More

    ಹನೂರಿನಲ್ಲಿ ಸಾಮೂಹಿಕ ಪ್ರಾರ್ಥನೆ

    • ಚಾಮರಾಜನಗರ : ಹನೂರು ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಕ್ರೈಸ್ತರು ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.


    ಹಬ್ಬದ ಅಂಗವಾಗಿ ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿನ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆಯ ದೇಗುಲದಲ್ಲಿ ಭಾನುವಾರ ರಾತ್ರಿ 11.30 ರಿಂದ 2.30ರವರೆಗೆ ಧರ್ಮಗುರು ರೋಷಾನ್ ನೇತೃತ್ವದಲ್ಲಿ ಕೀರ್ತನೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.


    ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬದ ಶುಭ ಸಂದೇಶ ತಿಳಿಸಲಾಯಿತು. ಪೂಜೆ ಹಾಗೂ ಕೀರ್ತನೆಗಳು ಮುಗಿದ ಬಳಿಕ ಸಿಹಿ ವಿತರಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ಆಯಾ ಗ್ರಾಮದ ಚರ್ಚ್‌ಗಳಲ್ಲಿ ಕ್ರೈಸ್ತರು ಪೂಜೆಯಲ್ಲಿ ಪಾಲ್ಗೊಂಡು ಯೇಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.


    ಪಟ್ಟಣದ ವೇಳಾಂಗಣಿ ಆರೋಗ್ಯ ಮಾತೆ ದೇಗುಲದ ಆವರಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಬಹುತೇಕ ಗ್ರಾಮದ ಚರ್ಚ್ ಆವರಣದಲ್ಲಿ ಬಾಲಯೇಸು ಜನಿಸಿದ ಸನ್ನಿವೇಶದ ಚಿತ್ರಣವನ್ನೊಳಗೊಂಡ ಗೋದಲಿ ನಿರ್ಮಾಣ ಮಾಡಿ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಗೋದಲಿಯನ್ನು ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯಿತು.


    ವಿವಿಧೆಡೆ ಕ್ರಿಸ್‌ಮಸ್: ಹನೂರು ಸೇರಿದಂತೆ ಮಾರ್ಟಳ್ಳಿ, ಹೂಗ್ಯಂ, ಸಂದನಪಾಳ್ಯ, ಸುಳವಾಡಿ, ವಡ್ಡರದೊಡ್ಡಿ, ಕಾಮಗೆರೆ, ತೊಮಿಯಾರ್‌ಪಾಳ್ಯ, ಪುಷ್ಪಪುರ, ಅಣಗಳ್ಳಿದೊಡ್ಡಿ, ಕೌದಳ್ಳಿ, ಪಿ.ಜಿ ಪಾಳ್ಯ ಹಾಗೂ ಕ್ಷೇತ್ರ ವ್ಯಾಪ್ತಿಯ ಇನ್ನಿತರ ಗ್ರಾಮಗಳಲ್ಲಿ ಕ್ರೈಸ್ತರು ಆಯಾ ಗ್ರಾಮದ ಚರ್ಚ್‌ನ ಧರ್ಮಗುರುಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ರಾತ್ರಿ ಕ್ಷೇತ್ರ ವ್ಯಾಪ್ತಿಯಲ್ಲಿನ ಚರ್ಚ್‌ಗಳು ವಿವಿಧ ವಿದ್ಯುತ್ ದೀಪಲಂಕಾರದಿಂದ ಕಂಗೊಳಿಸಿದವು.


    ಶಾಸಕ ಎಂ.ಆರ್ ಮಂಜುನಾಥ್ ಭೇಟಿ : ಶಾಸಕ ಎಂ.ಆರ್.ಮಂಜುನಾಥ್ ಸೋಮವಾರ ಕ್ಷೇತ್ರ ವ್ಯಾಪ್ತಿಯ ಸಂದನಪಾಳ್ಯ, ಸುಳವಾಡಿ, ಮಾರ್ಟಳ್ಳಿ, ವಡ್ಡರದೊಡ್ಡಿ, ಕೌದಳ್ಳಿ, ತೊಮಿಯಾರ್‌ಪಾಳ್ಯ, ಮರಿಯಮಂಗಲ, ಪ್ರಕಾಶ್‌ಪಾಳ್ಯ, ಪಿ.ಜಿ ಪಾಳ್ಯ ಹಾಗೂ ಇನ್ನಿತರೆ ಚರ್ಚ್‌ಗಳಿಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಧರ್ಮಗುರುಗಳನ್ನು ಸನ್ಮಾನಿಸಿ ಸಿಹಿ ವಿತರಿಸಿ ಹಬ್ಬದ ಶುಭಾಶಯ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts