More

    ಮಕ್ಕಳು ಮಂಕಾಗಿದ್ದರೆ ನಿರ್ಲಕ್ಷಿಸಬೇಡಿ: ಗೋವೇನಹಳ್ಳಿಯಲ್ಲಿ ಮಹಿಳೆಯರು, ಮಕ್ಕಳ ವಿಶೇಷ ಗ್ರಾಮಸಭೆ

    ತ್ಯಾಮಗೊಂಡ್ಲು: ಶಾಲೆಗೆ ಕಾಂಪೌಂಡ್ ನಿರ್ಮಿಸಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬ ಸಾಕಷ್ಟು ಪ್ರಶ್ನೆಗಳು ಹೋಬಳಿ ಕಳಲುಘಟ್ಟ ಗ್ರಾಮ ಪಂಚಾಯಿತಿಯ ಗೋವೇನಹಳ್ಳಿಯಲ್ಲಿ ವಿಕಾಸ ಸಾಮಾಜಿಕ ಮತ್ತು ಶೈಕ್ಷಣೆಕಾಭಿವೃದ್ಧಿ ಸಂಸ್ಥೆ ಸಹಭಾಗಿತ್ವದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಹಾಗೂ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಕೇಳಿ ಬಂದವು.

    ಅಲಾನಾಯಕನಹಳ್ಳಿ ರಸ್ತೆ ಪಕ್ಕದಲ್ಲೇ ಇರುವ ಶಾಲೆ ಮತ್ತು ಅಂಗನವಾಡಿಗೆ ಕಾಂಪೌಂಡ್ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಮಕ್ಕಳು ರಸ್ತೆಗೆ ಬಂದು ಅಪಘಾತವಾಗುವ ಸಂಭವ ಹೆಚ್ಚಿದೆ ಎಂದು ಶಿಕ್ಷಕಿಯರು ಮನವಿ ಮಾಡಿದರು.

    ಪಿಡಿಒ ರಾಮಕೃಷ್ಣಯ್ಯ ಪ್ರತಿಕ್ರಿಯೆ ನೀಡಿ, ಕಾಂಪೌಂಡ್ ನಿರ್ಮಾಣಕ್ಕೆ ಸಾಮಗ್ರಿ ಪೂರೈಸಲಾಗಿದೆ. ಆದರೆ ಗ್ರಾಮಸ್ಥರೊಬ್ಬರು ಜಾಗದ ವಿಚಾರದಲ್ಲಿ ತಕರಾರು ತೆಗೆದಿರುವುದರಿಂದ ಕಾಮಗಾರಿ ತಡವಾಗಿದೆ. ತಕರಾರು ಬಗೆಹರಿಸಿ ಕಾಂಪೌಂಡ್ ನಿರ್ಮಿಸಲಾಗುವುದು ಎಂದರು.

    ನೆಲಮಂಗಲ ಮಕ್ಕಳ ಸಹಾಯವಾಣಿಯ ವಿನುತಾ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪರಿಚಯವಿರುವ ಮತ್ತು ಸಂಬಂಧಿಕರಿಂದಲೇ ಹೆಚ್ಚಾಗುತ್ತಿರುವುದು ದುರ್ದೈವ. ಹೆಣ್ಣುಮಕ್ಕಳು ಮಾಮೂಲಿನಂತಿರದೆ ಮಂಕಾಗಿದ್ದರೆ ಅಸಡ್ಡೆ ಮಾಡದೇ ಮಕ್ಕಳಲ್ಲಿ ವಿಚಾರಿಸಬೇಕು ಎಂದು ಸಲಹೆ ನೀಡಿದರು.

    5 ವರ್ಷಗಳಲ್ಲಿ 42 ಬಾಲ್ಯ ವಿವಾಹ ಪ್ರಕರಣಗಳು ನೆಲಮಂಗಲ ತಾಲೂಕಿನಲ್ಲಿ ನಡೆದಿವೆ. ಯಾರಿಗೇ ಆಗಲಿ ಬಾಲ್ಯವಿವಾಹದ ಮಾಹಿತಿ ಸಿಕ್ಕಲ್ಲಿ ಸಹಾಯವಾಣಿ 1098ಕ್ಕೆ ದೂರವಾಣಿ ಮಾಡಿದರೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಹಾಯವಾಣಿ ಸಿಬ್ಬಂದಿ ತಲುಪಿ, ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

    ಕಳಲುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ರಂಗೇಗೌಡ ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಾಗಿ ಪಾಲ್ಗೊಂಡಾಗ ಮಾತ್ರ ಮಕ್ಕಳ, ಮಹಿಳೆಯರ ಹಕ್ಕುಗಳ ವಿಶೇಷ ಗ್ರಾಮಸಭೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

    ಸಮಾಜದಲ್ಲಿ ಲಿಂಗಾನುಪಾತದ ಪ್ರಮಾಣ ಅಂತರ ನೋಡಿದರೆ ಮಹಿಳೆಯರು ಹಕ್ಕುಗಳಿಗಾಗಿ ದಿನನಿತ್ಯವು ಹೋರಾಟ ಮಾಡುವ ದುಸ್ಥಿತಿ ಬಂದಿದೆ. ಇಂತಹ ವಿಶೇಷ ಮಹಿಳೆಯರ ಗ್ರಾಮಸಭೆಗಳಲ್ಲಿ ಭಾಗವಹಿಸಿದಾಗ ಮಾತ್ರ ಗ್ರಾಮೀಣ ಪ್ರದೇಶದ ಹೆಂಗಳೆಯರು ಸಮಾಜದ ಆಯಾಮ, ಪ್ರತಿಭಟಿಸುವ ಗುಣ, ದೌರ್ಜನ್ಯಕ್ಕೆ ಒಳಾಗದ ಸಂದರ್ಭದಲ್ಲೂ ಸಾಮಾಜಿಕ ವ್ಯವಸ್ಥೆಯನ್ನು ಅರಿತು ಬಾಳುವದನ್ನು ತಿಳಿಯಬಹುದು ಎಂದರು.

    ಗೊವೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ ಮಾತನಾಡಿ, ಶಾಲೆಗೆ ಕಾಂಪೌಂಡ್ ಇಲ್ಲದ್ದರಿಂದ ಗ್ರಾಮಸ್ಥರು ಗಲೀಜು ಮಾಡುತ್ತಾರೆ. ಮೈದಾನದಲ್ಲೇ ಹಸುಗಳನ್ನು ಕಟ್ಟುತ್ತಾರೆ. ಶಾಲೆಯ ಕೊಠಡಿ ಶಿಥಿಲಾವಸ್ಥೆಯಲ್ಲಿದೆ ಎಂದು ದೂರಿದರು.

    ಗುಂಡೇನಹಳ್ಳಿ ಅಂಗನವಾಡಿ ಶಿಕ್ಷಕಿ ವಸಂತಾ ಮಾತನಾಡಿ, ನರೆಗಾದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಮುಂದಾಗಿದ್ದ ಗುತ್ತಿಗೆದಾರ ಕಾಮಗಾರಿ ಮುಗಿಸಿಲ್ಲ. ಈಗಿರುವ ಅಂಗನವಾಡಿಯ ಪಕ್ಕ ಕಟ್ಟಡ ನಿರ್ಮಾಣದ ಸಾಮಗ್ರಿ ಹಾಕಿರುವುದರಿಂದ ಸುತ್ತಲೂ ವಿಷ ಜಂತುಗಳ ಆವಾಸಸ್ಥಾನವಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದರು.

    ಕೂಡಲೇ ಸ್ಪಂದಿಸಿದ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ, ಗುತ್ತಿಗೆದಾರನಿಗೆ ನೋಟಿಸ್ ನೀಡಲು ಸೂಚಿಸಿ ಸ್ಪಂದಿಸದಿದ್ದರೆ ಕಪ್ಪುಪಟ್ಟಿಗೆ ಹಾಕಲು ಸೂಚಿಸಲಾಗುವುದು ಎಂದರು.

    ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹರಾಜು, ಸದಸ್ಯರಾದ ಸಾವಿತ್ರಮ್ಮ, ನರಸಮ್ಮ, ಬಿ.ಎನ್.ರವಿಕುಮಾರ್, ಪ್ರದೀಪ್.ಟಿ.ಆರ್, ಜಿ.ಕೆ.ಹನುಮಂತರಾಯಪ್ಪ, ಎಪಿಎಂಸಿ ನಿರ್ದೇಶಕ ನಾರಾಯಣಸ್ವಾಮಿ, ವಿಕಾಸ ಸಂಸ್ಥೆಯ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಿರ್ಮಲಾ, ಆರೋಗ್ಯ ಇಲಾಖೆ ಸಿಬ್ಬಂದಿ ಚಂದ್ರಶೇಖರ್, ಮುಖಂಡ ರಂಗೇಗೌಡ, ಗ್ರಾಮ ಪಂಚಾಯಿತಿ ಸಿಬ್ಬಂದಿ ಶಂಕರ್, ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts