More

    ಬಂಧನ-ಸ್ವಾತಂತ್ರ್ಯದ ನಡುವೆ…: ಮನೋಲ್ಲಾಸ

    ಬಂಧನ-ಸ್ವಾತಂತ್ರ್ಯದ ನಡುವೆ...: ಮನೋಲ್ಲಾಸ| ಡಾ. ಗಣಪತಿ ಹೆಗಡೆ
    ಅದೊಂದು ಮೂರು ವರ್ಷದ ಮಗುವಿನ ಹುಟ್ಟುಹಬ್ಬದ ಸಮಾರಂಭ. ಬಂಧುಗಳು, ಸ್ನೇಹಿತರು, ಆತ್ಮೀಯರು ಹೀಗೆ ನೂರಾರು ಜನ ಸೇರಿದ್ದಾರೆ. ಎಲ್ಲರಲ್ಲೂ ಸಂಭ್ರಮ ಮನೆಮಾಡಿದೆ. ಮಗುವಿಗೆ ಶುಭ ಹಾರೈಸಲು ಬಂದವರ ಕೈಯಲ್ಲಿ ಬಣ್ಣ-ಬಣ್ಣದ ಆಟಿಕೆಗಳ ಪ್ಯಾಕೆಟ್ಟುಗಳು. ಮಗು ದೂರದಿಂದಲೇ ಕಣ್ಣರಳಿಸಿ, ಬರುವವರ ಕೈಯಲ್ಲಿರುವ ಉಡುಗೊರೆಯನ್ನು ಆಸೆಯಿಂದ ನೋಡುತ್ತಿದೆ. ಅವರು ಕೊಡುವ ಆಟಿಕೆಯನ್ನು ಕೈಯಲ್ಲಿ ಹಿಡಿದು ಅದರೊಂದಿಗೆ ಆಡುತ್ತಿದೆ. ಅಷ್ಟರಲ್ಲೇ ಇನ್ನೊಂದು ಹೊಸ ಆಟಿಕೆ ಕೈಸೇರುತ್ತದೆ, ಹಳೆಯ ಆಟಿಕೆ ಮೂಲೆ ಸೇರುತ್ತದೆ. ಹೀಗೆ ಬಹಳ ಹೊತ್ತಿನಿಂದ ನಡೆಯುತ್ತಲೇ ಇದೆ. ಒಮ್ಮೆ ಆಟ ಆಡಿ ಮುಗಿಸಿ, ಮೂಲೆ ಸೇರಿಸಿದ ಆಟಿಕೆಯನ್ನು ಮಗು ಕಣ್ಣೆತ್ತಿಯೂ ನೋಡುತ್ತಿಲ್ಲ. ಹೊಸ ಆಟಿಕೆಯತ್ತಲೇ ಅದರ ದೃಷ್ಟಿ.

    ಹೊಸ ಆಟಿಕೆಯೊಂದು ಆ ಮಗುವಿನ ಕೈಸೇರಿದಾಗ ಅದಕ್ಕಾಗುವ ಆನಂದ ಹೇಳತೀರದು, ಆದರೆ ಅದನ್ನು ಬಿಸುಡುವಾಗ ‘ಇದು ನನ್ನದಲ್ಲ’ ಎಂಬ ತಾತ್ಸಾರಭಾವನೆ. ದೂರದ ಮೂಲೆಯಲ್ಲಿ ಕುಳಿತ ತಾತಂದಿರಿಬ್ಬರು ಇದನ್ನು ಬಹಳ ಹೊತ್ತಿನಿಂದಲೂ ಗಮನಿಸುತ್ತಲೇ ಇದ್ದರು. ಅವರಿಗೆ ಈ ಮಗುವಿನ ಒಂದೊಂದು ಕ್ಷಣದ ವರ್ತನೆಯೂ ವಿಚಿತ್ರವೆನಿಸಿತು. ಅದು ನಡೆದುಕೊಳ್ಳುವ ರೀತಿ ಅವರಿಗೆ ಆಶ್ಚರ್ಯವೆನಿಸಿತು. ‘ನೋಡಿ ಆ ಮಗು ತನ್ನ ಕೈಯಲ್ಲಿ ಆ ಆಟಿಕೆಯನ್ನು ಹಿಡಿದು ಆಡುತ್ತಿದೆ. ಅದರ ಆನಂದಕ್ಕೆ ಪಾರವೇ ಇಲ್ಲ. ಆದರೆ ಕೆಲವೇ ಕ್ಷಣಗಳು ನೋಡುತ್ತಾ ಇರಿ ಅದು ಆಟಿಕೆಯನ್ನು ಬಿಟ್ಟುಬಿಡುತ್ತದೆ’ ಎಂದರು ಒಬ್ಬರು.

    ‘ಹೌದು, ನಾನೂ ಗಮನಿಸುತ್ತಲೇ ಇದ್ದೇನೆ. ಅದನ್ನು ಬಿಡುವಾಗ ಮಗುವಿಗೆ ಅದೆಂತಹ ನಿರ್ವಿಕಾರ ಭಾವನೆ ಅಲ್ಲವೇ?’ ಎಂದರು ಇನ್ನೊಬ್ಬರು. ‘ಈ ನಿರ್ವಿಕಾರ, ನಿರ್ಮಮತ್ವದ ಸ್ಥಿತಿ ಮಕ್ಕಳಿಗೆ ಮಾತ್ರ ಸಾಧ್ಯವೇ ಹೊರತು ಬುದ್ಧಿ ಬೆಳೆದ ನಮ್ಮಂತಹವರಿಗಲ್ಲವೇ ಅಲ್ಲ’. ‘ಹೌದು, ಇಂತಹ ನಿಮೋಹತ್ವವೇ ಭಗವಂತನ ಸಾಕ್ಷಾತ್ಕಾರಕ್ಕೆ ಹೆದ್ದಾರಿ. ಆದರೆ ಇದು ನಮಗೆಲ್ಲಿ ಅರ್ಥವಾದೀತು? ರಾಯರೇ ನಾವೂ ಹಾಗೆಯೇ ಆಗಬೇಕಲ್ಲವೇ? ಆದರೆ ನಾವು ಮಮತ್ವದ ಕೋಟೆಯೊಳಗೆ ಬಂಧಿಯಾಗಿದ್ದೇವೆ’ ಎಂದರು.

    ‘ಮಮೇತಿ ಬಧ್ಯತೇ ಜಂತುಃ ನ ಮಮೇತಿ ವಿಮುಚ್ಯತೇ’ ಎಂಬುದಾಗಿ ಬಂಧನ ಹಾಗೂ ಸ್ವಾತಂತ್ರ್ಯದ ವಿಷಯವಾಗಿ ಭಗವಾನ್ ರಮಣ ಮಹರ್ಷಿಗಳೇ ಹೇಳಿದ್ದಾರಲ್ಲ! ‘ನನ್ನದು ನನ್ನದು ಎಂದರೆ ಅದು ಬಂಧನ, ಇದು ನನ್ನದಲ್ಲ ಎಂಬುದು ಸ್ವಾತಂತ್ರ್ಯ’. ಆ ಮಗುವಿನ ಭಾವವೇನಾದರೂ ನಮ್ಮಲ್ಲಿ ಬಂದರೆ ಭಗವಂತನು ನಮ್ಮ ಬಳಿಯಲ್ಲಿಯೇ ಇರುತ್ತಾನೆ. ಇಂದು ನಾವು ಸಂಗ್ರಹಿಸಿರುವ ಈ ಭೌತಿಕ ವಸ್ತುಗಳೆಲ್ಲವೂ ಭಗವಂತನು ನಮಗಾಗಿ ಕಳಿಸಿದ ಆಟಿಕೆಗಳು. ಅವುಗಳನ್ನು ಒಮ್ಮೆ ಬಳಸಿ ‘ಇನ್ನು ನನ್ನದಲ್ಲ’ ಎಂಬ ತ್ಯಾಗದ ಮನೋಭಾವವಿರಬೇಕು. ಇನ್ನು ನಾವೋ, ಬೇಕೋ ಬೇಡವೋ ಎಂಬ ವಿವೇಚನೆ ಇಲ್ಲದೆ ಅವೆಲ್ಲವೂ ನಮ್ಮವೇ ಎಂಬ ಭ್ರಮೆಯಲ್ಲಿ ಕಾವಲು ಕಾಯುತ್ತ ಕೂತಿದ್ದೇವೆ. ‘ಇದು ನನಗೆ ಬೇಡ’ ಎಂಬ ಅರಿವು ನಮಗಾಗುವುದು ಯಾವಾಗ? ಯಾರಿಗೋ ಏನನ್ನೋ ದಾನ ಕೊಡುವಾಗ ‘ದತ್ತಂ ನ ಮಮ’ ಎಂಬ ವಾಕ್ಯವನ್ನು ಕಾಟಾಚಾರಕ್ಕಾಗಿ ಹೇಳುತ್ತೇವೆಯೇ ಹೊರತು ಹೃದಯಾಂತರಾಳದಿಂದ ಹೇಳುವ ಮಾತಲ್ಲ.

    (ಲೇಖಕರು ಸಂಸ್ಕೃತ ಉಪನ್ಯಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts