More

    ಹೂ ಮಾರುತ್ತಿದ್ದಾಕೆಯ ಮನೆಗೆ ಪ್ರಧಾನಿ ಬಂದಾಗ… ವಿಜಯವಾಣಿ ಜತೆ ಜೀವನದ ಏಳು-ಬೀಳು ಹಂಚಿಕೊಂಡ ಮೀರಾ ಮಾಂಜಿ

    | ರಾಘವ ಶರ್ಮ ನಿಡ್ಲೆ, ಅಯೋಧ್ಯೆ

    ಭವ್ಯ ರಾಮಮಂದಿರ ನಿರ್ಮಾಣದಿಂದಾಗಿ ಉತ್ತರ ಪ್ರದೇಶದ ಧಾರ್ವಿುಕ ನಗರಿ ಅಯೋಧ್ಯೆ ಒಂದೆಡೆ ಕಳೆಗಟ್ಟಿದ್ದರೆ, ಮತ್ತೊಂದೆಡೆ ನಗರದ ರಾಜ್​ಘಾಟ್​ನ ಕಂದರ್​ಪುರ್ ಕಾಲನಿಯಲ್ಲಿರುವ ಮೀರಾ ಮಾಂಜಿ ಮನೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಇಡೀ ದೇಶದ ಗಮನಸೆಳೆದಿದೆ. ಪ್ರಧಾನಮಂತ್ರಿ ನಮ್ಮ ಕಾಲನಿಗೆ (ಬಸ್ತಿ) ಬಂದರು ಎನ್ನುವುದೇ ಕಾಲನಿಯ ನಿವಾಸಿಗರಲ್ಲೆರನ್ನೂ ಸಂತಸದ ಅಲೆಯಲ್ಲಿ ತೇಲಿಸಿದೆ.

    ಮೀರಾ ಮಾಂಜಿ ಮತ್ತು ಕುಟುಂಬಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದಾಗಿ ಸೋರುತ್ತಿದ್ದ ಮನೆಯಿಂದ ಮುಕ್ತಿ ಸಿಕ್ಕಿದೆ. ಮೀರಾ ತನ್ನ ಪತಿ ಸೂರಜ್ ಕುಮಾರ್ ಮತ್ತು ಮಕ್ಕಳೊಂದಿಗೆ ಬಟ್ಟೆ, ಪ್ಲಾಸ್ಟಿಕ್​ಗಳಿಂದ ಕವರ್ ಮಾಡಿದ್ದ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಅದಕ್ಕೆ ಸರಿಯಾಗಿ ಬಾಗಿಲುಗಳೂ ಇರಲಿಲ್ಲ. ಆದರೆ, ಪಿಎಂ ಆವಾಸ್ ಯೋಜನೆಯಿಂದಾಗಿ ಇಟ್ಟಿಗೆ, ಸಿಮೆಂಟ್​ನಿಂದ ನಿರ್ವಣಗೊಂಡ ಮನೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಮೊದಲು ಮಳೆಗಾಲದಲ್ಲಿ ನೀರು ಸೋರಿ, ಮನೆಯಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಸಣ್ಣ ಮಕ್ಕಳಿಗಂತೂ ತೀವ್ರ ಸಮಸ್ಯೆಯಾಗುತ್ತಿತ್ತು. ಬಡವರಿಗೆ ಮನೆ ಕಟ್ಟಲು ನೆರವಾದ ಈ ಯೋಜನೆ ಬದುಕಿಗೆ ಹೊಸ ಆಶಾಕಿರಣ ಎನ್ನುತ್ತಾರೆ ಮೀರಾ ಮಾಂಜಿ.

    ಉಚಿತ ಸಿಲಿಂಡರ್ ಒದಗಿಸುವ ಉಜ್ವಲಾ ಯೋಜನೆಗೆ ಮೀರಾ ಮಾಂಜಿ ಸೇರ್ಪಡೆಯೊಂದಿಗೆ ಲಾಭಾರ್ಥಿಗಳ ಸಂಖ್ಯೆ 10 ಕೋಟಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮೀರಾ ನಿವಾಸಕ್ಕೆ ಭೇಟಿನೀಡಿದರು. ‘ಡಿ.30ರಂದು ಮೋದಿಯವರ ಭೇಟಿಗೆ ಮುನ್ನ ಬಂದ ಕೆಲ ವ್ಯಕ್ತಿಗಳು, 1 ಗಂಟೆ ಒಳಗಾಗಿ ನಿಮ್ಮ ಮನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುತ್ತಿದ್ದಾರೆ, ತಯಾರಿ ಮಾಡಿಕೊಳ್ಳಿ ಎಂದಾಗ ನನಗೆ ದಿಕ್ಕೇ ತೋಚದಂತಾಗಿತ್ತು. ತಕ್ಷಣವೇ ಪಕ್ಕದಲ್ಲಿದ್ದ ಅಂಗಡಿಗೆ ತೆರಳಿ ಚಹಾ ಹುಡಿ ತೆಗೆದುಕೊಂಡು ಬಂದೆ. ಭದ್ರತಾ ಸಿಬ್ಬಂದಿ ಟೀಪುಡಿ ಹಾಗೂ ಚಹಾವನ್ನು ಪರಿಶೀಲಿಸಿದ ನಂತರವೇ ಮೋದಿಯವರಿಗೆ ನೀಡಲು ಒಪ್ಪಿದರು’ ಎಂದು ಮೀರಾ ವಿಜಯವಾಣಿಗೆ ತಿಳಿಸಿದರು.

    ‘ನಮ್ಮ ನೋವು, ದುಃಖಗಳನ್ನು ಯಾರೂ ಕೇಳುವವರಿಲ್ಲ. ಎಲ್ಲವನ್ನೂ ನುಂಗಿಕೊಂಡು ಬಂದಿದ್ದೇವೆ. ಮೋದಿಯವರನ್ನು ಟಿವಿಯಲ್ಲಷ್ಟೇ ನೋಡಿದ್ದೆವು. ಆದರೆ, ಮನೆಗೆ ಅತಿಥಿಯಾಗಿ ಬಂದದ್ದು ನನ್ನ ಸೌಭಾಗ್ಯ’ ಎಂದು ಸಂತಸ ಹಂಚಿಕೊಂಡರು. ಉಜ್ವಲಾ ಸಿಲಿಂಡರ್ ಬರುವ ಮುನ್ನ ನಾಲ್ಕು ಕೆಜಿ ತೂಕದ ಸಿಲಿಂಡರ್ ಮತ್ತು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ 10 ಕೆಜಿ ಅಕ್ಕಿ, ಬೇಳೆ ಈಗಲೂ ಬರುತ್ತಿದೆ. ಸರ್ಕಾರ ದಿನದಲ್ಲಿ ಮೂರು ಬಾರಿ ಕುಡಿಯುವ ನೀರನ್ನೂ ಪೂರೈಸುತ್ತಿದೆ. ಮೊದಲು ನೀರಿನ ವ್ಯವಸ್ಥೆಯೇ ಇರಲಿಲ್ಲ ಎಂದರು ಮೀರಾ.

    ಮುಂಬೈನಿಂದ ವಾಪಸ್ ಬಂದಿದ್ದೇಕೆ?: 10ನೇ ತರಗತಿ ಪೂರ್ಣಗೊಳಿಸಿ, ಬಡತನದಿಂದಾಗಿ 11ನೇ ತರಗತಿಗೆ ಓದು ನಿಲ್ಲಿಸಿದ ಮೀರಾ, ಸೂರಜ್​ರನ್ನು 10 ವರ್ಷಗಳ ಹಿಂದೆ ವಿವಾಹವಾದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆನ್ನುವುದು ದಂಪತಿಯ ಹೆಬ್ಬಯಕೆ. ಸೂರಜ್ ಈ ಹಿಂದೆ ಮುಂಬೈನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮನೆಬಾಡಿಗೆಗೇ 7000 ರೂ. ನೀಡಬೇಕಿದ್ದರಿಂದ ಅಯೋಧ್ಯೆಗೆ ವಾಪಸ್ ಬಂದರು. ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 6 ವರ್ಷದ ಮಗಳು ನೈನಾ ಹೆಸರಲ್ಲಿ ಖಾತೆ ತೆರೆಯಲು ಮೀರಾ ಯತ್ನಿಸುತ್ತಿದ್ದಾರೆ.

    ನಾಣ್ಯಸಂಗ್ರಹವೇ ಕಾಯಕ!: ಅಯೋಧ್ಯೆಗೆ ಬರುವ ಭಕ್ತಾದಿಗಳು ನಂಬಿಕೆಯ ಹೆಸರಲ್ಲಿ ಸರಯೂ ನದಿಗೆ ನಾಣ್ಯಗಳನ್ನು ಎಸೆಯುತ್ತಾರೆ. ಕೆಲವರಿಗೆ ಈ ನಾಣ್ಯಗಳನ್ನು ಸಂಗ್ರಹಿಸುವುದೇ ಕೆಲಸ ಮತ್ತು ಜೀವನೋಪಾಯದ ಹಾದಿ. ಅಂಥವರಲ್ಲಿ ಸೂರಜ್ ಕುಮಾರ್ ಮಾಂಜಿ ತಂದೆ ಧನಿರಾಮ್ ಮಾಂಜಿ ಕೂಡ ಒಬ್ಬರಾಗಿದ್ದರು. ನದಿಯಿಂದ ನಾಣ್ಯಗಳನ್ನು ತೆಗೆದು ತಮ್ಮ ಮಾಲೀಕನಿಗೆ ನೀಡುತ್ತ ಸಂಪಾದನೆ ಮಾಡುತ್ತಿದ್ದೆ ಎಂದು ನೆನಪಿಸಿಕೊಂಡ ಧನಿರಾಮ್ ಮಾಂಜಿ, ನೆಟ್ ಬಳಸಿಕೊಂಡು ನಾಣ್ಯ, ನೋಟುಗಳನ್ನು ಎತ್ತುತ್ತಿದ್ದೆವು. ದಿನಕ್ಕೆ 200 ರೂ. ಸಂಗ್ರಹವಾದರೆ ಅದರಲ್ಲಿ ಮಾಲೀಕರು ನಮಗೆ 100 ರೂ. ನೀಡುತ್ತಿದ್ದರು. ಅದರಿಂದಲೇ ಜೀವನ ಸಾಗುತ್ತಿತ್ತು ಎಂದರು. ಪಿಎಂ ಆವಾಸ್ ಯೋಜನೆಯಲ್ಲಿ ಸೂರಜ್ ಹೆತ್ತವರೂ ಮನೆ ಕಟ್ಟಿಸಿಕೊಂಡಿದ್ದಾರೆ.

    ಯೋಗಿಯೇ ಬೇಕಂತೆ!: ಕಂದರ್​ಪುರ್ ಕಾಲನಿ ನಿವಾಸಿ ರಾಮ್​ಸ್ ಮಾಂಜಿ, ಈ ರಾಜ್ಯಕ್ಕೆ ಮುಂದೆಯೂ ಯೋಗಿ ಆದಿತ್ಯನಾಥರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ವಿಜಯವಾಣಿ ಜತೆ ಮಾತನಾಡುತ್ತ ಹೇಳಿದರು. ‘ಪಂಜಾಬ್​ನ ಲೂಧಿಯಾನಕ್ಕೆ ಕೆಲಸ ನಿಮಿತ್ತ ಹೋಗಿಬರುತ್ತಿದ್ದೆ. ಆಗ ಅಯೋಧ್ಯೆಗೆ ಬಸ್ ಬಿಡಿ, ರೈಲಿನ ವ್ಯವಸ್ಥೆಯೂ ಸರಿಯಾಗಿ ಇರಲಿಲ್ಲ. ಈಗ ಅಯೋಧ್ಯೆ ಜನಮನದಲ್ಲಿ ನೆಲೆ ನಿಲ್ಲುವಂತಾಗಿದೆ. ಇಂಥದ್ದೊಂದು ಅತ್ಯಾಧುನಿಕ ರೈಲ್ವೇ ನಿಲ್ದಾಣ ಅಯೋಧ್ಯೆಯಲ್ಲಿ ನೋಡುತ್ತೇವೆ ಎಂದು ಊಹಿಸಿಯೂ ಇರಲಿಲ್ಲ’ ಎಂದು ಖುಷಿ ಹಂಚಿಕೊಂಡರು. ನಾನು ಹಿಂದೆ ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತಿದ್ದೆ. ಆದರೆ, ಯೋಗೀ ಬಂದ ಮೇಲೆ ಗೂಂಡಾಗಿರಿ ನಿಂತಿದೆ. ರಾಜ್ಯಾದ್ಯಂತ ಅಭಿವೃದ್ಧಿ ಕಾಣುತ್ತಿದ್ದೇವೆ’ ಎಂದು ಕುನ್ನುಲಾಲ್ ಮಾಂಜಿ ದನಿಗೂಡಿಸಿದರು.

    ಸರಯೂ ದಂಡೆಯಲ್ಲಿ ಹೂವು ಮಾರಾಟ
    ಮೀರಾ ಪತಿ ಸೂರಜ್ ಕುಮಾರ್ ದಿನಗೂಲಿ ಕಾರ್ವಿುಕ. ಕೆಲಸವಿದ್ದ ದಿನಗಳಲ್ಲಿ 400 ರೂಪಾಯಿ ದಿನಗೂಲಿ ಪಡೆಯುತ್ತಾರೆ. ಮೀರಾ ಅವರು ಸರಯೂ ನದಿ ದಂಡೆಯಲ್ಲಿ ದೇಗುಲಕ್ಕೆ ಅರ್ಪಿಸುವ ಹೂವುಗಳನ್ನು ಮಾರುತ್ತಾರೆ. ‘ಮುಂಜಾನೆ 3 ಗಂಟೆಗೆ ಎದ್ದು ಸರಯೂ ನದಿ ದಂಡೆಗೆ ತೆರಳಿ, 1 ಕೆಜಿ ಹೂವು ಖರೀದಿ ಮಾಡುತ್ತೇನೆ. ಕೆಜಿ ಹೂವಿಗೆ 100 ರೂ. ನೀಡಬೇಕು. ಎಲ್ಲಾ ಹೂವು ಮಾರಾಟವಾದರೆ ಅಂದಾಜು 300 ರೂ. ಸಂಪಾದಿಸುತ್ತೇನೆ. ಹೂವು ಮಾರಾಟಕ್ಕೆ ತೆರಳಿದ್ದಾಗ ಪತಿ ಸೂರಜ್ ಮಕ್ಕಳನ್ನು ನೋಡಿಕೊಳ್ಳುತ್ತಾರೆ’ ಎನ್ನುವ ಮೀರಾ, ತಿಂಗಳ ಕೊನೆಗೆ ನಮ್ಮಿಬ್ಬರಲ್ಲೂ ಹಣ ಉಳಿಯುವುದಿಲ್ಲ. ಬಂದ ಹಣ ನಿತ್ಯದ ಬಳಕೆಗೇ ವ್ಯಯವಾಗುತ್ತದೆ ಎನ್ನುತ್ತಾರೆ.

    15 ಸಾವಿರ ಕೊಟ್ರೆ 1 ಗಂಟೆಗೆ 55 ಸಾವಿರ ರೂ.!? ರೀಲ್ಸ್​ ಸ್ಟಾರ್​ ಅಮಲಾಳ ಹಗರಣ ಬಯಲು, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts