More

    ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಕಾಯಂಗೊಳಿಸಿ

    ಬಾಗಲಕೋಟೆ: ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂ ಜೀವನಕ್ಕೆ ಭದ್ರತೆ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ಸೆ.6ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದರು.

    ನವನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 3700 ಜನ ಕಳೆದ 18 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಪಂಗೆ ಒಬ್ಬರಂತೆ 2000ಕ್ಕೂ ಹೆಚ್ಚು ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡುವುದು, ಹಣ ಪಡೆದು ಅದೇ ದಿನ ಪಾವತಿಸುವುದು ಹಾಗೂ ಪಂಚಾಯಿತಿ ವ್ಯಾಪ್ತಿಯ ಕೆಲಸವನ್ನು ಸಹ ನಿಭಾಯಿಸುತ್ತಿದ್ದಾರೆ. ತಿಂಗಳಿಗೆ 12 ಸಾವಿರ ರೂ. ವೇತನ ನೀಡಲಾಗುತ್ತಿದೆ. ಯಾವುದೇ ಭತ್ಯೆಯನ್ನು ಸಹ ಸರ್ಕಾರ ನೀಡುತ್ತಿಲ್ಲ ಎಂದರು.

    ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆಯನ್ನು ಕಾಯಂಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ತೀರ್ಪು ನೀಡಿದೆ. ವಿದ್ಯುತ್ ಇಲಾಖೆಯ ಕಿರಿಯ ಮೀಟರ್ ರೀಡರ್ ಅಥವಾ ತತ್ಸಮ ಹುದ್ದೆ ರಚಿಸಿ ಕಾಯಂಗೊಳಿಸುವಂತೆ ಆದೇಶವನ್ನು ನ್ಯಾಯಾಲಯ ಹೊರಡಿಸಿದೆ. ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸುತ್ತಿಲ್ಲ. ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದಂತೆ ಸೇವೆಯನ್ನು ಕಾಯಂಗೊಳಿಸುವಂತೆ ಅನಿರ್ದಿಷ್ಟ ಹೋರಾಟ ನಡೆಸುತ್ತಿವೆ ಎಂದು ಹೇಳಿದರು.

    ಈಚೆಗೆ ಇಂಧನ ಸಚಿವ ವಿ. ಸುನೀಲಕುಮಾರ್ 4 ಸಾವಿರ ರೂ. ಸಂಬಳ ಹೆಚ್ಚಿಸಿದ್ದಾರೆ. ಆದರೆ ಯಾವುದೇ ಭದ್ರತೆಯನ್ನು ನೀಡಲು ಭರವಸೆ ನೀಡಿಲ್ಲ. ಇನ್ನು ಸೇವೆ ಕಾಯಂಗೊಳಿಸುವ ಕುರಿತು ಸಹ ಮಾತನಾಡಿಲ್ಲ. ಸರ್ಕಾರಿ ನೌಕರರಂತೆ ನಮ್ಮನ್ನು ಪರಿಗಣಿಸುವುದು ಹಾಗೂ ಕಾಯಂಗೊಳಿಸುವುದು ಪ್ರಮುಖ ಬೇಡಿಕೆಯನ್ನು ಇಟ್ಟು ರಾಜ್ಯದ ಎಲ್ಲ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

    ಹೆಸ್ಕಾಂ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಶಿವಶಂಕರ, ಜಿವಿಪ ಸಂಘದ ಅಧ್ಯಕ್ಷ ಕಾಂತರಾಜ, ರಾಜಶೇಖರ ಹಿರೇಮಠ, ಸಂಗಪ್ಪ ಕೆಂಚಪ್ಪಗೋಳ, ಮಹಾಂತೇಶ ಕುರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts