More

    ಕನಕಾಚಲಪತಿ ರಥೋತ್ಸವ ಅದ್ದೂರಿ

    ಕನಕಗಿರಿ: ಇಲ್ಲಿನ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿ ರಥೋತ್ಸವ ಜರುಗಿತು.

    ರಥೋತ್ಸವಕ್ಕೂ ಮುನ್ನ ಮೈಸೂರಿನ ಯಾಜ್ಞಿಕರಿಂದ ರಥಕ್ಕೆ ಬೆಳಗ್ಗೆ ಹೋಮ, ಹವನ ನಡೆಯಿತು. ನಂತರ ಸಂಪ್ರದಾಯದಂತೆ ಅನ್ನಬಲಿ ಸೇವೆ ನೆರವೇರಿತು. ಮೂಲಾ ನಕ್ಷತ್ರದ ವೇಳೆಯಲ್ಲಿ 4.15ಕ್ಕೆ ಆರಂಭವಾದ ರಥೋತ್ಸವ, ಎದುರುಗಡೆ ಹನುಮಪ್ಪ ದೇವಸ್ಥಾನದವರೆಗೆ 633 ಮೀ ಉದ್ದದ ರಾಜಬೀದಿಯಲ್ಲಿ ತೆರಳಿ 5.27ಕ್ಕೆ ಸ್ವಸ್ಥಾನಕ್ಕೆ ಮರಳಿ ಸಂಪನ್ನಗೊಂಡಿತು.

    ಪಾದಗಟ್ಟೆ ತಲುಪುತ್ತಿದ್ದಂತೆ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಶ್ರೀ ಚನ್ನಮಲ್ಲಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದರು. ಭಕ್ತರು ಗೋವಿಂದನ ಸ್ಮರಣೆ ಮಾಡುತ್ತಾ ರಥವನ್ನು ಎಳೆದು ಸಂಭ್ರಮಿಸಿದರು. ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯೊಂದಿಗೆ ಪಾದಗಟ್ಟೆಗೆ ತೆರಳಿ ಬಂದ ಮೇಲೆ ಮಹಿಮರಾಗಿದ್ದ ಭಕ್ತರು, ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿತ್ತು. ದಾನಿಗಳು ನೀರು, ಜ್ಯೂಸ್ ವ್ಯವಸ್ಥೆ ಕಲ್ಪಿಸಿದ್ದರು.

    ಅಧಿಕಾರಿ ವರ್ಗ, ವ್ಯಾಪಾರಸ್ಥರು ಫುಲ್ ಖುಷ್

    ಕೇವಲ ಒಂದೂವರೆ ಗಂಟೆಯೊಳಗೆ ರಥೋತ್ಸವ ಸಂಪನ್ನಗೊಂಡಿದ್ದಕ್ಕೆ ವ್ಯಾಪಾರಸ್ಥರು ಹಾಗೂ ಅಧಿಕಾರಿ ವರ್ಗ ಖುಷಿಗೊಂಡಿರು. ಈ ಹಿಂದೆ ಎರೆಡೆರಡು ದಿನಗಳ ಕಾಲ ರಥ ನಡೆಯುತ್ತಿದ್ದರಿಂದ ವ್ಯಾಪಾರಿಗಳಿಗೆ ತೊಂದರೆಯಾಗುವುದಲ್ಲದೇ, ಅಧಿಕಾರಿ ವರ್ಗಕ್ಕೂ ಸಮಸ್ಯೆಯಾಗುತ್ತಿತ್ತು. ಈ ಬಾಗಿ ಯಾವುದೇ ತೊಂದರೆ ಇಲ್ಲದೆ ರಾಜಬೀದಿಯಲ್ಲಿ ಸಾಗಿದ ರಥವು ತೇರಿನ ಮನೆ ಸೇರಿದ್ದಕ್ಕೆ ಭಕ್ತರು ಖುಷಿಪಟ್ಟರು.

    ಮೊಳಗಿದ ಮೋದಿ ಘೋಷಣೆ

    ಭಾನುವಾರ ಬೆಳಗ್ಗೆ ನಡೆದ ಕನಕಾಚಲಪತಿ ಗರುಡೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ಎದುರು ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗಿ ಮುಜುಗರಕ್ಕೀಡಾಗುವಂತೆ ಮಾಡಿದ್ದರು. ರಥೋತ್ಸವದಲ್ಲೂ ಸಚಿವರು ಇಲ್ಲದಿದ್ದರೂ ಮೋದಿ ಮೋದಿ ಘೋಷಣೆ ಕೂಗಿ ಸಂಭ್ರಮಿಸಿದರು. ಇತ್ತೀಚೆಗೆ ಸಚಿವ ಶಿವರಾಜ ತಂಗಡಗಿ ಮೋದಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಗರುಡೋತ್ಸವ ಹಾಗೂ ರಥೋತ್ಸವದಲ್ಲಿ ಯುವಕರು ಜೈ ಶ್ರೀರಾಮ್ ಮತ್ತು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಇದು ನೆರೆದಿದ್ದ ಬಿಜೆಪಿಗರಿಗೆ ಖುಷಿ ನೀಡಿದ್ದರೆ, ಕಾಂಗ್ರೆಸ್ ಮುಖಂಡರಿಗೆ ಮುಜುಗರ ತಂದಿತ್ತು.

    ದಾಸೋಹದಲ್ಲಿ ಅಸ್ತವ್ಯಸ್ಥ

    ಜಾತ್ರಾ ಮಹೋತ್ಸವದಲ್ಲಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ದಾಸೋಹವನ್ನೇ ನೆಚ್ಚಿಕೊಂಡು ಬಂದಿದ್ದ ಭಕ್ತರಿಗೆ ಭಾನುವಾರ ಸಂಜೆ 7ರಿಂದ ರಾತ್ರಿ 10ಗಂಟೆ ವರೆಗೆ ಊಟದ ವ್ಯವಸ್ಥೆ ಇಲ್ಲದಿದ್ದರಿಂದ ಭಕ್ತರು ಪರದಾಡಿದರು. ಈ ಬಗ್ಗೆ ಕೆಲವರು ದಾಸೋಹದ ಮುಖ್ಯಸ್ಥರೊಂದಿಗೆ ಚರ್ಚಿಸಿದರೂ ಭಕ್ತರಿಗೆ ಪ್ರಸಾದ ಸಿಗಲಿಲ್ಲ. ಹೀಗಾಗಿ ನೂರಾರು ಭಕ್ತರು ಪ್ರಸಾದ ಸಿಗದಿದ್ದಕ್ಕೆ ಬೇಸರ ಮಾಡಿಕೊಂಡು ಹೋಟೆಲ್‌ಗಳಿಗೆ ತೆರಳಿದ್ದು, ಊಟ ಸಿಗದಿದ್ದರಿಂದ ಉಪವಾಸ ಮಲಗಿರುವ ಬಗ್ಗೆ ಮಾತುಗಳು ಕೇಳಿ ಬಂದವು.

    ನೀರಿಗೆ ಹಾಹಾಕಾರ: ಬರದ ಹಿನ್ನೆಲೆಯಲ್ಲಿ ಪಪಂ, ತಾಲೂಕಾಡಳಿತ ಹಾಗೂ ತಾಪಂ ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದರೂ ಜಾತ್ರೆಗೆ ಬಂದ ಭಕ್ತರು ನೀರಿನ ಸಮಸ್ಯೆ ಎದುರಿಸಿದರು. ಟ್ಯಾಂಕರ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿದರೂ ಸಾಕಾಗಲಿಲ್ಲ. ಖುದ್ದು ತಹಸೀಲ್ದಾರರೇ ನೀರಿನ ವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದು ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts