More

    ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗೆ ಚಿಂತನೆ

    ಶಿವಮೊಗ್ಗ: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಸ್ಮಾರ್ಟ್​ಕ್ಲಾಸ್ ಆರಂಭಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.

    ದುರ್ಗಿಗುಡಿಯ ಸರ್ಕಾರಿ ಆಂಗ್ಲ ಮತ್ತು ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿ ಸ್ಮಾರ್ಟ್ ತರಗತಿಯನ್ನು ವೀಕ್ಷಿಸಿದ ಬಳಿಕ ಮಾತನಾಡಿ, ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಸಂಬಂಧಿಸಿ ಮುಂದಿನ ಬಜೆಟ್​ನಲ್ಲಿ ಅನುದಾನ ಕಾಯ್ದಿರಿಸಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಆರಂಭಿಸಿ ಉತ್ತಮ ವಾತಾವರಣ ನಿರ್ವಿುಸಲಾಗುವುದು. ಈ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.

    ಕಳೆದ ವರ್ಷ ಮಳೆಗಾಲದ ಅವಧಿಯಲ್ಲಿ ಹಾನಿಗೊಳಗಾಗಿದ್ದ ನಗರದ 87 ಶಾಲೆಗಳನ್ನು ದುರಸ್ತಿಗೆ ಒಳಪಡಿಸಲಾಗಿದೆ. ಈಗಾಗಲೇ 70 ಶಾಲೆಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಶಾಲೆಗಳಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ 45 ಶಾಲೆಗಳಿಗೆ 460 ಕಂಪ್ಯೂಟರ್, ಓವರ್​ಹೆಡ್ ಪ್ರೊಜೆಕ್ಟರ್, ಲ್ಯಾಪ್​ಟಾಪ್ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಡಿಜಿಟಲ್ ಸ್ಮಾರ್ಟ್ ತರಗತಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.

    ಈಗಾಗಲೇ 87 ಶಾಲೆಗಳ ದುರಸ್ತಿಗೆ ಕೋಟಿ ರೂ. ವ್ಯಯಿಸಿ ಅಗತ್ಯ ಸೌಲಭ್ಯ ಒದಗಿಸಿ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೀಳರಿಮೆ ಇಲ್ಲದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯದಲ್ಲಿ ಸ್ಥಳೀಯ ಖಾಸಗಿ ಸಂಘ ಸಂಸ್ಥೆಗಳು ಕೈಜೋಡಿಸಿವೆ ಎಂದರು.

    ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆ ಸೇರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಮುಖ್ಯ ಅಧ್ಯಾಪಕರು ಹಾಗೂ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts