More

    ಸಂಸತ್​ನಲ್ಲಿ ಮಣಿಪುರ ಕೋಲಾಹಲ: ಮುಖ್ಯಮಂತ್ರಿ ಬೀರೆನ್ ಸಿಂಗ್ ವಜಾಗೆ ಪಟ್ಟು; ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ

    ನವದೆಹಲಿ: ಮಣಿಪುರ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಗುರುವಾರ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನ ಪ್ರತಿಧ್ವನಿಸಿದೆ. ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿವೆ. ವಿರೋಧ ಪಕ್ಷದ ಸದಸ್ಯರು ಈಶಾನ್ಯ ರಾಜ್ಯದ ಪರಿಸ್ಥಿತಿ ಬಗ್ಗೆ ಚರ್ಚೆಗೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದರು. ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

    ಅಧಿವೇಶನ ಆರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, 2023ರ ಸಿನೆಮ್ಯಾಟೋಗ್ರಾಫ್ (ತಿದ್ದುಪಡಿ) ಮಸೂದೆ ಮಂಡಿಸಲು ಮುಂದಾದರು. ಆಗ ವಿರೋಧ ಪಕ್ಷದ ಸದಸ್ಯರು ಘೊಷಣೆ ಕೂಗಲು ಪ್ರಾರಂಭಿಸಿದರು.

    ಮೊದಲೇ ನೋಟಿಸ್ ನೀಡಿದರೂ ಚರ್ಚೆಗೆ ಅವಕಾಶ ನೀಡಿಲ್ಲ. ಮಣಿಪುರ ಹೊತ್ತಿ ಉರಿಯುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಲಾಗುತ್ತಿದೆ. ಪ್ರಧಾನಿ ಈ ಬಗ್ಗೆ ಮೌನವಾಗಿದ್ದಾರೆ. ಅವರು ಸದನದ ಹೊರಗೆ ಹೇಳಿಕೆ ನೀಡುತ್ತಿದ್ದಾರೆ. ಸಂಸತ್​ನಲ್ಲಿ ಹೇಳಿಕೆ ನೀಡಬೇಕು. ಘಟನೆಗೆ ಬಗ್ಗೆ ವಿಸõತ ಚರ್ಚೆ ಆಗಬೇಕು ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು ‘ಮಣಿಪುರ, ಮಣಿಪುರ’ ಎಂದು ಘೊಷಣೆಗಳನ್ನು ಕೂಗಿದರು. ನಿಯಮ 267ರ ಅಡಿಯಲ್ಲಿ ಅಲ್ಪಾವಧಿಯ ಚರ್ಚೆಗೆ ಎಂಟು ನೋಟಿಸ್​ಗಳನ್ನು ಸ್ವೀಕರಿಸಲಾಗಿದೆ. ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ. ಚರ್ಚೆಗೆ ಸಿದ್ಧ ಎಂದು ರಾಜ್ಯಸಭೆಯಲ್ಲಿ ಸಚಿವ ಪಿಯೂಷ್ ಗೋಯಲ್ ಹೇಳಿದರು. ಆದರೆ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸದನದ ಎಲ್ಲಾ ಕಲಾಪಗಳನ್ನು ಮೊದಲು ಅಮಾನತುಗೊಳಿಸಿ. ನಿಯಮ 267ರ ಅಡಿಯಲ್ಲಿ ಮಣಿಪುರದ ಚರ್ಚೆಗೆ ತಮ್ಮ ನೋಟಿಸ್ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಸದನದ ನಿಯಮ 176ರ ಪ್ರಕಾರ ಯಾವುದೇ ಸದಸ್ಯರು ತುರ್ತು ಸಾರ್ವಜನಿಕ ಪ್ರಾಮುಖ್ಯತೆ ವಿಷಯದ ಬಗ್ಗೆ ಚರ್ಚೆ ಎತ್ತಲು ಅವಕಾಶ ಇದೆ. ಮಣಿಪುರ ಪರಿಸ್ಥಿತಿ ಕುರಿತು ಚರ್ಚೆ ನಡೆಯಬೇಕು. ಸದನದಲ್ಲಿ ಪ್ರಧಾನಿ ಮೌನ ಮುರಿಯಬೇಕೆಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಆಗ್ರಹಿಸಿದರು.

     ಟ್ವಿಟರ್ ವಿರುದ್ಧ ಕ್ರಮ?

    ಮಣಿಪುರದ ಮಹಿಳೆಯ ಬೆತ್ತಲೆ ಮೆರವಣಿಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಟ್ವಿಟರ್ ವಿರುದ್ಧವೂ ಹಲವರು ಆಕ್ರೋಶ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ. ಇಂಥ ಪ್ರಚೋದನಾಕಾರಿ ವಿಡಿಯೋ ಪ್ರಕಟಿಸಿವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ ಸರ್ಕಾರ ಕೂಡ ಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೊಸ ಐಟಿ ನಿಯಮಗಳ ಪಾಲನೆ ಮಾಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವಿಟರ್​ಗೆ ನೊಟೀಸ್ ನೀಡಿದೆ ಎಂದು ವರದಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗುವ ವೀಡಿಯೊಗಳ ಪ್ರಸಾರವನ್ನು ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ಎಚ್ಚರಿಸಿದೆ. ಆನ್​ಲೈನ್ ವೇದಿಕೆಗಳಲ್ಲಿ ಈ ವೀಡಿಯೊ ಪ್ರಸಾರ ತಡೆಯಲು ಐಟಿ ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ.

     ಖರ್ಗೆ ನೇತೃತ್ವದಲ್ಲಿ ಇಂಡಿಯಾ ಸಭೆ

    ಪ್ರತಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ದ ನಾಯಕರು ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚೇಂಬರ್​ನಲ್ಲಿ ಸಭೆ ನಡೆಸಿದರು. ಉಭಯ ಸದನಗಳಲ್ಲಿ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಬೇಕು. ಮಣಿಪುರ ಸಿಎಂ ಬೀರೆನ್ ಸಿಂಗ್ ಅವರನ್ನು ವಜಾಗೊಳಿಸಬೇಕು. ಜನಾಂಗೀಯ ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಖರ್ಗೆ ಒತ್ತಾಯಿಸಿದರು. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು 80 ದಿನಗಳು ಕಳೆದಿವೆ. ಆದರೆ ಪ್ರಧಾನಿ ಮೋದಿ ಈ ರಾಜ್ಯಕ್ಕೆ ಭೇಟಿ ನೀಡಿಲ್ಲ ಎಂದು ಟೀಕಿಸಿದರು.

    PM modiತಪ್ಪಿತಸ್ಥರನ್ನು ಬಿಡುವುದಿಲ್ಲ

    ಮಣಿಪುರ ಘಟನೆಯು ನಾಗರಿಕ ರಾಷ್ಟ್ರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಇಂದು ನನ್ನ ಹೃದಯ ದುಃಖ ಮತ್ತು ಕೋಪದಿಂದ ತುಂಬಿದೆ. ಮಣಿಪುರದ ಹೆಣ್ಣುಮಕ್ಕಳಿಗೆ ಆದ ಅನ್ಯಾಯವನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ತಪ್ಪಿತಸ್ಥರನ್ನು ಬಿಡುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ಹೇಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ವೇಳೆ ಪ್ರತಿಪಕ್ಷಗಳು ಮಣಿಪುರ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆ ಮಹತ್ವ ಪಡೆದಿದೆ. ಮಣಿಪುರದ ಭೀಕರತೆಯನ್ನು ಖಂಡಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿನ ಘಟನೆಗಳನ್ನೂ ಉಲ್ಲೇಖಿಸಿದರು. ‘ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವಂತೆ ಮನವಿ ಮಾಡುತ್ತೇನೆ. ವಿಶೇಷವಾಗಿ ಮಹಿಳೆಯರ ಭದ್ರತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದು ರಾಜಸ್ಥಾನ, ಛತ್ತೀಸ್​ಗಢ ಅಥವಾ ಮಣಿಪುರವಾಗಿರಬಹುದು. ಭಾರತದ ಮೂಲೆ ಮೂಲೆಯಲ್ಲೂ ಅಪರಾಧಗಳ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕು’ ಎಂದರು.

     ಸಂಧಾನ ಮಧ್ಯಸ್ಥಿಕೆಗೆ ಸಿದ್ಧ

    ಉಡುಪಿ: ದೇಶದ ಅವಿಭಾಜ್ಯ ಅಂಗವಾಗಿರುವ ಮಣಿಪುರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ. ಅವಶ್ಯವಿದ್ದರೆ ಮಣಿಪುರದ ಒಳಿತಿಗಾಗಿ ಯಾವುದೇ ಸಂಧಾನ ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

    ಜಗತ್ತಿಗೆ ಅಹಿಂಸೆ, ಶಾಂತಿಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿ ಯಾಗಿ ಬೋಧಿಸಿದ ಭಾರತದ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು. ಪ್ರಪಂಚದ ಸಮಗ್ರ ಇತಿಹಾಸವನ್ನು ಗಮನಿಸಿದರೆ ಹಿಂಸೆ ಆಕ್ರಮಣ ಅತ್ಯಾಚಾರಗಳಿಂದ ಯಾರೂ ಯಾವ ದೇಶವೂ ಏನನ್ನೂ ಸಾಧಿಸಿಲ್ಲ. ಮಣಿಪುರದ ನೆಲದಲ್ಲಿ ಅನಾದಿ ಕಾಲದಿಂದ ಬದುಕುತ್ತಿರುವ ಎರಡು ಸಮುದಾಯಗಳ ನಡುವೆ ಯಾವುದೋ ಅಭಿಪ್ರಾಯ ಭೇದಗಳಿಂದ ಹುಟ್ಟಿಕೊಂಡ ಈ ಗಲಭೆ, ದಂಗೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

     ಏನಿದು ಪ್ರಕರಣ?

    ವೈರಲ್ ಆಗಿರುವ ಮಣಿಪುರ ಮಹಿಳೆಯರ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಘಟನೆ ಕಳೆದ ಮೇ ತಿಂಗಳಲ್ಲಿ ನಡೆದಿದ್ದು ಎನ್ನಲಾಗಿದೆ. ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದ ಸಂದರ್ಭದಲ್ಲಿ ಒಂದು ಗುಂಪು ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ನಂತರ ಸಾಮೂಹಿಕ ಅತ್ಯಾಚಾರ ನಡೆಸಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ. ಪೊಲೀಸ್ ರಕ್ಷಣೆಯಲ್ಲಿದ್ದ ಈ ಮಹಿಳೆಯರನ್ನು ಜನರ ಗುಂಪು ಎಳೆದೊಯ್ದು ದುಷ್ಕೃತ್ಯ ಎಸಗಿದೆ. ಅದೇ ಜನರ ಗುಂಪು ಒಬ್ಬ ಮಹಿಳೆಯ ಸಹೋದರನನ್ನೂ ಕೊಲೆ ಮಾಡಿದೆ. ಮೇ ಆರಂಭದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಪರಿಶಿಷ್ಟ ಪಂಗಡಗಳ (ಎಸ್​ಟಿ) ಸ್ಥಾನಮಾನಕ್ಕಾಗಿ ಹಿಂಸಾಚಾರ ಭುಗಿಲೆದ್ದಿತು. ಎರಡು ಸಮುದಾಯಗಳ ನಡುವಿನ ದಾಳಿ ಮತ್ತು ಪ್ರತಿದಾಳಿಗಳು ನಡೆದಿದ್ದವು. ಮೇ 4ರಂದು ಗಲಭೆ ಸಂಭವಿಸಿದಾಗ ಒಂದು ಪಂಗಡದ ಗುಂಪು ರಕ್ಷಣೆಗಾಗಿ ಅರಣ್ಯ ಪ್ರದೇಶದ ಕಡೆಗೆ ಓಡಿಹೋಗಿತ್ತು. ಸಣ್ಣ ಗುಂಪಿನಲ್ಲಿ ಇಬ್ಬರು ಮಹಿಳೆಯರೂ ಇದ್ದರು. ಇನ್ನೊಂದು ಗುಂಪು ಇವರನ್ನು ಬೆನ್ನಟ್ಟಿ ದುಷ್ಕೃತ್ಯ ಎಸಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದರೂ ಸುಮಾರು 800 ರಿಂದ 1,000 ಜನ ಇದ್ದ ಗುಂಪು ಅವರನ್ನು ತಡೆಯಿತು. ಪೊಲೀಸರ ಕಸ್ಟಡಿಯಿಂದ ಮಹಿಳೆಯರನ್ನು ಬಿಡಿಸಿಕೊಂಡು ಈ ಗುಂಪು ಕರೆದೊಯ್ದಿದಿತ್ತು ಎಂದು ಹೇಳಲಾಗಿದೆ. ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದ ಕಾರಣ ಈ ವೀಡಿಯೊ ಹೊರಬಂದಿರಲಿಲ್ಲ. ಈಗ ಇದು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದೆ.

    ನಾಲ್ವರು ಆರೋಪಿಗಳ ಬಂಧನ

    ಮಣಿಪುರ ವೀಡಿಯೊ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡಿ, ಭಾರಿ ಆಕ್ರೋಶಕ್ಕೆ ಕಾರಣದ ಬೆನ್ನಲ್ಲೇ ಒಟ್ಟು ನಾಲ್ವರು ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ. ಮಣಿಪುರ ಮುಖ್ಯಮಂತ್ರಿ ಎನ್. ಬೀರೆನ್ ಸಿಂಗ್ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಪ್ರಮುಖ ಆರೋಪಿಯನ್ನು ಹೀರದಾಸ್ (32) ಎಂದು ಗುರುತಿಸಲಾಗಿದೆ. ಈತ ವಿಡಿಯೋದಲ್ಲಿ ಹಸಿರು ಟಿಶರ್ಟ್ ಧರಿಸಿದ್ದ. ತೌಬಲ್ ಜಿಲ್ಲೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಈತನ ಬಂಧನ ನಂತರ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಗೌರವ ಡಾಕ್ಟರೇಟ್​​​ಗೆ ಪಾತ್ರರಾದ ಮಾಜಿ ಸಿಎಂ ಯಡಿಯೂರಪ್ಪ: ನಾಳೆಯೇ ಪದವಿ ಪ್ರದಾನ

    ಏಕದಿನ​ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಟ್ಯಾಗ್​ಲೈನ್​ ಪ್ರಕಟಿಸಿದ ಐಸಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts