More

    ಮೆಗಾ ಮಾರುಕಟ್ಟೆ ಶೀಘ್ರವೇ ಬಳಕೆಗೆ

    ರಾಣೆಬೆನ್ನೂರ: ನಗರದ ಹೊರವಲಯದಲ್ಲಿ ನಿರ್ವಿುಸಿರುವ ಎಪಿಎಂಸಿ ಮೆಗಾ ಮಾರುಕಟ್ಟೆಗೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಸ್ಥಳೀಯ ನೆಹರು ಮಾರುಕಟ್ಟೆ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ.

    ನೆಹರು ಮಾರುಕಟ್ಟೆಯು ಹಳೇ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಕಾರಣ ಜನ-ವಾಹನಗಳ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಹೀಗಾಗಿ, ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂಬ ನಾಗರಿಕರ ಒತ್ತಾಯಕ್ಕೆ ಮಣಿದ ಸರ್ಕಾರ, ಮೆಗಾ ಮಾರುಕಟ್ಟೆ ನಿರ್ವಣಕ್ಕೆ ಮುಂದಾಗಿದೆ.

    170 ಎಕರೆಯಲ್ಲಿ: ಎಪಿಎಂಸಿ ಮೆಗಾ ಮಾರುಕಟ್ಟೆ ಹುಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-04ಕ್ಕೆ ಹೊಂದಿಕೊಂಡಿದೆ. ವ್ಯಾಪಾರಸ್ಥರಿಗೆ, ರೈತರಿಗೆ, ಖರೀದಿದಾರರಿಗೆ ಮಳಿಗೆ ನಿರ್ವಿುಸಿಕೊಳ್ಳಲು 170 ಎಕರೆ ಜಾಗವನ್ನು 109 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಚರಂಡಿ, ರಸ್ತೆ, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಾಮಗಾರಿ ಮುಗಿದಿದ್ದು, ಜೂ. 30ರೊಳಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದೆ.

    491 ನಿವೇಶನ ಗುರುತು: ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಹರಾಜು ಕಟ್ಟೆ, ಗೋದಾಮು, ಶೌಚಗೃಹ, ಕುಡಿಯುವ ನೀರಿನ ಘಟಕ, ಪೊಲೀಸ್ ಠಾಣೆ, ಬ್ಯಾಂಕ್, ಅಂಚೆ ಕಚೇರಿ, ಉಪಾಹಾರ ಗೃಹ, ಪ್ರಯೋಗ ಶಾಲೆ, ಟೆಂಡರ್ ಹಾಲ್, ವಾಣಿಜ್ಯ ಮಳಿಗೆ, ಘನತ್ಯಾಜ್ಯ ಘಟಕ, ಮಳೆ ನೀರು ಸಂಗ್ರಹ, ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಖರೀದಿದಾರರಿಗಾಗಿ 491 ನಿವೇಶನಗಳನ್ನು ಗುರುತಿಸಲಾಗಿದೆ.

    ಮಾರುಕಟ್ಟೆ ಸ್ಥಳಾಂತರ ಅವಶ್ಯ: ರಾಣೆಬೆನ್ನೂರ ವಾಣಿಜ್ಯ ನಗರಿಯಾಗಿದ್ದು, ದಿನೇ ದಿನೆ ವ್ಯಾಪಾರ-ವಹಿವಾಟು ಹೆಚ್ಚುತ್ತಿದೆ. ಆದರೆ, ಎಪಿಎಂಸಿ ನೆಹರು ಮಾರುಕಟ್ಟೆ ಹಾಗೂ ಹಳೇ ಎಪಿಎಂಸಿ ನಗರದ ಮಧ್ಯ ಭಾಗದಲ್ಲಿವೆ. ಹೀಗಾಗಿ, ಹತ್ತಿ ಅಂಡಿಗೆ, ಮೆಕ್ಕೆಜೋಳ ಹೊತ್ತು ಬರುವ ಲಾರಿ, ಟ್ರ್ಯಾಕ್ಟರ್​ಗಳು ನಗರದ ಮಧ್ಯ ಭಾಗದ ತಿರುವುಗಳಲ್ಲಿ ಸಂಚರಿಸಲು ಸಾಧ್ಯವಾಗದೆ ಪರದಾಡುತ್ತಿವೆ. ಇದರಿಂದ ಇತರ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಸ್ಥಳಾಂತರ ಅವಶ್ಯವಾಗಿದೆ.

    ನೆಹರು ಮಾರುಕಟ್ಟೆ ವ್ಯಾಪಾರಸ್ಥರು ರಸ್ತೆ ಮಧ್ಯೆದಲ್ಲಿಯೇ ವ್ಯಾಪಾರ ಮಾಡುತ್ತಿರುವ ಕಾರಣ ಇತರ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಮೆಗಾ ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡ ಕೂಡಲೆ ಮಾರುಕಟ್ಟೆ ಸ್ಥಳಾಂತರಿಸಬೇಕು. ಈ ಬಗ್ಗೆ ವ್ಯಾಪಾರಸ್ಥರಿಗೆ ಮುಂಚಿತವಾಗಿಯೇ ನೋಟಿಸ್ ಜಾರಿ ಮಾಡಬೇಕು.

    | ಚಂದ್ರಪ್ಪ ಎಲ್. ಸ್ಥಳೀಯ ನಿವಾಸಿ

    ನಿವೇಶನಕ್ಕಾಗಿ ಪೈಪೋಟಿ ಸಾಧ್ಯತೆ

    ಸದ್ಯ ನೆಹರು ಮಾರುಕಟ್ಟೆಯಲ್ಲಿ 158 ಖರೀದಿ ದಾರರಿದ್ದಾರೆ. ಹಳೇ ಎಪಿಎಂಸಿ ಆವರಣದಲ್ಲಿ ಸ್ವಂತ ನಿವೇಶನ ಹೊಂದದ 300 ಖರೀದಿದಾರರಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಖರೀದಿದಾರರು ಮೆಗಾ ಮಾರುಕಟ್ಟೆಯಲ್ಲಿ ನಿವೇಶನ ಪಡೆದುಕೊಳ್ಳಬಹುದು. ಅಲ್ಲದೆ, ಮೆಗಾ ಮಾರುಕಟ್ಟೆ ಪ್ರಾಂಗಣ ಎನ್​ಎಚ್-04ಕ್ಕೆ ಹೊಂದಿಕೊಂಡಿರುವ ಕಾರಣ ಬೇರೆ ಬೇರೆ ಜಿಲ್ಲೆಯ ಖರೀದಿದಾರರು ವ್ಯಾಪಾರ-ವಹಿವಾಟು ನಡೆಸಲು ಅನುಕೂಲಕರವಾಗಿದೆ. ಆದ್ದರಿಂದ ನಿವೇಶನ ಖರೀದಿಗೆ ಸ್ಥಳೀಯ ವ್ಯಾಪಾರಸ್ಥರಿಗಿಂತಲೂ ಹೊರಗಿನವರೇ ಹೆಚ್ಚಿನ ಉತ್ಸುಕರಾಗಿದ್ದಾರೆ. ಹೀಗಾಗಿ ನಿವೇಶನ ಖರೀದಿಗೆ ಪೈಪೋಟಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

    ಎಪಿಎಂಸಿ ಮೆಗಾ ಮಾರುಕಟ್ಟೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಖರೀದಿದಾರರಿಗೆ 491 ನಿವೇಶನ ಗುರುತಿಸಲಾಗಿದೆ. ಇನ್ನ್ನುಳಿದಂತೆ ಗೋದಾಮು, ಟೆಂಡರ್ ಹಾಲ್ ಸೇರಿ ಇತರ ಕಟ್ಟಡಗಳಿಗೆ ಬಳಸಿಕೊಳ್ಳಲಾಗಿದೆ.

    | ಪರಮೇಶ ನಾಯಕ ಎಪಿಎಂಸಿ ಸಹ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts