More

    ವಿವಿ ವಿದ್ಯಾರ್ಥಿಗಳಿಗೆ ಬಿಸಿಯೂಟ! ಬಡ ವಿದ್ಯಾರ್ಥಿಗಳಿಗೆ ವರದಾನ

    ಸೋರಲಮಾವು ಶ್ರೀಹರ್ಷ
    ತುಮಕೂರು: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ ದೊರೆಯಲಿದೆ. ಪ್ರಥಮ ಬಾರಿಗೆ ತುಮಕೂರು ವಿವಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ಶೀಘ್ರದಲ್ಲಿಯೇ ಆರಂಭವಾಗಲಿದೆ.

    ಪಾವಗಡ ರಾಮಕೃಷ್ಣ ಸೇವಾಶ್ರಮ, ಬೆಂಗಳೂರಿನ ಅದಮ್ಯ ಚೇತನ, ರೆಡ್​ಕ್ರಾಸ್, ತುಮಕೂರು ಸಾಯಿಬಾಬಾ ಮಂದಿರ ಸೇರಿ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ಬಿಸಿಯೂಟ ನೀಡಲು ಅಗತ್ಯ ಸಿದ್ಧತೆಗಳನ್ನು ವಿವಿ ಆಡಳಿತ ಮಾಡಿಕೊಂಡಿದೆ. ವಿವಿ ಆವರಣದಲ್ಲಿ ವ್ಯಾಸಂಗ ಮಾಡುತ್ತಿರುವ 1200 ವಿದ್ಯಾರ್ಥಿಗಳಿಗೆ ಬೆಳಗುಂಬ ರಸ್ತೆಯ ಸಾಯಿಬಾಬಾ ಮಂದಿರದಲ್ಲಿ ಊಟ ತಯಾರಿಸಿ ಮಧ್ಯಾಹ್ನ ವಿವಿ ಆವರಣದಲ್ಲಿ ವಿತರಣೆ ಮಾಡಲು ಸ್ಥಳದ ಆಯ್ಕೆ ಕೂಡ ನಡೆದಿದೆ. ಬಿಸಿಯೂಟದ ಮಹತ್ವ ತಿಳಿಸುವ ಕಾರಣದಿಂದ ಉಚಿತವಾಗಿ ನೀಡುವ ಬದಲು 5 ರೂ. ಗೆ ಊಟ ನೀಡಲು ತೀರ್ವನಿಸಿದ್ದು ಇದರ ನಿರ್ವಹಣೆಯ ಸಂಪೂರ್ಣ ವೆಚ್ಚ ದಾನಿಗಳ ನೆರವಿನಿಂದ ಸಂಘ ಸಂಸ್ಥೆಗಳೇ ನಿರ್ವಹಿಸಲಿವೆ.

    ವಿವಿ ಸ್ಥಳಾವಕಾಶ ಹಾಗೂ ಅಗತ್ಯವಿದ್ದರೆ ಸಿಬ್ಬಂದಿ ಒದಗಿಸಲಿದೆ. ಗ್ರಾಮೀಣ ಭಾಗದ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು ಹಾಸ್ಟೆಲ್ ಸೌಲಭ್ಯವಿಲ್ಲದ ಸಾಕಷ್ಟು ವಿದ್ಯಾರ್ಥಿಗಳು ಊಟ ಮಾಡದೆ ಪಾಠ ಕಲಿಯುವುದನ್ನು ಗಮನಿಸಿರುವ ಕೆಲವು ಪ್ರಾಧ್ಯಾಪಕರು ಈ ಯೋಜನೆ ರೂಪಿಸುವಲ್ಲಿ ಶ್ರಮಿಸಿದ್ದಾರೆ.

    ಗ್ರಾಮೀಣ, ಬಡ ವಿದ್ಯಾರ್ಥಿಗಳಿಗಷ್ಟೇ ಅವಕಾಶ: ಈ ಯೋಜನೆ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗಷ್ಟೇ ನೀಡಲು ವಿವಿ ನಿರ್ಧರಿಸಿದೆ. ಈ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದು ಮೊದಲ ಹಂತದಲ್ಲಿ 1200 ವಿದ್ಯಾರ್ಥಿಗಳಿಗೆ ಯೋಜನೆಯ ಲಾಭ ಸಿಗಲಿದೆ. ಬೆಳಗ್ಗೆಯೇ ಮನೆಯಿಂದ ಬಂದು ಸಂಜೆಯವರೆಗೂ ಕಲಿಯುವ ವಿದ್ಯಾರ್ಥಿಗಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ಗುಣಮಟ್ಟದ ಆಹಾರ ನೀಡಲು ಮೆನು ಕೂಡ ಸಿದ್ಧಪಡಿಸಲಾಗಿದೆ.

    ವಿವಿಯ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕೆಂಬ ವಿವಿ ಚಿಂತನೆಗೆ ವಿವಿಧ ಸಂಘ, ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ. ತುಮಕೂರಿನ ಸಾಕಷ್ಟು ದಾನಿಗಳೇ ಇದರ ನಿರ್ವಹಣೆಯ ಹೊಣೆ ಹೊರಲಿದ್ದು ಶೀಘ್ರದಲ್ಲಿಯೇ ಆರಂಭವಾಗಲಿದೆ.

    | ಪ್ರೊ.ಎಂ.ವೆಂಕಟೇಶ್ವರಲು ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts