More

    ಕಾರ್ಮಿಕರ ವಲಸೆ ಸರ್ಕಾರಿ ಶಾಲೆಗಳಿಗೆ ಕಂಟಕ

    ಭರತ್ ಶೆಟ್ಟಿಗಾರ್ ಮಂಗಳೂರು

    ವಲಸೆ ಕಾರ್ಮಿಕರು ಊರಿಗೆ ತೆರಳುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುವ ಆತಂಕ ಕಾಡುತ್ತಿದೆ.
    ಕರಾವಳಿ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಶೇ.50ರಷ್ಟು ವಿದ್ಯಾರ್ಥಿಗಳು ಉತ್ತರ ಕರ್ನಾಟಕ ಭಾಗದಿಂದ ಬರುವ ಕಟ್ಟಡ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರ ಮಕ್ಕಳು. ಸದ್ಯ ಶೇ.75ರಷ್ಟು ಕಾರ್ಮಿಕರು ಕುಟುಂಬ ಸಮೇತರಾಗಿ ತಮ್ಮ ಊರುಗಳಿಗೆ ತೆರಳಿದ್ದು, ಇನ್ನಷ್ಟು ಮಂದಿ ಹೋಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮುಂದೆ ಮಳೆಗಾಲ ಆರಂಭವಾಗುವುದರಿಂದ ಊರಿಗೆ ತೆರಳಿದವರು ಮತ್ತೆ ವಾಪಸ್ ಬರುವುದು ಸಂಶಯ. ಹಾಗಾಗಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಒಂದನೇ ತರಗತಿಗೆ ಹೊಸ ವಿದ್ಯಾರ್ಥಿಗಳ ಸೇರ್ಪಡೆಯೂ ಕಡಿಮೆಯಾಗಬಹುದು ಎನ್ನುತ್ತಾರೆ ಶಿಕ್ಷಕರು.

    ಅವರಿಂದಾಗಿಯೇ ಶಾಲೆ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಕೆಲವು ಶಾಲೆಗಳು ಈ ಕಾರ್ಮಿಕರ ಮಕ್ಕಳಿಂದಾಗಿಯೇ ಇಂದಿಗೂ ನಡೆಯುತ್ತಿವೆ. ಗ್ರಾಮಾಂತರ ಪ್ರದೇಶಕ್ಕಿಂತ ನಗರದ ಪ್ರದೇಶದ ಶಾಲೆಗಳಲ್ಲಿ ವಲಸೆ, ಕಟ್ಟಡ ಕಾರ್ಮಿಕರ ಮಕ್ಕಳು ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಾರೆ. ನಗರದ ಯಾವುದೇ ಸರ್ಕಾರಿ ಶಾಲೆಯ ದಾಖಲೆ ತೆಗೆದರೂ ಅಲ್ಲಿ ಹೊರಜಿಲ್ಲೆಗಳ ಮಕ್ಕಳೇ ಅಧಿಕ. ಸ್ಥಳೀಯ ಮಕ್ಕಳು ಬೆರಳೆಣಿಕೆ ಮಂದಿ ಮಾತ್ರ. ಕಾರ್ಮಿಕರು ವಾಪಾಸಾಗದಿದ್ದರೆ ಅಂತಹ ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬರುವುದಂತೂ ಖಂಡಿತ.

    ಶೈಕ್ಷಣಿಕ ವರ್ಷಾರಂಭ ನಿಖರತೆಯಿಲ್ಲ: ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗುತ್ತದೆ ಎನ್ನುವ ಕುರಿತು ಯಾವುದೇ ಆದೇಶ ನೀಡಿಲ್ಲ. ಒಂದು ಸಲ ಸರ್ಕಾರ ನಿರ್ಧಾರ ಕೈಗೊಂಡ ಬಳಿಕ ಊರಿಗೆ ಹೋದವರು ಮತ್ತೆ ವಾಪಸಾಗುವ ಸಾಧ್ಯತೆಯಿದೆ. ಹೆತ್ತವರನ್ನು ಸಂಪರ್ಕಿಸಿ, ಮತ್ತೆ ಶಾಲೆಗೆ ಬರುವಂತೆ ಪ್ರೇರೇಪಿಸಲಾಗುವುದು. ಒಂದು ವೇಳೆ ತಮ್ಮ ಊರಿನಲ್ಲಿಯೇ ಶಾಲೆಗಳಿಗೆ ಸೇರಲು ಇಚ್ಛಿಸಿದಲ್ಲಿ, ವರ್ಗಾವಣೆ ಪ್ರಮಾಣಪತ್ರ(ಟಿಸಿ) ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

    ಶಾಲೆಗಳಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರ ಮಕ್ಕಳು ಕಲಿಯುತ್ತಿದ್ದಾರೆ ಎನ್ನುವ ಪಕ್ಕಾ ಮಾಹಿತಿ ಸದ್ಯಕ್ಕಿಲ್ಲ. ಗ್ರಾಮಾಂತರಕ್ಕಿಂತಲೂ ನಗರ ಪ್ರದೇಶದ ಶಾಲೆಗಳಲ್ಲಿ ವಲಸೆ ಕಾರ್ಮಿಕರ ಮಕ್ಕಳೇ ಅಧಿಕ. ಶೈಕ್ಷಣಿಕ ವರ್ಷ ಆರಂಭದ ಕುರಿತು ಸದ್ಯ ಸರ್ಕಾರದಿಂದಲೂ ಯಾವುದೇ ಆದೇಶ ಬಂದಿಲ್ಲ. ಊರಿಗೆ ಹೋದವರನ್ನು ಮತ್ತೆ ವಾಪಸು ಕರೆಸಲು ಸಾಧ್ಯವೇ ಎಂದು ಪರಿಶೀಲಿಸಲಾಗುವುದು.
    – ಶಮಂತ್, ದ.ಕ, ಜಿಲ್ಲಾ ಡಿಡಿಪಿಐ ಕಚೇರಿ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts