More

    ತುಂಬೆಯಲ್ಲಿ ಸಂಗ್ರಹವಾದ ಕನಿಷ್ಠ ನೀರಿನ ಸಂಗ್ರಹ, ಇತಿಹಾಸದ 2ನೇ ಕನಿಷ್ಠ ನೀರಿನ ಮಟ್ಟವಾಗಿ ದಾಖಲು

    ಮಂಗಳೂರು: ದಿನದಿಂದ ದಿನಕ್ಕೆ ತುಂಬೆ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದ್ದು, ಹರೆಕಳ ನೀರು ನಿರಂತರ ಪಂಪಿಂಗ್ ಹೊರತಾಗಿಯೂ ಡ್ಯಾಂ ಮಟ್ಟ ಕುಸಿಯುವ ಪ್ರಮಾಣ ಹೆಚ್ಚಾಗಿದೆ. ಬುಧವಾರ ತುಂಬೆ ಡ್ಯಾಂ ಮಟ್ಟ 3.98 ಮೀಟರ್ ಕಂಡುಬಂದಿದ್ದು, ಇತಿಹಾಸದ 2ನೇ ಕನಿಷ್ಠ ನೀರಿನ ಮಟ್ಟ ದಾಖಲಾಗಿದೆ.

    1993ರಿಂದ ತುಂಬೆ ವೆಂಟೆಡ್ ಡ್ಯಾಂನ ನೀರಿನ ಸಂಗ್ರಹದ ವಿವರಗಳನ್ನು ಗಮನಿಸಿದಾಗ 2003ರ ಜೂ.13ರಂದು ನೀರಿನ ಮಟ್ಟ 0.3 ಅಡಿಗಳಿಗೆ ಇಳಿದಿತ್ತು. ಇದು ಅಂದಿನಿಂದ ಇಂದಿನವರೆಗೆ ತುಂಬೆಯಲ್ಲಿ ಸಂಗ್ರಹವಾದ ಕನಿಷ್ಠ ನೀರಿನ ಸಂಗ್ರಹ. ಆಗ ಸತತ 9 ದಿನದವರೆಗೆ ಇಲ್ಲಿ 10 ಇಂಚಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿತ್ತು. (ಹಳೆಯ ಡ್ಯಾಂನಲ್ಲಿ ಅಡಿಗಳ ಆಧಾರದಲ್ಲಿ ನೀರಿನ ಪ್ರಮಾಣ ಲೆಕ್ಕ ಮಾಡಲಾಗುತ್ತಿತ್ತು). 2012(ಜೂ.15)ರಲ್ಲಿ ಕನಿಷ್ಠ 4.7 ಅಡಿ, 2013ರಲ್ಲಿ (ಜೂ.9) 5.3 ಅಡಿ, 2014ರಲ್ಲಿ (ಜೂ.11) 4.10 ಅಡಿ, 2015ರಲ್ಲಿ (ಡಿ.29) 6.3 ಅಡಿ ಹಾಗೂ 2016ರ ಮೇ 20ರಂದು 3.7 ಅಡಿ ನೀರು ಸಂಗ್ರಹವಾಗಿರುವುದು ಆಯಾ ವರ್ಷದ ಕನಿಷ್ಠ ನೀರು ಸಂಗ್ರಹ. 2016ರ ಡಿಸೆಂಬರ್‌ನಲ್ಲಿ ಹೊಸ ಡ್ಯಾಂ ನಿರ್ಮಾಣವಾಗಿ ಅದರಲ್ಲಿ 5 ಮೀ. ನೀರು ನಿಲುಗಡೆ ಮಾಡಲಾಗುತ್ತಿತ್ತು. 2017ರಲ್ಲಿ ಎ.24ರಂದು 4.10 ಮೀ. ನೀರು ಸಂಗ್ರಹಿಸಲಾಗಿರುವುದು ಆ ವರ್ಷದ ಕನಿಷ್ಠ ಸಂಗ್ರಹ. 2019ರ ಮೇ ಮಧ್ಯ ಭಾಗದಲ್ಲಿ ನೀರಿನ ಮಟ್ಟ 2.40 ಮೀ.ಗೆ ಇಳಿದಿತ್ತು! ಬುಧವಾರ ತುಂಬೆಯಲ್ಲಿ 3.98 ಮೀ.ನೀರಿನ ಮಟ್ಟ ದಾಖಲಾಗಿದ್ದು, ಇತಿಹಾಸದ 2ನೇ ಕನಿಷ್ಠ ನೀರಿನ ಮಟ್ಟವಾಗಿ ದಾಖಲಾಗಿದೆ.

    *ನೀರಿನ ಮಟ್ಟ ಇಳಿಕೆ

    ಮಂಗಳವಾರ ತುಂಬೆ ಡ್ಯಾಂ ಮಟ್ಟ 4.01 ಹಾಗೂ ಎಎಂಆರ್ ನೀರಿನ ಮಟ್ಟ 15.57 ಮೀಟರ್ ಕಂಡುಬಂದಿತ್ತು. ಬುಧವಾರ ತುಂಬೆ ಡ್ಯಾಂ ಮಟ್ಟ 3.98 ಹಾಗೂ ಎಎಂಆರ್ ನೀರಿನ ಮಟ್ಟ 15.52 ಮೀಟರ್ ಇದೆ. ಈ ಎರಡು ಡ್ಯಾಂಗಳಲ್ಲಿ ಸರಾಸರಿ 0.10ಮೀ ಪ್ರತೀ ದಿನ ಇಳಿಕೆಯಾಗುತ್ತಿದೆ. ತುಂಬೆಯಲ್ಲಿ ನೀರಿನ ಮಟ್ಟ ಕುಸಿಯದಂತೆ ತಡೆಯಲು ಹರೆಕಳ ಪ್ರತೀ ದಿನ 15-20 ಎಂಎಲ್‌ಡಿ ನೀರು ಪಂಪಿಂಗ್ ಮಾಡಲಾಗುತ್ತಿದೆ. ಇದರ ಹೊರತಾಗಿಯೂ ಡ್ಯಾಂ ಮಟ್ಟ ಕುಸಿಯುತ್ತಿದೆ.

    *ನೀರು ಸರಬರಾಜು ಪೂರ್ಣ

    ಪಣಂಬೂರು ಸ್ಥಾವರ ವ್ಯಾಪ್ತಿಯ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲೊನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ. ಪಡೀಲ್ ಸ್ಥಾವರ: ಬಜಾಲ್, ಜಲ್ಲಿಗುಡ್ಡೆ, ಮುಗೇರ್, ಎಕ್ಕೂರು, ಸದಾಶಿವನಗರ, ಅಳಪೆ, ಮೇಘನಗರ, ಮಂಜಳಿಕೆ, ಕಂಕನಾಡಿ ರೈಲು ನಿಲ್ದಾಣ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್, ಗೂಡ್‌ಶೆಡ್, ದಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗರ. ಶಕ್ತಿನಗರ ಟ್ಯಾಂಕ್ ವ್ಯಾಪ್ತಿಯ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರುಮಠ, ಪ್ರಶಾಂತ್ ನಗರ. ತುಂಬೆ ಪಣಂಬೂರು ನೇರ ಮಾರ್ಗ: ಮೂಡ ಪಂಪ್‌ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕಾಡ್, ದಡ್ಡಲಕಾಡ್, ಬಂಗ್ರಕೂಳೂರಿಗೆ ಬುಧವಾರ ಸುಸೂತ್ರವಾಗಿ ನೀರು ಸರಬರಾಜಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts