ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದಲ್ಲಿ ಕಳೆದ ಹತ್ತು ವರ್ಷದ ಆಡಳಿತದಲ್ಲಿ ಜಗತ್ತೇ ನಿಬ್ಬೆರಗಾಗುವ ರೀತಿಯಲ್ಲಿ ಅಭಿವೃದ್ಧಿಯ ಹೊಳೆ ಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರೇ ಭಾರತಕ್ಕೆ ಗ್ಯಾರಂಟಿಯಾಗಿದ್ದು, ಈಗ ದೇಶದ ಅಭಿವೃದ್ಧಿ ಕುರಿತು ಮಾತನಾಡುತ್ತಿರುವ ಕಾಂಗ್ರೆಸ್ಸಿನದು ಸುಳ್ಳುಗಳ ಗ್ಯಾರಂಟಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಟೀಕಿಸಿದ್ದಾರೆ.
ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ನಡೆಯಲಿರುವುದು ನಗರಸಭೆ ಸದಸ್ಯರ ಅಥವಾ ಎಂಎಲ್ಎ ಆಯ್ಕೆ ಮಾಡುವ ಚುನಾವಣೆಯಲ್ಲ. ಇದು ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಮಹತ್ತರ ಚುನಾವಣೆ ಎಂದರು.
ದೇಶ ವಿಭಜನೆ ಮಾತು
ಕರ್ನಾಟಕದ ಕಾಂಗ್ರೆಸ್ ಸಂಸದನೋರ್ವ ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ದೇಶವನ್ನು ಉತ್ತರ-ದಕ್ಷಿಣ ಎಂದು ವಿಭಜನೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಅಥವಾ ಕಾಮಗಾರಿ ಸುಲಭವಾಗಲೆಂದು ಸರ್ಕಾರಗಳು ದೇಶದಲ್ಲಿ ರಾಜ್ಯ ವಿಭಜನೆ ಮಾಡುತ್ತದೆ. ಆದರೆ, ಜಾತಿ, ಭೌಗೋಳಿಕ ಹಾಗೂ ಧರ್ಮದ ಆಧಾರದಲ್ಲಿ ದೇಶವನ್ನು ಕಾಂಗ್ರೆಸ್ ವಿಭಜನೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.
ಮಹಿಳೆ ಮೂರ್ಖಳಲ್ಲ
ದೇಶದ ಬಡ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಇದನ್ನು ಹೇಳುವುದು ಸುಲಭ. ಆದರೆ, ಜಾರಿಗೆ ತರಲು ಅಸಾಧ್ಯ. ಏಕೆಂದರೆ, ದೇಶದಲ್ಲಿ ಸುಮಾರು 70 ಕೋಟಿಯಷ್ಟು ಮಹಿಳೆಯರಿದ್ದು, 70 ಲಕ್ಷ ಕೋಟಿ ಹಣ ಬೇಕಾಗುತ್ತದೆ. ಇದು ಸಾಧ್ಯವೇ? ಇದೊಂದು ನಕಲಿ ಹಾಗು ಸುಳ್ಳು ಗ್ಯಾರಂಟಿಯಾಗಿದೆ. ಕಾಂಗ್ರೆಸ್ ನಾಯಕರು ಮಹಿಳೆಯರು ಮೂರ್ಖರೆಂದು ಭಾವಿಸಿದಂತಿದೆ ಎಂದರು.
ಅಭಿವೃದ್ಧಿ ಪರ್ವ
2014ರಿಂದ 2024ರ ವರೆಗೆ ಬಿಜೆಪಿ ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡಿದ ಲೇಖಿ, ದೇಶದಲ್ಲಿ ಮೂಲಸೌಲಭ್ಯವನ್ನು ಹೆಚ್ಚಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿದಿನ ದೇಶದಲ್ಲಿ 3.50 ಕಿ.ಮೀ. ರಸ್ತೆ ನಿರ್ಮಾಣ ಆಗುತ್ತಿತ್ತು. ಆದರೀಗ ಪ್ರತಿದಿನ 30 ಕಿ.ಮೀ. ಹೆದ್ದಾರಿ ನಿರ್ಮಾಣ ಆಗುತ್ತಿದೆ. ಆಯುಷ್ಮಾನ್ ಭಾರತ್ ಮೂಲಕ ಜನರಿಗೆ ಆರೋಗ್ಯ ಭದ್ರತೆ, ಅನ್ನ ಯೋಜನಾ ಮೂಲಕ ರೇಷನ್, ಮನೆಮನೆಗೆ ನಳ ಸಂಪರ್ಕ, 3 ಕೋಟಿ ಮನೆ ನಿರ್ಮಾಣ, ವಂದೇ ಭಾರತ್ ರೈಲು, ವಿಮಾನ ನಿಲ್ದಾಣಗಳ ಹೆಚ್ಚಳ ಹೀಗೆ ಅಭಿವೃದ್ಧಿ ಪರ್ವವೇ ಆಗಿದೆ. 1 ರೂ.ಗೆ ಸ್ನಾನಿಟರಿ ಪ್ಯಾಡ್ ನೀಡಲಾಗುತ್ತಿದ್ದು, ದೇಶದ ಮಹಿಳೆಯರ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯ ಕಾಳಜಿ ವಹಿಸಿದೆ ಎಂದರು.
ತೆರಿಗೆ ಹಣ ಹಂಚಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ತೆರಿಗೆ ಹಣ ನೀಡದೆ ಕೇಂದ್ರ ವಂಚಿಸುತ್ತಿದೆ ಎಂದು ಹೇಳುತ್ತಾರೆ. ಸಂವಿಧಾನದ 280ನೇ ಆರ್ಟಿಕಲ್ ಪ್ರಕಾರ ತೆರಿಗೆ ಹಣವನ್ನು ಆಯಾ ರಾಜ್ಯಕ್ಕೆ ಹಂಚಿಕೆ ಮಾಡಬೇಕಾಗುತ್ತದೆ. ಅದರಂತೆ, ಕರ್ನಾಟಕಕ್ಕೆ 6,500 ಕೋಟಿ ರೂ. ನೀಡಲಾಗಿದೆ. ಅಲ್ಲದೆ, ಜಿಎಸ್ಟಿ ಅಳವಡಿಕೆಯಿಂದಾಗಿ ಕರ್ನಾಟಕಕ್ಕೆ ಈ ಬಾರಿ ಶೇ.6ರಷ್ಟು ಹೆಚ್ಚು ತೆರಿಗೆ ಹಣ ನೀಡಲಾಗಿದೆ ಎಂದು ಮೀನಾ ಲೇಖಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ, ಪದಾಧಿಕಾರಿಗಳಾದ ಉದಯಕುಮಾರ್ ಶೆಟ್ಟಿ, ವಿಜಯಕುಮಾರ್ ಉದ್ಯಾವರ, ಶ್ಯಾಮಲಾ ಕುಂದರ್, ಅಶ್ವಿನಿ ಶೆಟ್ಟಿ, ಶಿಲ್ಪಾ ಸುವರ್ಣ ಇತರರಿದ್ದರು.
ಪಕ್ಷ ಸೂಚಿಸಿದರೆ ಕುಮಾರಸ್ವಾಮಿ ಪರ ಪ್ರಚಾರ
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ದೇಶದ ಜನರ ಹಿತ ಕಾಯಲು ಹಾಗೂ 2047ರಲ್ಲಿ ಭಾರತ ವಿಶ್ವದ ನಂ.1 ದೇಶ ಆಗಬೇಕೆಂದು ಪ್ರಧಾನಿ ಮೋದಿ ಹೋರಾಟ ನಡೆಸಿದ್ದಾರೆ. ಅದಕ್ಕೆ ನನ್ನ ಬೆಂಬಲ ಇದೆ. ಹೀಗಾಗಿಯೇ ಬಿಜೆಪಿಯಿಂದ ನನಗೆ ಟಿಕೆಟ್ ಸಿಗದಿದ್ದರೂ ಸಹ ನಾನು ದೇಶದ ಹಿತದ ದೃಷ್ಟಿಯಿಂದ ಹಾಗೂ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಆಶಯದಿಂದ ಬಿಜೆಪಿ ಸೇರಿದ್ದೇನೆ. ನಾನು ಪಕ್ಷೇತರ ಸಂಸದನಾಗಿದ್ದರೂ ಸಹ ಮಂಡ್ಯದ ಅಭಿವೃದ್ಧಿಗೆ 3 ಸಾವಿರ 500 ಕೋಟಿ ರೂ,. ನೀಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ನಾನು ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ, ಬಿಜೆಪಿಯ ಪ್ರಚಾರ ಪಟ್ಟಿಯಲ್ಲಿ ನನಗೆ ಎಲ್ಲಿ ಹೋಗಲು ಸೂಚಿಸುತ್ತಾರೋ ನಾನು ಅಲ್ಲಿಗೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಇಂದು ಉಡುಪಿಗೆ ಬಂದಿದ್ದು, ನಾಳೆ ಮೈಸೂರಿಗೆ ಹೋಗುತ್ತೇನೆ. ಕುಮಾರಸ್ವಾಮಿ ಪರವಾಗಿ ಪಕ್ಷ ನನಗೆ ಪ್ರಚಾರ ಮಾಡಲು ತಿಳಿಸಿದರೆ ಖಂಡಿತ ಹೋಗುತ್ತೇನೆ ಎಂದರು.
ದರ್ಶನ್ಗೆ ನಾನು ಕಳುಹಿಸಿಲ್ಲ
ನಟ ದರ್ಶನ್ ಬೇರೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ನಾನು ಅನ್ಯ ಪಕ್ಷದ ಪರ ಪ್ರಚಾರ ಮಾಡುವಂತೆ ದರ್ಶನ್ಗೆ ಹೇಳಿಲ್ಲ. ಈ ಹಿಂದೆ ನಾನು ಮಂಡ್ಯದಲ್ಲಿ ಸ್ಪರ್ಧಿಸಿದಾಗಲೂ ನನ್ನ ಪರ ಪ್ರಚಾರ ಮಾಡಲು ಬರುವಂತೆಯೂ ಹೇಳಿರಲಿಲ್ಲ. ನಟ ಯಶ್ ಅವರೊಂದಿಗೆ ಬಂದು, ‘ನಿಮ್ಮನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಈ ವಿಚಾರದಲ್ಲೂ ಸಹ ಮಾಧ್ಯಮದಲ್ಲಿ ಅಸಮಂಜಸ ಮಾಇತಿ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.