More

    ಗದಗ: ಮಾ.10 ರ ಒಳಗಾಗಿ ಕಳಸಾ ಬಂಡೂರಿ ಯೋಜನೆಗೆ ಟೆಂಡರ್ ಕರೆಯಲು ಆಗ್ರಹ: ಸೊಬರದಮಠ

    ಗದಗ : ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಮಾ.10 ರೊಳಗಾಗಿ ಟೆಂಡರ್ ಕರೆದು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಬೇಕು. ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ರೈತರ ಏಳ್ಗೆಗೆ ಒತ್ತಾಯಿಸಿ ಮಾ.17 ರಂದು ಪಟ್ಟಣದ ಕಳಸಾ-ಬಂಡೂರಿ ಹೋರಾಟ ವೇದಿಕೆಯಲ್ಲಿ ರೈತರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತಸೇನಾ ಕರ್ನಾಟಕ ರಾಜ್ಯ ಅಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ಹೇಳಿದರು.
    ಕಳಸಾ,ಬಂಡೂರಿ ಯೋಜನೆಗೆ ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ನಡೆದ 2785ನೇ ದಿನದ ನರಗುಂದ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು. 
    ರೈತರು ನಡೆಸಿದ ನಿರಂತರ ಹೋರಾಟದ ಫಲವಾಗಿ ಬಹುದಿನಗಳ ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಟ್ರಿಬ್ಯೂನಲ್ ರಚನೆಯಾಗಿ, ನ್ಯಾಯಾಧೀಕರಣದಿಂದ ನೀರು ಕೂಡ ಹಂಚಿಕೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ನಾಲ್ಕು ಇಂಜಿನ್ ಬಿಜೆಪಿ ಸರ್ಕಾರಕ್ಕೆ ಯೋಜನೆ ಅನುಷ್ಠಾನ ಮಾಡುವುದು ದೊಡ್ಡ ಕೆಲಸವೇನಲ್ಲ. ಆದರೆ, ಕೇವಲ ರಾಜಕಾರಣ, ವಿನಾಕಾರಣ ಕಾಲಹರಣ ಮಾಡುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹದಾಯಿ ಪ್ರಾಧಿಕಾರ ರಚಿಸಿದ್ದಾರೆ ಎಂದರು. ನಮ್ಮ ರಾಜ್ಯಕ್ಕೆ ಇನ್ನೂ ನೀರೇ ಹರಿದು ಬಂದಿಲ್ಲ. ಹೀಗಾಗಿ ಪ್ರಾಧಿಕಾರ ರಚಿಸುವ ಅಗತ್ಯತೆಯೇ ಇರಲಿಲ್ಲ ಎಂಬ ಕನಿಷ್ಠ ಜ್ಞಾನ ಕೇಂದ್ರದ ನಾಯಕರಿಗೆ ಇದ್ದಂತಿಲ್ಲ. ಬಿಜೆಪಿ ಸರ್ಕಾರದವರು ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದ್ದಾರೆ. ಸುದೀರ್ಘ ಹೋರಾಟದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಹದಾಯಿ ಯೋಜನೆಗೆ ಮಧ್ಯ ಪ್ರವೇಶಿಸಿ ಪ್ರಾಧಿಕಾರ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಯೋಜನೆಗೆ ಅಡ್ಡಿಯಾಗಿರುವ ಹುಲಿ ಅಭಿಯಾರಣ್ಯದಿಂದ ರಾಜ್ಯ ಸರ್ಕಾರ ತಕ್ಷಣವೇ ಅನುಮತಿ ಪಡೆದು ಮಾ.10 ರೊಳಗಾಗಿ ಟೆಂಡರ್ ಕರೆದು ಭೂಮಿಪೂಜೆ ನೆರವೇರಿಸಬೇಕು. ಇಲ್ಲದಿದ್ದರೆ ಮಾ.17 ರಂದು ಹಮ್ಮಿಕೊಂಡಿರುವ ಜಾಗೃತಿ ಸಮಾವೇಶದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
    ಮಹದಾಯಿ ನದಿ ನೀರು ಪಡೆದು ಕಾಶೀ ವಿಶ್ವನಾಥನ ದರ್ಶನಕ್ಕೆ ತೆರಳುವುದಾಗಿ ರೈತರೆಲ್ಲರೂ ಈ ಹಿಂದೆ ವಾಗ್ದಾನ ಮಾಡಿದ್ದೇವು. ಅದರಂತೆಯೇ ಇದೇ ಮಾರ್ಚ್ ತಿಂಗಳಲ್ಲಿ 1 ಸಾವಿರ ಪುರುಷ ಹಾಗೂ ಮಹಿಳಾ ರೈತ ಹೋರಾಟಗಾರರು ರೈಲ್ವೆ ಮೂಲಕ ಕಾಶೀ ಯಾತ್ರೆಗೆ ತೆರಳಲಿದ್ದೇವೆ. ರೈಲ್ವೆಗೆ ತೆರಳುವ ಸಂಪೂರ್ಣ ಖರ್ಚುವೆಚ್ಚ ಭರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪ್ರಲ್ಹಾದ್ ಜೋಶಿ, ಶಶಿಕಲಾ ಜೊಲ್ಲೆ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಮಾರ್ಚ್,5 ರಂದು ಮತ್ತೊಮ್ಮೆ ಸಭೆ ಕರೆದು ಎಲ್ಲರ ಒಮ್ಮತದ ಅಭಿಪ್ರಾಯದ ಮೇರೆಗೆ ಕಾಶಿಯಾತ್ರೆಗೆ ತೆರಳುತ್ತೇವೆ. ಅಲ್ಲದೇ ಮಾರ್ಚ್,17 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ರೈತರ ಜಾಗೃತಿ ಸಮಾವೇಶದಲ್ಲಿ ಸರ್ವಧರ್ಮಗಳ ಪೂಜ್ಯರು, ಸಂತರು, ಶರಣರು, ಮೌಲ್ವಿಗಳು, ಪಾದ್ರಿಗಳು, ಜೈನ, ಬೌಧ್ಧ ಧರ್ಮದ ಗುರುಗಳು ಹಾಗೂ ಮಹದಾಯಿ ಹೋರಾಟಕ್ಕೆ ನಿರಂತರ ಬೆಂಬಲ ನೀಡಿರುವ ರಾಜ್ಯ, ಹೊರ ರಾಜ್ಯಗಳ ಎಲ್ಲ ರೈತ ಸಂಘಟನೆಗಳ ಮುಖಂಡರು, ಜನಪರ, ಕನ್ನಡಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 
    ಮಲ್ಲಣ್ಣ ಅಲೇಕಾರ, ವೀರಬಸಪ್ಪ ಹೂಗಾರ, ಫಕೀರಪ್ಪ ಜೋಗಣ್ಣವರ, ಅರ್ಜುನ ಮಾನೆ, ವಾಸು ಚವ್ಹಾಣ, ಬಸಪ್ಪ ಗುಡದರಿ, ಪರಮೇಶ ಅಣ್ಣಿಗೇರಿ, ಮಾರುತಿ ಯಾಧವ, ಹನಮಂತ ಸರನಾಯ್ಕರ, ಶಿವಪ್ಪ ಸಾತಣ್ಣವರ, ಎಸ್.ಕೆ.ಗಿರಿಯಣ್ಣವರ, ಬಸಪ್ಪ ಹಾಲವರ, ಜಗನ್ನಾಥ ಮುಧೋಳೆ, ಸುಭಾಸ ಮಡಿವಾಳ, ಅತ್ನವ್ವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts