More

  ನಾಳೆಯಿಂದ ಮಾಘ ಸಂಭ್ರಮ

  ಮಂಡ್ಯ: ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಜ.26ರಿಂದ ಫೆ.2ರವರೆಗೆ ಫಲಪುಷ್ಪ ಪ್ರದರ್ಶನ ‘ಮಾಘ ಸಂಭ್ರಮ-2020’ ಆಯೋಜಿಸಲಾಗಿದ್ದು, ಈ ವರ್ಷ ಹಲವು ವಿಶೇಷತೆಗಳನ್ನು ಕಾಣಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ರಂಗಿನ ಹೂವುಗಳು, ತರಕಾರಿಗಳು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ಇರುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ತರಕಾರಿಗಳನ್ನು ಬಳಸಿ ವಿವಿಧ ಕಲಾಕೃತಿಗಳ ಕೆತ್ತನೆ, ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮೇಳ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷಿಕೆ, ಮೀನುಗಾರಿಕೆ ಇಲಾಖೆಯಿಂದ ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನ, ಪಶುಪಾಲನಾ ಇಲಾಖೆಯಿಂದ ಬನ್ನೂರು ಕುರಿಗಳ ಪ್ರದರ್ಶನ, ಜಿಲ್ಲಾ ವ್ಯಾಪ್ತಿಯ ತಾಲೂಕುಗಳಲ್ಲಿ ರೈತರು ಬೆಳೆದಿರುವ ಹಣ್ಣು, ತರಕಾರಿ ಹಾಗೂ ಇತರ ತೋಟಗಾರಿಕೆ ಬೆಳೆಗಳ ಪ್ರದರ್ಶನವಿರಲಿದೆ ಎಂದರು.

  ಮನೆಯಂಗಳ ಅಥವಾ ತಾರಸಿಯಲ್ಲಿ ಕೆಲ ಆಯ್ದ ತರಕಾರಿ ಗಿಡಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಗುವುದು. ಹೆಚ್ಚು ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಕೃಷಿ ಹಾಗೂ ಸಾವಯವ ಕೃಷಿ, ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲಾಗುವುದು. ತೋಟಗಾರಿಕೆ ಮತ್ತ ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಂಬಂಧಿಸಿದ ಹಾಗೂ 30ಕ್ಕೂ ಹೆಚ್ಚು ಮಳಿಗೆ ತೆರೆಯಲಾಗುವುದು. ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಂದ ತಯಾರು ಮಾಡುವ ಆಹಾರ ಮತ್ತು ತಿನಿಸುಗಳನ್ನು ಪ್ರದರ್ಶನದ ಜತೆಗೆ ಮಾರಾಟ ನಡೆಯಲಿದೆ ಎಂದು ತಿಳಿಸಿದರು.

  ಜ.26ರ ಮಧ್ಯಾಹ್ನ 12.30ಕ್ಕೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಉದ್ಘಾಟಿಸುವರು. ತೋಟಗಾರಿಕೆ ಸಚಿವ ವಿ.ಸೋಮಣ್ಣ, ಶಾಸಕ ಎಂ.ಶ್ರೀನಿವಾಸ್, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಸಂಸದೆ ಸುಮಲತಾ ಅಂಬರೀಷ್ ಭಾಗವಹಿಸುವರು. ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರಲಿದೆ. ಅಂತೆಯೇ, ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ದೊಡ್ಡವರಿಗೆ ತಲಾ 25 ರೂ, ಮಕ್ಕಳಿಗೆ 10 ರೂ ಮತ್ತು ಶಾಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರಲಿದೆ ಎಂದರು. ಜಿ.ಪಂ ಸಿಇಒ ಕೆ.ಯಾಲಕ್ಕಿಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು, ರೇಖಾ, ಮಹೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts