತ್ತಿದ್ದು, ಎಲ್ಲರ ಚಿತ್ತ ಕೆ.ಆರ್.ಪೇಟೆಯತ್ತ ನೆಟ್ಟುವಂತೆ ಮಾಡಿದೆ. ವಿವಿಧ ಪಕ್ಷಗಳನ್ನು ಸುತ್ತಾಡಿ ಜೆಡಿಎಸ್‌ಗೆ ಬಂದಿದ್ದ ನಾರಾಯಣಗೌಡ 2013ರ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಗೆಲುವು ಸಾಧಿಸುತ್ತಾರೆ. 2018ರಲ್ಲಿಯೂ ಗೆಲುವು ಕಂಡ ಅವರು, ಕೆಲವೇ ತಿಂಗಳಲ್ಲಿ ಹೊರೆ ಇಳಿಸಿ ಬಿಜೆಪಿ ಸೇರಿದರು. 2019ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯೂ ಆಗುತ್ತಾರೆ. ಜತೆಗೆ ಸಚಿವ ಸ್ಥಾನವನ್ನೂ ಅಲಂಕರಿಸುತ್ತಾರೆ.
    ಯಾವುದೇ ಅಡೆತಡೆಯಿಲ್ಲದೆ ರಾಜಕೀಯ ಉತ್ತುಂಗದಲ್ಲಿದ್ದಾಗಲೇ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಕದ ತಟ್ಟಲು ಸಜ್ಜಾಗುತ್ತಿದ್ದಾರೆನ್ನುವ ಗುಟ್ಟು ಹಂತ, ಹಂತವಾಗಿ ಬಹಿರಂಗವಾಯಿತು. ಇದಕ್ಕೆ ಪೂರಕವೆಂಬಂತೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆನ್ನುವ ಆರೋಪ ಇಂದಿಗೂ ಹಸಿರಾಗಿದೆ. ವಿಚಿತ್ರವೆಂದರೆ ಆ ಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿಯೂ ಬಿಜೆಪಿಗೆ ಕನಿಷ್ಟ ಬೆಂಬಲವೂ ಸಿಕ್ಕಿರಲಿಲ್ಲ ಎನ್ನುವುದು ಪಕ್ಷಾಂತರದ ಸೂಚನೆಗೆ ಸಾಕ್ಷೃ ನೀಡುವಂತಿತ್ತು. ಈ ನಡುವೆ ಇತ್ತೀಚಿನ ಬೆಳವಣಿಗೆ ಎನ್ನುವಂತೆ ಪಕ್ಷದ ಕಾರ್ಯಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಮೂರು ದಿನದ ಹಿಂದೆ ಕೆ.ಆರ್.ಪೇಟೆಯಲ್ಲಿ ನಡೆದಿದ್ದ ವಿಜಯ ಸಂಕಲ್ಪ ಯಾತ್ರೆಯೂ ಸಂಪೂರ್ಣ ವಿಫಲವಾಯಿತು. ಜತೆಗೆ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅರ್ಧಕ್ಕೆ ವಾಹನ ನಿಲ್ಲಿಸಿ ವಾಪಸಾದರು. ಇದು ತಾಲೂಕು ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಹಾಗೂ ಕೆಸಿಎನ್ ಪಕ್ಷ ಬಿಡುವುದನ್ನು ಖಚಿತಪಡಿಸಿದಂತಿತ್ತು.
    ಕಾಂಗ್ರೆಸ್‌ನ ತಿರುಗೇಟು ನಿರೀಕ್ಷಿಸಿರಲಿಲ್ಲ: ಎಲ್ಲವೂ ಅಂದುಕೊಂಡಂತಾಗಿದ್ದರೆ ಕೆಸಿಎನ್ ಇಷ್ಟೊತ್ತಿಗಾಗಲೇ ‘ಕೈ’ ಪಾಳಯದಲ್ಲಿರಬೇಕಿತ್ತು ಎನ್ನುವ ಮಾತುಗಳಿವೆ. ಆದರೆ ಕೆ.ಆರ್.ಪೇಟೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಎಲ್ಲವನ್ನೂ ತಲೆಕೆಳಗೆ ಮಾಡಿದೆ. ಕ್ಷೇತ್ರದಿಂದ ಬಿ ಫಾರ್ಮ್ ಬಯಸಿ ಅರ್ಜಿ ಸಲ್ಲಿಸಿರುವ ಆರು ಜನರು ಬಹಿರಂಗವಾಗಿ ಕೆಸಿಎನ್ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಒಂದು ವೇಳೆ ಸ್ಪರ್ಧೆಗೆ ಅವಕಾಶ ಕೊಟ್ಟರೆ ಠೇವಣಿ ಸಿಗದಂತೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಮಾ.10ರೊಳಗೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆನ್ನುವ ಚರ್ಚೆ ಪ್ರಬಲವಾಗಿತ್ತು.
    ಆದರೆ ಈ ಬೆಳವಣಿಗೆ ನಡುವೆ ಕೆ.ಆರ್.ಪೇಟೆಯ ಪ್ರಜಾಧ್ವನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಡೆದ ಘಟನೆ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ರವಾನಿಸಿದೆ. ಅಂದು ಕೆಸಿಎನ್ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡ ಕಾರ್ಯಕರ್ತರು, ಫ್ಲೆಕ್ಸ್‌ಗಳನ್ನು ಸುಟ್ಟು ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಬಳೆಗಳನ್ನು ಕೊಟ್ಟು ಅಸಮಾಧಾನ ಹೊರಹಾಕಿದ್ದರು. ಜತೆಗೆ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ಅವರ ಕಾರಿಗೆ ಮೊಟ್ಟೆ ಹೊಡೆದಿದ್ದು ಪಕ್ಷಕ್ಕೆ ಇರಿಸು ಮುರಿಸು ತರಿಸಿದೆ. ಸಧ್ಯಕ್ಕೆ ಕಾರ್ಯಕರ್ತರ ಆಕ್ರೋಶ ತಣ್ಣಗಾಗದ ಸ್ಥಿತಿಯಲ್ಲಿರುವುದರಿಂದ ಮಾ.13ರಂದು ನಡೆಯಬೇಕಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಪ್ರಮುಖವಾಗಿ ತಾಲೂಕಿನಲ್ಲಿ ಪಕ್ಷ ಸಧೃಡವಾಗಿರುವುದರ ಜತೆಗೆ ಸಂಕಷ್ಟದಲ್ಲಿದ್ದಾಗ ಸಂಘಟನೆ ಮಾಡಿದವರನ್ನು ಬಿಟ್ಟು ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಏನಿದೆ ಎನ್ನುವ ಪ್ರಶ್ನೆಯನ್ನು ಸ್ಥಳೀಯರು ಹೈಕಮಾಂಡ್ ಮುಂದಿಟ್ಟಿದ್ದಾರೆ.
    ಈ ನಡುವೆ ಕೆ.ಆರ್.ಪೇಟೆ ಘಟನೆ ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ. ಪಕ್ಷ ಸೇರ್ಪಡೆ ವಿಚಾರದಲ್ಲಿ ಇಷ್ಟೊಂದು ವಿರೋಧ ವ್ಯಕ್ತವಾಗಲಿದೆ ಎನ್ನುವುದು ಸ್ವತಃ ನಾಯಕರಿಗೂ ಇರಲಿಲ್ಲ. ಆದರೆ ಇದೀಗ ಭುಗಿಲೆದ್ದಿರುವ ಅಸಮಾಧಾನ ತಣ್ಣಗಾಗುವರೆಗೂ ಚರ್ಚಿಸದಂತೆ ತಟಸ್ಥ ನಿಲುವಿಗೆ ಶರಣಾಗಿದ್ದಾರೆ.
    ಕೆಸಿಎನ್ ಭಾವನಾತ್ಮಕ ಅಸ್ತ್ರ: ಕಾಂಗ್ರೆಸ್‌ನಲ್ಲಿ ಎದುರಾಗಿರುವ ವ್ಯಾಪಕ ವಿರೋಧ ಕೆಸಿಎನ್ ನಿದ್ದೆಗೆಡುವಂತೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದರೂ ಒಲ್ಲದ ಮನಸ್ಸಿನಿಂದಲೇ ಪಕ್ಷದ ಚಟುವಟಿಕೆಯಲ್ಲಿ ಕಾಣಿಸುವಂತಾಗಿದೆ. ಹಲವು ಸಚಿವರು ದಿನವೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಅಂತಹ ಹುಮ್ಮಸ್ಸು ಕೆಸಿಎನ್ ಕಡೆಯಿಂದ ವ್ಯಕ್ತವಾಗುತ್ತಿಲ್ಲ.
    ಈ ನಡುವೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ಪಕ್ಷ ಹೊರತುಪಡಿಸಿದಂತೆ ಹಲವು ಕಾರ್ಯಕ್ರಮಗಳಿಗೆ ಹಾಜರಿ ಹಾಕುತ್ತಿದ್ದಾರೆ. ಮಾತ್ರವಲ್ಲದೆ ಬೂಕನಕೆರೆ ಹೋಬಳಿ ಕಾಪನಹಳ್ಳಿ ಸಮೀಪ ಬುಧವಾರ ತಮ್ಮ ಬೆಂಬಲಿಗರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಜತೆಗೆ ಈ ವೇಳೆ ಭಾಷಣ ಮಾಡುತ್ತಾ, ನಾನು ಎಂದಿಗೂ ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ನಿಮ್ಮೆಲ್ಲರ ಸೇವೆ ಮಾಡಿಕೊಂಡು ಇರುತ್ತೇನೆ. ಅಂತೆಯೇ ಕ್ಷೇತ್ರದ ಜನರು ಹೇಳಿದಂತೆಯೇ ನಡೆದುಕೊಳ್ಳುತ್ತೇನೆ ಎಂದು ಭಾವನಾತ್ಮಕ ಅಸ್ತ್ರದ ಪ್ರಯೋಗ ಮಾಡಿದ್ದಾರೆ. ಇದಕ್ಕೂ ಕೆಲ ದಿನದ ಮುನ್ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತರಿಗೆ ಸ್ಮಾರ್ಟ್ ಟಿವಿಯನ್ನು ಉಡುಗೊರೆಯಾಗಿ ನೀಡಿದ್ದನ್ನು ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts