More

    ಕುದ್ರು ಕಾಂಡ್ಲಾ ವನ ಒತ್ತುವರಿ, ರಾತ್ರೋರಾತ್ರಿ ಜೆಸಿಬಿ ಬಳಸಿ ಪರಂಬೋಕು ಸ್ಥಳ ಅತಿಕ್ರಮಣ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಸಹಸ್ರಾರು ಜಲಚರ, ಸೂಕ್ಷ್ಮಜೀವಿಗಳ ಆವಾಸ ಸ್ಥಾನ, ನದಿ, ಸಮುದ್ರ ಕೊರೆತಕ್ಕೆ ಪ್ರಾಕೃತಿಕ ಪರಿಹಾರ ನೀಡುವ ಕಾಂಡ್ಲಾ ವನ ವಿವಿಧ ಕಾರಣಗಳಿಂದ ಬರಿದಾಗುತ್ತಿದೆ. ಆಯಕಟ್ಟಿನ ಜಾಗದಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಕಾಂಡ್ಲಾ ವನ ಬರಿದಾಗುವ ಮೂಲಕ ಪ್ರಾಕೃತಿಕ ಅಸಮತೋಲನ, ಜತೆಯಲ್ಲಿ ಪ್ರಕೃತಿ ವಿಕೋಪಕ್ಕೂ ದಾರಿ ಮಾಡಿಕೊಡುತ್ತಿದೆ.
    ನದಿ ಪಾತ್ರ, ಹಿನ್ನೀರು ಪ್ರದೇಶ, ಕುದ್ರುಗಳಲ್ಲಿ ಅರಣ್ಯ ಇಲಾಖೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಾಂಡ್ಲಾ ವನವನ್ನು ಸಿಗಡಿ ಕೆರೆ ನಿರ್ಮಾಣ, ಕಪ್ಪೆಚಿಪ್ಪು ಸಂಗ್ರಹ, ದೋಣಿಯಲ್ಲಿ ಬಂದು ಉರುವಲಿಗಾಗಿ ಕಡಿಯಲಾಗುತ್ತಿದೆ. ಜಾಗದ ಸಮೀಪ ಹೊಳೆ ಬದಿಗೆ ಕಂದಾಯ ಇಲಾಖೆ ಮೂಲಕ ಸರ್ಟಿಫಿಕೆಟ್ ಪಡೆದು ರಾತ್ರೋರಾತ್ರಿ ಮರಗಳನ್ನು ದೂಡಿ ಹಾಕಿ, ಅದರ ಮೇಲೆ ಮಣ್ಣು ಸುರಿದು ಅಲ್ಲೊಂದು ವನವಿತ್ತು ಎಂಬ ಗುರುತನ್ನೇ ಅಳಿಸಿ ಹಾಕಲಾಗುತ್ತದೆ.
    ಹನನಕ್ಕೆ ಹಲವು ಬಗೆ

    ಅರಣ್ಯ ಇಲಾಖೆ ವತಿಯಿಂದ ಹಿನ್ನೀರು ಹಾಗೂ ಆಯಕಟ್ಟು ಜಾಗದಲ್ಲಿ ಕಾಂಡ್ಲಾ ವನ ಬೆಳೆಸಿದ್ದು, ಅದು ಇಲಾಖೆಯ ನಿರ್ಲಕ್ಷೃ, ಜನಸಾಮಾನ್ಯರ ಭೂದಾಹಕ್ಕೆ ನಾಶವಾಗುತ್ತಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಕೇಸ್ ಹಾಕಿದ್ದೇವೆ ಎಂಬ ಉತ್ತರ ಸಿಗುತ್ತದೆ. ಮತ್ತೆ ಯಾವುದೇ ಮಾಹಿತಿ ಸಿಗುವುದಿಲ್ಲ. ಸಿಆರ್‌ಜಡ್ ನಿಯಂತ್ರಣ ವಲಯದಲ್ಲಿ ಮೀನುಗಾರಿಕೆಯಲ್ಲೇ ಬದುಕು ಕಟ್ಟಿಕೊಂಡವರಿಗೆ ಹೊಸ ಮನೆ ಕಟ್ಟಲು ಅಥವಾ ಹಳೇ ಮನೆ ದುರಸ್ತಿಗೆ ನೂರಾರು ತಕರಾರು ಹೇಳುವವರು, ವನ ಮಣ್ಣು ತುಂಬಿಸಿ ಹೊಳೆ ಒತ್ತುವರಿ ಮಾಡಿದರೂ ಕೇಳುವುದಿಲ್ಲ.

    ಕಾಂಡ್ಲಾ ವನ ಕಡಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಹಿನ್ನೆಲೆಯಲ್ಲಿ ಫಾರೆಸ್ಟ್ ಗಾರ್ಡ್ಸ್ ಬೀಟ್ ಹೆಚ್ಚಿಸಲಾಗಿದೆ. ಯಾರೆಲ್ಲ ಮರ ಕಡಿದಿದ್ದಾರೋ ಅವರ ವಿರುದ್ಧ ಎಫ್‌ಐಆರ್ ಹಾಕಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಹೆಮ್ಮಾಡಿ ಕಟ್ಟು ಸಮೀಪ ಕಾಂಡ್ಲಾ ಕಡಿದ ಸ್ಥಳಕ್ಕೆ ಅರಣ್ಯ ಅಧಿಕಾರಿ ಭೇಟಿ ನೀಡಿದ್ದಾರೆ. ಪರವಾನಗಿ ಇಲ್ಲದೆ ಮರಗಳನ್ನು ಕಡಿಯುವುದು ತಪ್ಪು. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜತೆಗೆ ಜಾಗದ ಹಕ್ಕಿನ ಕುರಿತು ತಹಸೀಲ್ದಾರ್ ಅವರಿಗೆ ಪತ್ರ ಬರೆಯಲಾಗುತ್ತದೆ. ಕಾಂಡ್ಲಾ ಕಡಿದರೆ ಮೊದಲು ಎಚ್ಚರಿಸುತ್ತೇವೆ. ಅದಕ್ಕೂ ಬಗ್ಗದಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
    ಪ್ರಭಾಕರ ಕುಲಾಲ್, ವಲಯ ಅರಣ್ಯ ಅಧಿಕಾರಿ ಕುಂದಾಪುರ

    ಕಾಂಡ್ಲಾ ವನ ಹನನ ಅಕ್ಷಮ್ಯ. ಬೇರೆಬೇರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ನಮ್ಮಲ್ಲೂ ನದಿ, ಹಿನ್ನೀರು ಪ್ರದೇಶದಲ್ಲಿರುವ ಕಾಂಡ್ಲಾ ವನ ವೀಕ್ಷಣೆ ಹಾಗೂ ದೋಣಿ ವಿಹಾರಕ್ಕೆ ಅವಕಾಶ ಮಾಡಿದರೆ ಪ್ರವಾಸೋದ್ಯಮ ಬೆಳೆಯುತ್ತದೆ. ಪ್ರವಾಸಿಗರಿಗೆ ಕಾಂಡ್ಲಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹನನ ತಪ್ಪಿಸುವ ಕೆಲಸ ಮಾಡಲು ಅವಕಾಶವಿದೆ.
    ಚಂದ್ರಶೇಖರ ಮೊಗವೀರ, ಕಟ್ಟಡ ಕಾರ್ಮಿಕ ಸಂಘಟನೆ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts