More

    ಬಡತನದಲ್ಲೂ ಲಕ್ಷ್ಮವ್ವಳ ಸಾರ್ಥಕ ಸೇವೆ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ
    ಆಕೆ ಆರ್ಥಿಕವಾಗಿ ಬಡತನದಲ್ಲಿರುವ ಮಹಿಳೆ. ಆದರೆ, ಹೃದಯ ಶ್ರೀಮಂತೆ. ತಮ್ಮ ಕಷ್ಟದಲ್ಲಿಯೂ ಮತ್ತೊಬ್ಬರ ನೆರವಿಗೆ ಧಾವಿಸುವ ಸಹೃದಯಿ ಸಮಾಜ ಸೇವಕಿ. ಮನೆಯಿಂದಲೇ ಸಣ್ಣ ಉದ್ಯೋಗ ಮಾಡುತ್ತ ಅನಾಥ, ನಿರ್ಗತಿಕ ಹಾಗೂ ವಯೋವೃದ್ಧರ ಸೇವೆ ಮಾಡಿ ಸಾರ್ಥಕ ಬದುಕು ಸಾಗಿಸಿ ಮಾದರಿ ಮಹಿಳೆ ಎನಿಸಿಕೊಂಡಿದ್ದಾರೆ.

    ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮದ ಮಹಿಳೆ ಲಕ್ಷ್ಮವ್ವ ಪರಮೇಶಪ್ಪ ಮೆಳ್ಳಿಗಟ್ಟಿ ಬಡತನದಲ್ಲಿಯೂ ಸಮಾಜ ಸೇವೆ ಮಾಡುತ್ತಿರುವವರು. ಸ್ವಂತ ಜಮೀನೂ ಇಲ್ಲ. ಪತಿಯೊಂದಿಗೆ ಕೂಲಿ ಮಾಡಿದರೆ ಮಾತ್ರ ಬದುಕು ಸಾಗಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿಯೂ ಮೂವರು ಗಂಡು ಮಕ್ಕಳಿಗೆ ಪದವಿ ಶಿಕ್ಷಣ, ಮಗಳಿಗೆ ಹೈಸ್ಕೂಲ್ ಶಿಕ್ಷಣ ಕೊಡಿಸಿದ್ದಾರೆ. ಮನೆಯಲ್ಲಿ ಚಿಪ್ಸ್ ಮಾಡಿ ಮಾರಾಟ ಮಾಡುವುದು. ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ಊರೂರಿನಲ್ಲಿ ಹೋಟೆಲ್, ಕುರುಕಲು ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಬರುವ ಅತ್ಯಲ್ಪ ಆದಾಯದಲ್ಲೇ ಹಿರಿಯರು, ಅನಾಥರು, ನಿರ್ಗಗತಿಕರಿಗೆ ಸಹಾಯ ಮಾಡುತ್ತ ಬಂದಿದ್ದಾರೆ.

    ಉದ್ಯೋಗಕ್ಕಾಗಿ ಸಾಲ ಮಾಡಿ ಸಾಲ ತೀರಿಸಲಾಗದೇ ಚಿಂತೆಗೀಡಾದ ಲಕ್ಷ್ಮವ್ವ ತನ್ನ ಕಿಡ್ನಿ ಮಾರಾಟ ಮಾಡಿ ಸಾಲತೀರಿಸುವ ನಿರ್ಧಾರಕ್ಕೆ ಬಂದಿದ್ದರು. ಆಗ ಬೆಂಬಲವಾಗಿ ನಿಂತ ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿದರು. ಕುಮಾರಸ್ವಾಮಿಯವರು ಮಹಿಳೆಯ ಸಮಾಜ ಸೇವೆಯನ್ನು ಗೌರವಿಸಿ ಕುಟುಂಬ ನಿರ್ವಹಣೆಗೆ 3 ಆಕಳು ಮತ್ತು ಭೂ ಒಡೆತನ ಯೋಜನೆಯಡಿ ಶಿಗ್ಲಿ-ಬಸನಕೊಪ್ಪ ಸಮೀಪ 2.26 ಎಕರೆ ಜಮೀನು ಕೊಡಿಸಿದ್ದಾರೆ.

    ಬಡತನದಲ್ಲೂ ವೃದ್ಧಾಶ್ರಮ: ಭೂಒಡೆತನ ಯೋಜನೆಯಡಿ ಪಡೆದ ಜಮೀನಿನಲ್ಲಿಯೇ 2 ವರ್ಷದಿಂದ ವೃದ್ಧಾಶ್ರಮ ನಡೆಸಲಾಗುತ್ತಿದೆ. ಜಮೀನಿನಲ್ಲಿಯೇ ಬೋರ್‌ವೆಲೆ ಹಾಕಿಸಿ ದೊಡ್ಡ ತಗಡಿನ ಶೆಡ್‌ನಿರ್ಮಿಸಲಾಗಿದೆ. ತಮ್ಮ ಕುಟುಂಬದ ಆದಾಯದಿಂದಲೇ ವೃದ್ದಾಶ್ರಮ ನಡೆಸುತ್ತಿದ್ದಾರೆ. ಪತಿಯ ತಂದೆಯವರ ಆಸೆಯಂತೆ ‘ಶಿವಪ್ಪನಾಯಕ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ’ ಸ್ಥಾಪಿಸಿ ತಂದೆಯ ಕನಸು ಎಂಬ ಹೆಸರಿನಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದೆ. ಬಸನಕೊಪ್ಪ, ಶಿಗ್ಲಿ, ಲಕ್ಷೇಶ್ವರ, ಕೊಕ್ಕಗೊಂದಿ, ಬೂದಿಹಾಳ ಗ್ರಾಮದ ಅನಾಥ, ನಿರ್ಗತಿಕ, ಅಸಹಾಯಕರಾದ 6 ವೃದ್ಧರು ಇಲ್ಲಿ ಆಶ್ರಯ ಪಡೆದಿದ್ದಾರೆ. ಬಡವರ ಸೇವೆಯೊಂದಿಗೆ ಈ ಕುಟುಂಬದವರು ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಶಿವರಾತ್ರಿ ದಿನ ವಿಶೇಷ ಆಚರಣೆ ಮಾಡುತ್ತಾರೆ.

    ನನಗೀಗ 80 ವರ್ಷ. ನನ್ನ ಕುಟುಂಬದವರೇ ನನ್ನನ್ನು ನಿರ್ಲಕ್ಷಿಸಿದರೂ ಲಕ್ಷ್ಮವ್ವ ಮೆಳ್ಳಿಗಟ್ಟಿ ಹಾಗೂ ಅವರ ಪತಿ ಪರಮೇಶಪ್ಪ ಮತ್ತು ಮಕ್ಕಳು ನನ್ನನ್ನು ತನ್ನ ಕುಟುಂಬದ ಹಿರಿಯಜ್ಜಿಯ ರೀತಿಯಲ್ಲಿ ಜೋಪಾನ ಮಾಡುತ್ತಿದ್ದಾರೆ. ನನ್ನ ಸ್ವಂತ ಮನೆಯಲ್ಲಿರುವಂತಹ ನೆಮ್ಮದಿ ಇಲ್ಲಿದೆ. ಇವರ ಕಾರ್ಯಕ್ಕೆ ಸರ್ಕಾರ, ಜನಪ್ರತಿನಿಧಿಗಳು ಕೈ ಜೋಡಿಸಬೇಕು.
    ತಾಯವ್ವ ಕಿತ್ತೂರ, ಆಶ್ರಯ ಪಡೆದ ವೃದ್ಧೆ

    ಬರುವಾಗ ಏನೂ ತಂದಿಲ್ಲ. ಹೋಗುವಾಗಲೂ ಏನೂ ಒಯ್ಯುವುದಿಲ್ಲ. ಜೀವಿತಾವಧಿಯಲ್ಲಿ ನಾವು ಮಾಡುವ ಕಾರ್ಯಗಳು, ಸೇವೆ ಅಜರಾಮರ ಮತ್ತು ಅದರಲ್ಲಿ ಸಿಗುವ ಸಂತೃಪ್ತಿ ಜೀವನ್ಮುಕ್ತಿಗೆ ರಹದಾರಿ. ನಮ್ಮ ಕುಟುಂಬದ ಜತೆಗೆ ಅನಾಥ, ನಿರ್ಗತಿಕರಿಗೆ ಅನ್ನ, ಆಶ್ತಯ ಕಲ್ಪಿಸುವ ಉದ್ದೇಶದಿಂದ ವೃದ್ದಾಶ್ರಮ ನಡೆಸುತ್ತಿದ್ದೇವೆ. ಇದಕ್ಕೆ ಮಕ್ಕಳೂ ಸಾಥ್ ನೀಡಿದ್ದಾರೆ. ವಿಧಾನಸಬೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ನಮ್ಮ ಕಾರ್ಯ ಶ್ಲಾಘಿಸಿದ್ದಾರೆ. ಈ ವೇಳೆ ಅವರಿಗೆ ವೃದ್ದಾಶ್ರಮಕ್ಕೆ ದಾರಿ, ಬಿಲ್ಡಿಂಗ್, ಬೆಳಕು ಕಲ್ಪಿಸುವಂತೆ ಮನವಿ ಮಾಡಿದ್ದೇವೆ. ಭವಿಷ್ಯದಲ್ಲಿ ಬಡ ಅಂಗವಿಕಲ ಮಕ್ಕಳನ್ನು ಜೋಪಾನ ಮಾಡುವ ಅಪೇಕ್ಷೆ ಇದೆ.
    ಲಕ್ಷ್ಮವ್ವ-ಪರಮೇಶಪ್ಪ, ಸಮಾಜ ಸೇವೆಯಲ್ಲಿ ತೊಡಗಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts