ಡ್ರಗ್ಸ್ ಪ್ರಕರಣ ಆರೋಪಿಗಳಿಗೆ ನ್ಯಾಯಾಂಗ ಬಂಧನ

arrested
Published on

ಮಂಗಳೂರು: ನಗರ ಅಪರಾಧ ಪತ್ತೆದಳ ಪೊಲೀಸರಿಂದ 75 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಹಿತ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಕ್ಷಿಣ ಆಫ್ರಿಕಾದ ಪ್ರಜೆಗಳಾದ ಬಂಬಾ ಫಾಂಟಾ ಆಲಿಯಾಸ್ ಅಡೊನಿಸ್ ಜಬುಲೈಲ್(31) ಮತ್ತು ಒಲಿಜೊ ಇವನ್ಸ್ ಆಲಿಯಾಸ್ ಅಬಿಗೈಲ್ ಅಡೊನಿಸ್(30) ಅವರನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮಾದಕ ದ್ರವ್ಯ ಎಂಡಿಎಂಎ ಪೂರೈಕೆಯ ಮೂಲ ಪತ್ತೆ ಹಾಗೂ ಕಿಂಗ್‌ಪಿನ್‌ಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕಸ್ಟಡಿ ಅವಧಿಯಲ್ಲಿ ಬಂಧಿತ ಆರೋಪಿಗಳನ್ನು ನವದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಎಂಡಿಎಂ ಪೂರೈಕೆ ಹಾಗೂ ಉತ್ಪಾದನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತನಿಖಾ ತಂಡ ಪಡೆಯಲು ಯತ್ನಿಸಿದೆ. ಆರೋಪಿಗಳು ವಿಚಾರಣೆಗೂ ಅಷ್ಟಾಗಿ ಸಹಕರಿಸುತ್ತಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಲಭ್ಯವಿರುವ ತಾಂತ್ರಿಕ ಪುರಾವೆಗಳ ವಿಶ್ಲೇಷಣೆಗಳ ಮೂಲಕವೂ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಮಾ.14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ದಕ್ಷಿಣ ಆಫ್ರಿಕಾದ ಈ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಬಳಿಯಿದ್ದ ಎರಡು ಟ್ರಾಲಿ ಬ್ಯಾಗ್‌ಗಳಲ್ಲಿ ಸಾಗಾಟ ಮಾಡುತ್ತಿದ್ದ 75 ಕೋಟಿ ರೂ. ಮೌಲ್ಯದ 37.585 ಕೆ.ಜಿ. ಎಂಡಿಎಂಎ, ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net