More

    ಮಹಿಳೆಯರನ್ನು ನೋಡುವ ಮನೋಭಾವ ಬದಲಾಗಲಿ

    ಮಾನ್ವಿ: ಮಹಿಳೆಯರ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಕಾಯ್ದೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದೆ. ಆದರೆ, ಮಹಿಳೆಯರ ಬಗೆಗಿನ ಪುರುಷರ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ. ಇದರಿಂದಾಗಿ ಅನೇಕ ಕಡೆಗಳಲ್ಲಿ ಮಹಿಳೆಯರ ಮೇಲೆ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ದೀಪಾ ಜಿ.ಮರ್ನೆಕರ್ ಹೇಳಿದರು.

    ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

    ಸಾಮಾಜಿಕವಾಗಿ ತೆಗೆದುಕೊಳ್ಳುವ ಅನೇಕ ನಿರ್ಧಾರಗಳಲ್ಲಿ ಸ್ತ್ರೀಯರಿಗೆ ಆದ್ಯತೆ ನೀಡಬೇಕು. ಮಹಿಳೆಯರನ್ನು ಕಾಣುವ ಮನೋಭಾವ ಬದಲಾಗಬೇಕು. ಸಂವಿಧಾನದ ಕಲಂ 15 ರಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷವಾದ ಕಾನೂನುಗಳ ಮೂಲಕ ಮೀಸಲಾತಿಯನ್ನು ನೀಡಲಾಗಿದೆ ಎಂದು ನ್ಯಾಯಾಧೀಶೆ ದೀಪಾ ಜಿ.ಮರ್ನೆಕರ್ ತಿಳಿಸಿದರು.

    ಕಿರಿಯ ಶ್ರೇಣಿ ನ್ಯಾಯಾಧೀಶ ಆಶಪ್ಪ ಬಿ.ಸಣ್ಣಮನಿ ಮಾತನಾಡಿ, ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿರುವ ಸಮಾನತೆ ಸಂಪೂರ್ಣವಾಗಿ ಲಭಿಸಿದೆಯೇ ಎನ್ನುವುದರ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ಪತಿ-ಪತ್ನಿ ಸೌಹಾರ್ದ, ನಂಬಿಕೆ, ಪ್ರೀತಿ, ವಿಶ್ವಾಸ, ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಕುಟುಂಬದಲ್ಲಿ ಸುಂದರವಾದ ವಾತಾವರಣ ಕಾಣಲು ಸಾಧ್ಯ ಎಂದರು.

    ಹಿರಿಯ ವಕೀಲೆ ಲಕ್ಷ್ಮೀದೇವಿ ನಾಯಕ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳ ಕುರಿತು ಮತ್ತು ವಕೀಲ ಯಲ್ಲಪ್ಪ ಬಾದರದಿನ್ನಿ ಕುಟುಂಬ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ವಕೀಲರ ಪತ್ನಿಯರು ಮತ್ತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಗೌರವಿಸಲಾಯಿತು.

    ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಾಟೀಲ್, ವಕೀಲರಾದ ಚಂದ್ರಕಲಾ, ಶ್ರೀದೇವಿ, ಆರ್ಷಿಯಾ ಹುಮಾ, ಸ್ಟೇಲ್ಲಾ ಶೆರ್ಲಾಟ್, ಗುಂಡಮ್ಮ ಕೊಟ್ನೆಕಲ್, ಜರೀನಾಬೇಗಂ, ರಾಣಿ ಇಂದಿರಾ ಸುಹಾಸಿನಿ ನಾಯಕ, ಪೂಜಾ, ಐಶ್ವರ್ಯ, ವೆಂಕಟರತ್ನ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts