More

    ಮನೋಲ್ಲಾಸ | ಜ್ಞಾನವೆಂಬ ಸಂಪತ್ತನ್ನು ಗಳಿಸೋಣ

    | ದಿವ್ಯಾ ಹೆಗಡೆ ಕಬ್ಬಿನಗದ್ದೆ

    ಅವನೊಬ್ಬ ಬುದ್ಧಿವಂತ ಹುಡುಗ. ಆಟ, ಪಾಠಗಳೆರಡರಲ್ಲೂ ಮುಂದು. ಆದ್ದರಿಂದ ಪಾಲಕರಿಗೆ ಮತ್ತು ಶಿಕ್ಷಕರಿಗೆ ಅಚ್ಚುಮೆಚ್ಚು. ಹೀಗಿರುವಾಗ ಕ್ರಮೇಣ ಹುಡುಗನಿಗೆ ತನ್ನ ಜಾಣತನದ ಬಗ್ಗೆ ಗರ್ವವೆನಿಸಿತು. ಅಂತೆಯೇ ಅದು ಅಹಂಕಾರಕ್ಕೂ ತಿರುಗಿತು. ಎಲ್ಲ ಸ್ಪರ್ಧೆ, ಪರೀಕ್ಷೆಗಳಲ್ಲಿ ತಾನೇ ಮೊದಲು, ತನ್ನನ್ನು ಹಿಮ್ಮೆಟ್ಟಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಭಾವಿಸಿದ. ಇತರರನ್ನು ಕೀಳಾಗಿ ಕಾಣಲಾರಂಭಿಸಿದ.

    ಇದು ಅವನ ಓದಿನ ಮೇಲೆ ಪರಿಣಾಮ ಬೀರಿತು. ತಾನು ಕಷ್ಟ ಪಡದೆಯೇ ಏನನ್ನಾದರೂ ಸಾಧಿಸಬಲ್ಲೆನೆಂಬ ಹುಂಬತನದಿಂದ ಆಲಸಿಯಾದ. ಮಗನ ವರ್ತನೆ ಗಮನಿಸುತ್ತಿದ್ದ ತಂದೆಗೆ ಚಿಂತೆ ಆರಂಭವಾಯಿತು. ಈ ಚಿಕ್ಕ ವಯಸ್ಸಿನಲ್ಲಿಯೇ ಅವನ ಮನಸ್ಸಿನಲ್ಲಿ ಅಹಂಭಾವ ಮೊಳೆತರೆ ಅದು ಅವನನ್ನು ಬೆಳೆಯಗೊಡುವುದಿಲ್ಲ ಎಂಬ ಸತ್ಯದ ಆರಿವಾಗಿ ಆತಂಕ ಶುರುವಾಯಿತು. ಅವನನ್ನು ಮೊದಲು ನಿಗರ್ವಿ, ಸಜ್ಜನನನ್ನಾಗಿ ಮಾಡದಿದ್ದರೆ ಅದು ಅವನ ಭವಿಷ್ಯಕ್ಕೆ ಹಾನಿಯುಂಟುಮಾಡುತ್ತದೆ ಎಂದು ಕಳವಳಪಟ್ಟರು. ಮಗನನ್ನು ಹೇಗಾದರೂ ಮಾಡಿ ತಿದ್ದಿ, ಅವನನ್ನು ಸರಿಯಾದ ದಾರಿಗೆ ತರಬೇಕೆಂದು ನಿಶ್ಚಯಿಸಿದರು.

    ಒಮ್ಮೆ ಮಗನನ್ನು ಮನೆಯಿಂದ ಹೊರಗೆ ಕರೆದುಕೊಂಡು ಅಂಗಳಕ್ಕೆ ತಂದು ನಿಲ್ಲಿಸಿದರು. ಒಂದಷ್ಟು ಬಲೂನುಗಳಿಗೆ ಗಾಳಿಯನ್ನು ತುಂಬಿ ಅವನ ಕೈಗೆ ಕೊಟ್ಟು ಆಗಸಕ್ಕೆ ತೂರಿಬಿಡುವಂತೆ ಹೇಳಿದರು. ಮಗ ಬಲೂನುಗಳನ್ನು ಆಗಸಕ್ಕೆ ತೂರಿಬಿಟ್ಟ. ಎಲ್ಲ ಬಲೂನುಗಳು ಮೇಲೆ ಮೇಲೆ ಹಾರತೊಡಗಿದವು. ಅವುಗಳನ್ನು ಕಂಡ ಮಗನಿಗೆ ಸಂತಸ. ಹಾಗೆಯೇ ಇನ್ನೊಂದಷ್ಟು ಬಲೂನುಗಳಿಗೆ ಗಾಳಿ ತುಂಬಿ ಅವುಗಳಿಗೆ ಸಣ್ಣ ತೂತನ್ನು ಮಾಡಿ ಮಗನ ಕೈಗಿತ್ತರು. ಆ ಬಲೂನುಗಳು ಮಗನ ಕೈಸೇರುತ್ತಲೇ ಗಾಳಿಯಿಲ್ಲದೆ ಸಣ್ಣದಾಗತೊಡಗಿ, ಆಗಸಕ್ಕೆ ತೂರಿದರೆ ಮೇಲಕ್ಕೇರದೇ ನೆಲಕ್ಕೆ ಬೀಳಲಾರಂಭಿಸಿದವು.

    ಅದನ್ನು ಮಗನಿಗೆ ತೋರಿಸಿದ ತಂದೆ, ‘ಮಗೂ, ಬಲೂನುಗಳ ಒಳಗೆ ಗಾಳಿಯಿ ದ್ದರೆ ಮಾತ್ರ ಅದು ಮೇಲಕ್ಕೇರುತ್ತದೆ. ಆದರೆ ಅದೇ ಬಲೂನನ್ನು ಗಾಳಿಯಿಲ್ಲದೇ ಮೇಲಕ್ಕೆಸೆದು ನೋಡು. ಅದಕ್ಕೆ ಮೇಲೇರಲು ಸಾಧ್ಯವಾಗುವುದಿಲ್ಲ. ಶೀಘ್ರದಲ್ಲಿ ನೆಲಕ್ಕುರುಳಿಬಿಡುತ್ತದೆ. ಮನುಷ್ಯನಿಗೂ ಅಷ್ಟೇ. ಅವನ ಅಂತರಂಗ ಶುದ್ಧವಾಗಿದ್ದರೆ, ಆಂತರ್ಯ ಶಕ್ತಿಯುತವಾಗಿದ್ದರೆ ಅವನು ತಾನಾಗಿಯೇ ಮೇಲಕ್ಕೇರುತ್ತಾನೆ. ಜ್ಞಾನವೆಂಬ ಆಂತರಿಕ ಸಂಪತ್ತು ಹೆಚ್ಚಿದಂತೆಲ್ಲ ಮನುಷ್ಯನ ಶ್ರೇಯಸ್ಸು ಹೆಚ್ಚುತ್ತಲೇ ಸಾಗುತ್ತದೆ. ಆದರೆ ಅದೇ ಮನುಷ್ಯನ ಆಂತರ್ಯ ಖಾಲಿಯಾಗಿ ಬಿಟ್ಟರೆ, ಅವನೊಳಗೆ ಅಹಂಕಾರವೆಂಬ ಕಲ್ಮಷ ನೆಲೆಯೂರತೊಡಗಿದರೆ ಅದು ಮನುಷ್ಯನ ಅಧಃಪತನಕ್ಕೆ ಕಾರಣವಾಗುತ್ತದೆ. ಅವನೂ ಖಾಲಿ ಬಲೂನಿನಂತೆಯೇ ನೆಲಕ್ಕುರುಳಬೇಕಾಗುತ್ತದೆ.’ ಎಂದು ಬುದ್ಧಿ ಹೇಳಿದರು.

    ನಾವೂ ಈ ಬಲೂನು ಹೇಳುವ ಸರಳ, ಸುಂದರ ಜೀವನಪಾಠವನ್ನು ಅರ್ಥೈಸಿ ಕೊಳ್ಳಬೇಕು. ವಿದ್ಯೆಯೆಂಬ ಸಂಪತ್ತನ್ನು ಕ್ರೊಢೀಕರಿಸುತ್ತ, ಸದಾಕಾಲ ಹೊಸತನ್ನು ಕಲಿಯಲು ಮನಸ್ಸನ್ನು ತೆರೆದುಕೊಳ್ಳಬೇಕು. ಈ ಜಗತ್ತೆಂಬ ಅಕ್ಷಯವಾದ ಜ್ಞಾನದ ಪಾತ್ರೆಯಿಂದ ಬದುಕಿನುದ್ದಕ್ಕೂ ಜ್ಞಾನವನ್ನು ಮೊಗೆದುಕೊಳ್ಳುತ್ತಲೇ ಸಾಗಬೇಕು. ಅಹಂಕಾರ ನಮ್ಮ ಏಳ್ಗೆಯನ್ನು ಕುಂಠಿತಗೊಳಿಸುತ್ತದೆಯೆಂಬ ಸತ್ಯವನ್ನು ಅರಿತು ನಿಗರ್ವಿಗಳಾಗಿ, ನಿರ್ಮಲ ಮನಸ್ಸಿನಿಂದ ಜ್ಞಾನಾರ್ಜನೆಗೆ ತವಕಿಸುತ್ತಲೇ ಇರಬೇಕು. ಹಾಗಾದರೆ ಮಾತ್ರ ಜಗತ್ತು ಉತ್ಕೃಷ್ಟವಾದವುಗಳನ್ನೆಲ್ಲ ನೀಡುತ್ತಲೇ ಇರುತ್ತದೆ.

    (ಲೇಖಕರು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts