More

    ವೈರಮುಡಿ, ರಾಜಮುಡಿ ಕಿರೀಟಗಳಿಗೆ ವಿಶೇಷ ಪೂಜೆ

    ಪಾಂಡವಪುರ: ಐತಿಹಾಸಿಕ ವೈರಮುಡಿ ಬ್ರಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆಯಿಂದ ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿದ ವೈರಮುಡಿ, ರಾಜಮುಡಿ ಕಿರೀಟಗಳನ್ನು ತಾಲೂಕಿನ ಗಡಿ ಪಿಎಸ್‌ಎಸ್‌ಕೆ ಕಾರ್ಖಾನೆ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.


    ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ಅಲಂಕಾರಕ್ಕಾಗಿ ಮೈಸೂರಿನ ಪರಕಾಲ ಮಠದ ವಾಹನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಆಗಮಿಸಿದ ವಜ್ರ ಖಚಿತ ವೈರಮುಡಿ ಹಾಗೂ ರಾಜಮುಡಿ ಕಿರೀಟಗಳನ್ನು ಸಂಪ್ರದಾಯದಂತೆ ಬರಮಾಡಿಕೊಂಡ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಿರೀಟವನ್ನು ತಲೆ ಮೆಲೆ ಹೊತ್ತು ತಂದು ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿನ ಗಡಿ ಪಿಎಸ್‌ಎಸ್‌ಕೆಯಿಂದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ ತಲುಪುವವರೆಗೂ ಮಾರ್ಗದುದ್ದಕ್ಕೂ ಹಲವೆಡೆ ಭಕ್ತರು ಪೂಜೆ ಸಲ್ಲಿಸಿದರು. ಪಟ್ಟಣಕ್ಕೆ ಆಗಮಿಸಿದಾಗ ತಾಲೂಕು ಆಡಳಿತ ಪರವಾಗಿ ಉಪವಿಭಾಗಾಧಿಕಾರಿ ಮಾರುತಿ ಮತ್ತು ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ಅವರು ತಾಲೂಕು ಕಚೇರಿ ಬಳಿ ಭಕ್ತಿಯಿಂದ ಬರಮಾಡಿಕೊಂಡರು.


    ಪಿಎಸ್‌ಎಸ್‌ಕೆ, ಕೆನ್ನಾಳು, ಹರಳಹಳ್ಳಿ, ಪಟ್ಟಣದ ಲಾಲ್‌ಬಹಾದ್ದೂರು ಟಾಕೀಸ್ ಎದುರು, ತಾಲೂಕು ಕಚೇರಿ, ಕುಂಟೇಗೌಡರ ಮಿಲ್, ಸಿದ್ದಿಮಂಟಪ, ಬೀರಶೆಟ್ಟಹಳ್ಳಿ, ಬನ್ನಘಟ್ಟ, ಕೆ.ಹೊಸೂರು ಗೇಟ್, ಟಿ.ಎಸ್.ಛತ್ರ, ನೀಲನಹಳ್ಳಿ ಗೇಟ್ ಹೀಗೆ ವೈರಮುಡಿ ಕಿರೀಟ ಸಾಗುವ ಮಾರ್ಗದುದ್ದಕ್ಕೂ ಕೀರಿಟಗಳನ್ನು ಇಳಿಸಿ ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ರೈತಸಂಘ ಮುಖಂಡ ರಾಘವೇಂದ್ರ, ಕಾಂಗ್ರೆಸ್ ಮುಖಂಡ ದೀಪು ಸೇರಿದಂತೆ ತಾಲೂಕಿನ ಹಲವು ಗಣ್ಯರು ಕಿರೀಟವನ್ನು ತಲೆಯ ಮೇಲೆ ಹೊತ್ತು ಭಕ್ತಿ ಪ್ರದರ್ಶಿಸಿದರು.


    ಪಾನಕ, ಮಜ್ಜಿಗೆ ವಿತರಣೆ : ಚೆಲುವನಾರಾಯಣನ ಕಿರೀಟಕ್ಕೆ ನಿಗದಿತ ಸ್ಥಳಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಕೋಸಂಬರಿ, ಪಾನಕ ಹಾಗೂ ಮಜ್ಜಿಗೆ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts