More

    ಮಜೇಥಿಯಾ ಫೌಂಡೇಶನ್​ನಿಂದ ನೆಮ್ಮದಿ ಕೇಂದ್ರ

    ಹುಬ್ಬಳ್ಳಿ: ಮಾನಸಿಕ ತೊಂದರೆಯಿಂದ ಬಳಲುತ್ತಿರುವವರಿಗಾಗಿ ಮಜೇಥಿಯಾ ಫೌಂಡೇಶನ್ ವತಿಯಿಂದ ಇಲ್ಲಿನ ಹಳೇ ಕೋರ್ಟ್ ಸರ್ಕಲ್ ಬಳಿಯ ಗಿರಿರಾಜ ಅನೆಕ್ಸ್​ನಲ್ಲಿ ‘ನೆಮ್ಮದಿ’ ಆಪ್ತಸಲಹೆ ಮತ್ತು ಮಾರ್ಗದರ್ಶನ ಕೇಂದ್ರ ಜ. 4ರಂದು ಆರಂಭವಾಗಲಿದೆ ಎಂದು ಫೌಂಡೇಶನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ತಿಳಿಸಿದರು.

    ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 4ರಂದು ಬೆಳಗ್ಗೆ 11.30ಕ್ಕೆ ಧಾರವಾಡದ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಉದ್ಘಾಟಿಸಲಿದ್ದಾರೆ. ಮೊಬೈಲ್ ಗೀಳು, ದುಶ್ಚಟ, ಕಲಿಕಾ ನ್ಯೂನತೆ, ಖಿನ್ನತೆ, ವೈವಾಹಿಕ ಜೀವನದ ಸಮಸ್ಯೆಗಳು, ಮಹಿಳೆಯರ ಮಾನಸಿಕ ಸಮಸ್ಯೆಗಳು, ವೃದ್ಧಾಪ್ಯದ ಸಮಸ್ಯೆಗಳು, ಒತ್ತಡದ ಜೀವನ ಸೇರಿ ಇತರೆ ಮಾನಸಿಕ ಸಮಸ್ಯೆಗಳ ನಿವಾರಣೆಗಾಗಿ ನೆಮ್ಮದಿ ಕೇಂದ್ರ ಶ್ರಮಿಸಲಿದೆ ಎಂದರು.

    ಮಾನಸಿಕ ಕಾಯಿಲೆ ಉಳ್ಳವರು ಜನ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಅಂಥವರಿಗೆ ನೆಮ್ಮದಿ ಕೇಂದ್ರ ಸಹಕಾರಿಯಾಗಲಿದೆ. ಸಮಸ್ಯೆಗೆ ಒಳಗಾದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಹಾಗಾಗಿ, ಧೈರ್ಯದಿಂದ ಸಮಸ್ಯೆಗಳಿಗೆ ಪರಿಹಾರ, ಸಲಹೆ ಪಡೆಯಬಹುದು ಎಂದರು.

    ಪಾಲಿಕೆ ನಿವೃತ್ತ ಆರೋಗ್ಯಾಧಿಕಾರಿ ಡಾ.ವಿ.ಬಿ. ನಿಟಾಲಿ ಮಾತನಾಡಿ, ನೆಮ್ಮದಿ ಕೇಂದ್ರದಲ್ಲಿ ನುರಿತ ತಜ್ಞ ಮನೋವೈದ್ಯರು, ಆಪ್ತ ಸಲಹೆಗಾರರು, ಮಹಿಳೆಯರಿಗಾಗಿ ಮಹಿಳಾ ಆಪ್ತ ಸಮಾಲೋಚಕರಿದ್ದಾರೆ. ವೈಜ್ಞಾನಿಕ ವಿಧಾನದಲ್ಲಿ ನಿತ್ಯ ಕನಿಷ್ಠ 15 ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗುವುದು. ಅಗತ್ಯವೆನಿಸಿದರೆ ಡಿಮ್ಹಾನ್ಸ್ ಅಥವಾ ಕಿಮ್ಸ್​ಗೆ ಕಳುಹಿಸಲಾಗುವುದು. ಆಸಕ್ತರು ದೂ.ಸಂ. 0836- 4850901 ಅಥವಾ ಮೊ.ಸಂ. 96863 96901 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಡಾ.ಕೆ. ರಮೇಶಬಾಬು, ಡಾ. ಶಿವಾನಂದ ಹಿರೇಮಠ, ಎಚ್.ಆರ್. ಪ್ರಲ್ಹಾದರಾವ್ ಮತ್ತಿತರರು ಇದ್ದರು.

    ಹಳ್ಳಿಗಳಲ್ಲಿ ಆಪ್ತ ಸಮಾಲೋಚನೆ: ರೈತರ ಆತ್ಮಹತ್ಯೆ, ಕುಟುಂಬ ಕಲಹಗಳಂಥ ಸಮಸ್ಯೆಗಳಿಂದ ಹಳ್ಳಿ ಜನರು ತತ್ತರಿಸಿದ್ದಾರೆ. ಅಂಥವರಿಗಾಗಿ ಹಳ್ಳಿಗಳಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳುವ ಯೋಜನೆ ಇದೆ. ಶಾಲೆಗಳಲ್ಲಿ ವರ್ಷಪೂರ್ತಿ ಆಪ್ತ ಸಮಾಲೋಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆಪ್ತ ಸಮಾಲೋಚಕರಾಗಲು ಮನೋವಿಜ್ಞಾನ ಪದವಿಯನ್ನೇ ಪಡೆಯಬೇಕು ಎಂದೇನಿಲ್ಲ. ಆಸಕ್ತರಿಗೆ ನೆಮ್ಮದಿ ಕೇಂದ್ರದಿಂದ ತರಬೇತಿ ನೀಡಲಾಗುವುದು ಎಂದು ಡಾ.ವಿ.ಬಿ. ನಿಟಾಲಿ ತಿಳಿಸಿದರು.

    19 ಕೋಟಿ ಮಾನಸಿಕ ರೋಗಿಗಳು: ದೇಶದಲ್ಲಿ 19 ಕೋಟಿ ಮಾನಸಿಕ ರೋಗಿಗಳಿದ್ದಾರೆ. ಅದರಲ್ಲಿ ಶೇ. 15ರಷ್ಟು ಜನ ಖಿನ್ನತೆಗೆ ಒಳಗಾಗಿದ್ದು, ಶೇ. 6ರಷ್ಟು ಜನ ಆತಂಕದ ಸಮಸ್ಯೆ ಎದುರಿಸುತ್ತಿದ್ದಾರೆ. ಆಪ್ತ ಸಮಾಲೋಚನೆ ಹಾಗೂ ಮನೋವೈದ್ಯರಿಂದ ಇಂತಹ ಸಮಸ್ಯೆಗೆ ಪರಿಹಾರ ಒದಗಿಸಬಹುದು. ಕಿಮ್ಸ್​ಗೆ ನಿತ್ಯ 150ರಿಂದ 200 ಮನೋರೋಗಿಗಳು ಬರುತ್ತಾರೆ. ಸಿಬ್ಬಂದಿ ಕೊರತೆಯಿಂದಾಗಿ ಹಲವರಿಗೆ ಆಪ್ತ ಸಮಾಲೋಚನೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಇಂತಹ ನೆಮ್ಮದಿ ಕೇಂದ್ರದಿಂದ ಹಲವರಿಗೆ ಅನುಕೂಲವಾಗಲಿದೆ ಎಂದು ಕಿಮ್ಸ್​ನ ಮನೋವೈದ್ಯ ಡಾ. ಶಿವಾನಂದ ಹಿರೇಮಠ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts