More

    ದಕ್ಷಿಣ ಕನ್ನಡದಲ್ಲಿ ಮುಂಗಾರು ಚುರುಕು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದಿದೆ.

    ಹಲವು ದಿನಗಳಿಂದ ಮಳೆಯಿಲ್ಲದೆ ಬಿಸಿಲ ಬೇಗೆಯಲ್ಲಿ ಬಳಲಿದ್ದ ಮಂದಿಗೆ ಮಳೆ ತುಸು ತಂಪಿನ ಅನುಭವ ನೀಡಿದೆ. ಗುರುವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದ್ದು, ಶುಕ್ರವಾರ ಹಗಲು ಕೆಲವೆಡೆ ಉತ್ತಮ ಮಳೆಯಾಗಿದ್ದು, ಇನ್ನುಳಿದಂತೆ ಬಿಟ್ಟು ಬಿಟ್ಟು ಸುರಿದಿದೆ. ಮಧ್ಯಾಹ್ನ ಬಳಿಕ ಕೆಲವೆಡೆ ಮಳೆಯೊಂದಿಗೆ ಗುಡುಗಿನ ಮೊರೆತವೂ ಕೇಳಿಸಿದೆ. ಮಳೆಯೊಂದಿಗೆ ಗಾಳಿಯ ಅಬ್ಬರವೂ ಇತ್ತು. ಘಟ್ಟದ ತಪ್ಪಲಿನ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಟ್ಟ ಮೋಡ ಕವಿದು, ಮಳೆ ಸುರಿದಿದೆ. ಆಕಾಶದಲ್ಲಿ ಮೋಡಗಳ ಚಲನೆಯೂ ಹೆಚ್ಚಾಗಿತ್ತು.

    ವಾರಾಂತ್ಯ ವೇಳೆಗೆ ಕರಾವಳಿಯಲ್ಲಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಗುರುವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದ್ದು, ಶನಿವಾರ ಮತ್ತು ಭಾನುವಾರ ಮಳೆ ತುಸು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಕರಾವಳಿಯಲ್ಲಿ ಮಳೆ ಸಾಧ್ಯತೆಯಿದೆ.

    ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಆ.30ರವರೆಗೆ ಮೀನುಗಾರಿಕೆಗೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯ ಬೆಳ್ತಂಗಡಿ 25 ಮಿ.ಮೀ., ಬಂಟ್ವಾಳ 13, ಮಂಗಳೂರು 15, ಪುತ್ತೂರು 4, ಸುಳ್ಯ 16, ಮೂಡುಬಿದಿರೆ 18 ಮತ್ತು ಕಡಬದಲ್ಲಿ 6 ಮಿ.ಮೀ. ಸಹಿತ ಸರಾಸರಿ 16 ಮಿ.ಮೀ. ಮಳೆಯಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 27.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ತುಂತುರು ಮಳೆ ಇತ್ತು.

    ಕಾಸರಗೋಡಿನಲ್ಲಿ ಬಿರುಸಿನ ಮಳೆ ಸಾಧ್ಯತೆ
    ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳಾದ್ಯಂತ ಮುಂದಿನ ಮೂರು ದಿನಗಳ ಕಾಲ ಬಿರುಸಿನ ಮಳೆಯಾಗಲಿರುವುದಾಗಿ ಕೇಂದ್ರ ಹವಾಮಾನ ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ಶನಿವಾರದಿಂದ ಸೋಮವಾರದವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts