More

    ಅಗ್ನಿ ವರ್ತುಲದೊಳಗೆ ಜಿಗಿವ ಕುದುರೆ ಇನ್ನು ಓಡದು!

    ವೇಣು ವಿನೋದ್ ಕೆ.ಎಸ್ ಮಂಗಳೂರು
    ಬೆಂಕಿಯ ವೃತ್ತದೊಳಗೂ ಹಾರುವಂಥ ವಿಶೇಷ ಕ್ಷಮತೆ ಹೊಂದಿದ್ದ ಕುದುರೆ ಮಂಗಳೂರು ಸ್ಮಾರ್ಟ್ ಸಿಟಿ ಕೆಲಸದ ವೇಳೆ ಗುತ್ತಿಗೆದಾರರಿಂದ ಆದ ನಿರ್ಲಕ್ಷೃದಿಂದ ಕರುಣಾಜನಕ ಸ್ಥಿತಿ ತಲುಪಿದೆ.

    ಕಳೆದ ತಿಂಗಳು ಕದ್ರಿಯಲ್ಲಿ ರಸ್ತೆ ವಿಸ್ತರಣೆ ಭರಾಟೆಯಲ್ಲಿ ಮಣ್ಣು ಅಗೆದಾಗ ಬದಿಯಲ್ಲಿದ್ದ ಮರ ಬುಡ ಸಮೇತ ಪಕ್ಕದಲ್ಲಿದ್ದ ಮಂಗಳೂರು ಹಾರ್ಸ್ ರೈಡಿಂಗ್ ಅಕಾಡೆಮಿಯ ಶೆಡ್ ಮೇಲೆ ಬಿದ್ದಿದ್ದು, ಕುದುರೆಯೂ ಸೇರಿ ಹಲವು ಪ್ರಾಣಿಗಳಿಗೆ ಗಾಯವಾಗಿತ್ತು. ಅಕಾಡೆಮಿಯಲ್ಲಿ 8 ಕುದುರೆಗಳಿದ್ದು, ಈ ಪೈಕಿ ವಿಶೇಷ ಕೌಶಲ ಹೊಂದಿದ್ದ 4 ವರ್ಷ ಪ್ರಾಯದ ನಸು ಬಿಳಿಯ ಕುದುರೆ ‘ಆರ್ಯ’ನ ಕುತ್ತಿಗೆ, ತಲೆ ಹಾಗೂ ಕಾಲಿಗೆ ಗಂಭೀರ ಏಟು ಬಿದ್ದಿದೆ. ಸದ್ಯ ಗಾಯಗಳು ಒಣಗುತ್ತಿದ್ದರೂ ಕುದುರೆ ಆಘಾತಗೊಂಡ ಸ್ಥಿತಿಯಲ್ಲಿದ್ದು, ದೇಹ ಕೃಶವಾಗಿದೆ, ವೈದ್ಯರು ಇನ್ನಷ್ಟು ಸಮಯ ಕೊಡಿ ಎನ್ನುತ್ತಿದ್ದಾರೆ. ಇನ್ನು ಆ ಕುದುರೆಯನ್ನು ಓಡಿಸುವುದು ಅಸಾಧ್ಯ, ಹಾಗೇನಾದರೂ ಆದರೆ ಅದು ಪವಾಡ ಎನ್ನುತ್ತಾರೆ ಅಕಾಡೆಮಿ ಮುಖ್ಯಸ್ಥ ಅವಿನಂದ್ ಅಚೇನಹಳ್ಳಿ.

    ಕುದುರೆ ಗಾಯಗೊಂಡಾಗ ಮೇಯರ್ ದಿವಾಕರ್ ಮತ್ತಿತರರು ಬಂದಿದ್ದಾರೆ. ಆದರೆ ಗುತ್ತಿಗೆದಾರರು ಔಷಧದ ವೆಚ್ಚ ಕೊಡುವುದಿರಲಿ, ಬಂದು ನೋಡಲೂ ಇಲ್ಲ ಎಂದು ಬೇಸರಿಸುತ್ತಾರವರು. ಒಂದು ಸಮರ್ಥ ಕುದುರೆಗೆ 2ರಿಂದ 5 ಲಕ್ಷ ರೂ. ವರೆಗೆ ಇದೆ. ಆರ್ಯನನ್ನು ಪುಣೆಯಿಂದ ತರಲಾಗಿತ್ತು. ಓಡುವುದು ಮಾತ್ರವಲ್ಲ, ಬೆಂಕಿಯ ರಿಂಗ್ ಒಳಗೆ ಅನಾಯಾಸವಾಗಿ ಜಿಗಿಯುವ ವಿಶೇಷ ಕೌಶಲ ಹೊಂದಿತ್ತು.

    ತರಬೇತಿ ಕೇಂದ್ರಕ್ಕೆ ಜಾಗ ಬೇಡಿಕೆ: ಕಾಸರಗೋಡಿನಿಂದ ಭಟ್ಕಳವರೆಗೆ, ನೆರೆಯ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಎಲ್ಲೂ ಕುದುರೆ ಸವಾರಿ ತರಬೇತಿ ಕೇಂದ್ರಗಳಿಲ್ಲ. ಇದಕ್ಕೆ ಪ್ರವಾಸೋದ್ಯಮ ಆಕರ್ಷಿಸುವ ಸಾಮರ್ಥ್ಯವಿರುವುದರಿಂದ ಸರ್ಕಾರದ ನೆರವು ಬೇಕು. ದ.ಕ. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಲಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕುದುರೆ ತರಬೇತಿ ಕೇಂದ್ರಕ್ಕೂ ಜಾಗ ಒದಗಿಸಿದರೆ ಅಭಿವೃದ್ಧಿ ಪಡಿಸಬಹುದು. ಪ್ರಸ್ತುತ ಜೋಗಿ ಮಠದ ಜಾಗವನ್ನು ಮೂರು ವರ್ಷ ಲೀಸ್‌ಗೆ ಪಡೆದು ಅಕಾಡೆಮಿ ನಡೆಸಲಾಗುತ್ತಿದೆ ಎಂದು ಅವಿನಂದ್ ತಿಳಿಸಿದ್ದಾರೆ. ಈಗಾಗಲೇ 500 ಮಂದಿಯಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಆಸಕ್ತರಿಗಷ್ಟೇ ಅಲ್ಲದೆ ಮಂಗಳಮುಖಿಯರು, ಅಂಗವಿಕಲರು, ಹಿಂದುಳಿದ ಸಿದ್ದಿ ಮಕ್ಕಳಿಗೂ ತರಬೇತಿ ನೀಡುವ ಆಸಕ್ತಿ ಇದೆ ಎನ್ನುತ್ತಾರವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts