More

    ನೇಹಾ ಹಿರೇಮಠ ಹಂತಕರಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹ: ಮಂಡ್ಯದಲ್ಲಿ ಹಿಂದುಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

    ಮಂಡ್ಯ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ ಹಾಗೂ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಶನಿವಾರ ನಗರದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಜಾಗೃತ ಹಿಂದು ವೇದಿಕೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ‘ಜಸ್ಟಿಸ್ ಫಾರ್ ನೇಹಾ’ ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತರು.
    ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ವೈಯಕ್ತಿಕ ಕಾರಣದಿಂದಾಗಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇದು ಲವ್ ಜಿಹಾದ್ ಅಲ್ಲ, ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದಿದ್ದಾರೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಅವರನ್ನ ಫಯಾಜ್ ಎಂಬಾತ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಾಂಗ್ರೆಸ್ ಸರ್ಕಾರದ ಅತೀವ ಓಲೈಕೆಯಿಂದ ಇಂತಹ ಜಿಹಾದಿ ಕೃತ್ಯ ಹೆಚ್ಚಾಗುತ್ತಿದೆ. ಸಮಾಜಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದು ಆರೋಪಿಸಿದರು.
    ವಿದ್ಯಾರ್ಥಿನಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿ. ಅಧಿಕಾರಸ್ಥರ ಮಕ್ಕಳಿಗೆ ಹೀಗಾದರೆ ಇನ್ನು ಸಾಮಾನ್ಯರ ಗತಿ ಏನು, ಇಲ್ಲಿ ಯಾರು ಸುರಕ್ಷಿತವಾಗಿದ್ದಾರೆ. ಫಯಾಜ್ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ ಇಂತಹ ದುಷ್ಕೃತ್ಯಕ್ಕೆ ಕೈಹಾಕುತ್ತಿದ್ದನೆ. ಪ್ರೀತಿ, ಪ್ರೇಮದ ಬಲೆ ಬೀಸಿ ಹಿಂದು ಯುವತಿಯರನ್ನು ಜಾಲಕ್ಕೆ ಸಿಲುಕಿಸುವ ಪ್ರಸಂಗಗಳು ಆಗಾಗ ನಡೆಯುತ್ತಿವೆ. ಅದರಂತೆ ನೇಹಾ ಪ್ರಕರಣವೂ ಲವ್ ಜಿಹಾದ್‌ನಂತೆ ಗೋಚರಿಸುತ್ತಿದೆ. ಹಾಗಾಗಿ, ಸೂಕ್ತ ತನಿಖೆ ನಡೆಯಬೇಕು. ರಾಜ್ಯದಲ್ಲಿ ಇಂತಹ ಹತ್ಯೆಗಳು ನಡೆಯಬಾರದು. ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ದುಷ್ಕೃತ್ಯ ಮಾಡಿರುವವರನ್ನು ಎನ್‌ಕೌಂಟರ್ ಮಾಡುವಂತ ಕಾನೂನು ಜಾರಿಗೊಳಿಸಬೇಕು. ನೇಹಾ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಅಬ್ಬಾಸ್ ಆಲಿ ಬೋಹ್ರಾ, ಇಂಡುವಾಳು ಸಚ್ಚಿದಾನಂದ, ಅರವಿಂದ್, ಸಿ.ಟಿ.ಮಂಜುನಾಥ್, ಬಿ.ಟಿ.ಶಿವಲಿಂಗಯ್ಯ, ನಿತ್ಯಾನಂದ, ಎಬಿವಿಪಿ ಜಿಲ್ಲಾ ಸಂಚಾಲಕಿ ಸುಗುಣ, ಸುಶ್ಮಿತಾ, ಉಲ್ಲಾಸ್, ಜಾಗೃತ ಹಿಂದೂ ವೇದಿಕೆಯ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts