More

    ಕೈಸೇರದ ಅನುಪಾದನಾ ವರದಿ

    ರಾಣೆಬೆನ್ನೂರ : ತಾಲೂಕು ಪಂಚಾಯಿತಿಯ ಐದು ವರ್ಷದ ಅಧಿಕಾರಾವಧಿ ಮುಗಿಯತ್ತ ಬಂದರೂ ಈವರೆಗೂ ಒಂದೇ ಒಂದು ಬಾರಿ ಅನುಪಾದನಾ ವರದಿ ನೀಡಿಲ್ಲ. ಇವರು ಮಾಹಿತಿ ಕೊಡದಿರುವುದನ್ನು ನೋಡಿದರೆ, ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರ ನಡೆದಿದೆ ಎನ್ನುವ ಅನುಮಾನ ಬರುತ್ತಿದೆ ಎಂದು ತಾಪಂ ಸದಸ್ಯ ಭರಮಪ್ಪ ಊರ್ವಿು ಆರೋಪಿಸಿದರು.

    ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಎಷ್ಟೋ ಕಡೆ ಕಾಮಗಾರಿ ಮಾಡದೆ ಬಿಲ್ ಪಾಸು ಮಾಡಿಕೊಂಡಿದ್ದಾರೆ. 2019ರಲ್ಲಿ ಅತಿವೃಷ್ಟಿಯಿಂದ ಎಲೆ ಬಳ್ಳಿ ತೋಟ ಹಾನಿಯಾದ ರೈತರಿಗೆ ಈವರೆಗೂ ಪರಿಹಾರ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮತ್ತೊಬ್ಬ ಸದಸ್ಯ ನೀಲಕಂಠಪ್ಪ ಕೂಸಗೂರ ಮಾತನಾಡಿ, 2019ರ ಅಡಕೆ ಬೆಳೆ ಹಾನಿಗೆ ಪರಿಹಾರ ಬಂದಿಲ್ಲ. ಈ ಬಗ್ಗೆ ಕಳೆದ ಸಭೆಯಲ್ಲಿ ರ್ಚಚಿಸಲಾಗಿದೆ. ಆಗ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅಧಿಕಾರಿಗಳು ಪತ್ತೆಯಿಲ್ಲ. ಅನುಪಾದನಾ ವರದಿಯಲ್ಲೂ ಈ ವಿಚಾರ ತೆಗೆದುಕೊಂಡಿಲ್ಲ. ಹೀಗಾಗಿ ನಾವು ಚರ್ಚೆ ಮಾಡಿಯೂ ಪ್ರಯೋಜನವಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ತಾಪಂ ವ್ಯವಸ್ಥಾಪಕ ಬಸವರಾಜ ಶಿಡೇನೂರ ಮಾತನಾಡಿ, ಎಲೆ ಬಳ್ಳಿ ಹಾನಿಯಾದ ರೈತರಿಗೆ ಕಂದಾಯ ಇಲಾಖೆಯಿಂದ 6 ಲಕ್ಷ ರೂ. ಪರಿಹಾರ ಬಂದಿದ್ದು, ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಅನುಪಾದನಾ ವರದಿಯನ್ನು ಇನ್ಮುಂದೆ ಕಡ್ಡಾಯವಾಗಿ ನೀಡಲು ತಿಳಿಸಲಾಗುವುದು ಎಂದರು.

    ಸದಸ್ಯೆ ಚೈತ್ರಾ ಮಾಗನೂರ ಮಾತನಾಡಿ, ನಿಟ್ಟಪಳ್ಳಿ-ಕೋಟಿಹಾಳ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸುವುದಾಗಿ ಕಳೆದ ಸಭೆಯಲ್ಲಿ ರ್ಚಚಿಸಿದಾಗಲೇ ಹೇಳಿದ್ದರು. ಆದರೆ, ಈ ಬಗ್ಗೆ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಎಇಇ ಚೇತನ, ಹೊಳೆ ಆನ್ವೇರಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದೇವೆ. ನಂತರ ನಿಟ್ಟಪಳ್ಳಿಗೂ ಬರಲಿದೆ ಎಂದರು.

    ಗ್ರಾಮಸಭೆಗೆ ಅಧಿಕಾರಿಗಳು ಬರಲಿ: ಸದಸ್ಯ ಕರಿಯಪ್ಪ ತೋಟಗೇರ ಮಾತನಾಡಿ, ಗ್ರಾಮಸಭೆಗೆ ಯಾವ ಇಲಾಖೆ ಅಧಿಕಾರಿಗಳು ಬರುತ್ತಿಲ್ಲ. ಇದರಿಂದ ರೈತರಿಗೆ ಮಾಹಿತಿ ದೊರೆಯುತ್ತಿಲ್ಲ. ಗ್ರಾಪಂನಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು 60 ಸಾವಿರ ರೂ., ಬೀದಿ ದೀಪ ದುರಸ್ತಿಗೆ 1 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಗ್ರಾಮಸಭೆಗೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಸ್ಪಂದಿಸಿದ ಇಒ ಟಿ.ಆರ್. ಮಲ್ಲಾಡದ, ಗ್ರಾಪಂನಿಂದ ಸಭೆಯ ಸೂಚನೆ ಬಂದಾಗ ಕಡ್ಡಾಯವಾಗಿ ಅಧಿಕಾರಿಗಳು ಹೋಗಬೇಕು ಎಮದು ಸೂಚಿಸಿದ್ರು.

    ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ನೇಮಕವಾದ ಜ್ಯೋತಿ ಗಂಜಾಮದ ಅವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರೆವ್ವ ಹೊನ್ನಾಳಿ, ನರೇಗಾ ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೋವಿಡ್ ಟೆಸ್ಟ್ ಮಧ್ಯಾಹ್ನವೇ ಬಂದ್…

    ನಗರ ಹಾಗೂ ತಾಲೂಕಿನಲ್ಲಿ ಕೋವಿಡ್-ಟೆಸ್ಟ್ ಅನ್ನು ಮಧ್ಯಾಹ್ನ 1 ಗಂಟೆಗೆ ಬಂದ್ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಜನರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಸಂಜೆ 6ರವರೆಗೆ ಟೆಸ್ಟ್ ಮಾಡಬೇಕು ಎಂದು ನೀಲಕಂಠಪ್ಪ ಕೂಸಗೂರ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್​ಒ ಡಾ. ಸಂತೋಷಕುಮಾರ, ಇದೀಗ ರ್ಯಾಪಿಡ್ ಟೆಸ್ಟ್ ಬಂದ್ ಮಾಡಲಾಗಿದೆ. ಆದ್ದರಿಂದ ಜನರಿಂದ ಪಡೆದ ಸ್ವಾ್ಯಬ್ ಅನ್ನು ಪರೀಕ್ಷೆಗಾಗಿ ಹಾವೇರಿ ಆಸ್ಪತ್ರೆಗೆ ಕಳುಹಿಸಬೇಕು. ಹೀಗಾಗಿ ಮಧ್ಯಾಹ್ನ 1 ಗಂಟೆಯವರೆಗೆ ಪಡೆದ ಸ್ವ್ಯಾಬ್ ಅನ್ನು ಹಾವೇರಿಗೆ ಕಳುಹಿಸಲು ಸಂಜೆ 6 ಗಂಟೆಯಾಗುತ್ತಿದೆ. ಆದ್ದರಿಂದ ಸಮಯ ನಿಗದಿ ಮಾಡಲಾಗಿದೆ ಎಂದರು.

    ವಿಜಯವಾಣಿ ವರದಿ ಉಲ್ಲೇಖ

    ಭೂಮಿ ಕೇಂದ್ರದ ಸಾಫ್ಟವೇರ್ ಅನ್ನು ಅಪ್​ಡೇಟ್ ಮಾಡಿದ್ದೀರಿ. ಆದರೆ, ಅದರ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಿಲ್ಲ. ದಿನಕ್ಕೆ 120ರಿಂದ 150 ಅರ್ಜಿ ಬಂದರೆ, ಶೇ. 50ರಷ್ಟು ಮಾತ್ರ ವಿಲೇವಾರಿ ಆಗುತ್ತಿವೆ ಎಂಬ ಕುರಿತು ‘ವಿಜಯವಾಣಿ’ ಪತ್ರಿಕೆ ವರದಿ ಮಾಡಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸದಸ್ಯ ಕೂಸಗೂರ, ತಹಸೀಲ್ದಾರ್ ಬಸನಗೌಡ ಕೋಟೂರ ಅವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಭೂಮಿ ಕೇಂದ್ರದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದೇವೆ. ಹೊಸ ಸಾಫ್ಟವೇರ್ ಆಗಿದ್ದರಿಂದ ಸ್ವಲ್ಪ ತೊಂದರೆ ಆಗಿದೆ. ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದರು.

    ದುಂದು ವೆಚ್ಚಕ್ಕೆ ಕಡಿವಾಣ ಹಾಕಿ

    ಬೇಲೂರು ಗ್ರಾಪಂ ಕಟ್ಟಡಕ್ಕೆ ಬಣ್ಣ ಹಚ್ಚಲು 77 ಸಾವಿರ ರೂ. ಖರ್ಚು ಹಾಕಿದ್ದಾರೆ. ಸಣ್ಣ ಕಟ್ಟಡಕ್ಕೆ ಇಷ್ಟೊಂದು ಖರ್ಚು ಮಾಡಿದರೆ ಹೇಗೆ? ಆದ್ದರಿಂದ 17ನೇ ಹಣಕಾಸಿನ ಕ್ರಿಯಾಯೋಜನೆಗೆ ಅನುಮೋದನೆ ಕೊಡುವ ಮುನ್ನ ಪರಿಶೀಲಿಸಬೇಕು. ಈ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯ ನೀಲಕಂಠಪ್ಪ ಕೂಸಗೂರ, ಇಒ ಅವರನ್ನು ಒತ್ತಾಯಿಸಿದರು. ಇದಕ್ಕೆ ಇಒ ಒಪ್ಪಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts