More

    ನ್ಯಾಯಮೂರ್ತಿ ಸುಭಾಷ ಆಡಿ ಸೂಚನೆ; ಖಾಲಿ ನಿವೇಶನಗಳ ಸ್ವಚ್ಛತೆಗೆ ಆದ್ಯತೆ ನೀಡಿ

    ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 1.10 ಲಕ್ಷ ಖಾಲಿ ನಿವೇಶನಗಳಿವೆ. ಅವುಗಳ ಸ್ವಚ್ಛತೆಗೆ ಕ್ರಮ ವಹಿಸಿ, ಮಾಲೀಕರನ್ನು ಜವಾಬ್ದಾರರನ್ನಾಗಿಸಿ ನೋಟಿಸ್ ಜಾರಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯ ಸಮಿತಿಯ ಅಧ್ಯಕ್ಷ, ನ್ಯಾಯಮೂರ್ತಿ ಸುಭಾಷ ಬಿ. ಆಡಿ ಸೂಚಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹಾನಗರ ಸ್ವಚ್ಛತೆ ಹಾಗೂ ಹಸಿರೀಕರಣಕ್ಕೆ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
    ಅವಳಿನಗರ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕುರಿತು ಹಲವು ಸಭೆಗಳಲ್ಲಿ ತಿಳಿಸಲಾಗಿದೆ. ಆದರೂ ನಿರೀಕ್ಷಿತ ಮಟ್ಟದ ಬದಲಾವಣೆ ಕಾಣುತ್ತಿಲ್ಲ. ಮಹಾನಗರದಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯವನ್ನು ನಿಯಮಾನುಸಾರ ಸಂಗ್ರಹಿಸಿ, ತಾಂತ್ರಿಕ ರೀತಿಯಲ್ಲಿ ವಿಂಗಡಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಹಸಿರು ನ್ಯಾಯಾಧಿಕರಣದ ನಿಯಮಾವಳಿಗಳನ್ನು ಜನಸಾಮಾನ್ಯರಿಗೆ ತಿಳಿಸಲು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
    ಕೆರೆಗಳ ಸ್ವಚ್ಛತೆ ಹಾಗೂ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸಬೇಕು. ನಗರದ ಕೊಳಚೆ ನೀರು, ಚರಂಡಿ, ಶೌಚದ ನೀರು ಕೆರೆಗಳಿಗೆ ಸೇರದಂತೆ ಸಂರಕ್ಷಿಸಬೇಕು. ವಿಶೇಷವಾಗಿ ಕೆಲಗೇರಿ ಮತ್ತು ಉಣಕಲ್ ಕೆರೆಗಳ ಬಗ್ಗೆ ತುರ್ತು ಕ್ರಮ ವಹಿಸಬೇಕು. ಬೀದಿ ಬದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಬೇಕು ಎಂದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ವೇದಿಕೆಯಲ್ಲಿದ್ದರು.
    ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್. ನಿರ್ವಹಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts