More

    ಮಧುಗಿರಿಗೆ ಸ್ವಚ್ಛತೆಯಲ್ಲಿ 4ನೇ ಸ್ಥಾನ ; ಸ್ವಚ್ಛ ಸರ್ವೇಕ್ಷಣೆಯಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆ

    ಮಧುಗಿರಿ: ಶೈಕ್ಷಣಿಕ ಜಿಲ್ಲೆ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ 3ನೇ ಸ್ಥಾನಗಳಿಸಿ ರಾಜ್ಯಮಟ್ಟದಲ್ಲಿ ಹೆಸರುಗಳಿಸಿದ್ದು ಒಂದೆಡೆಯಾದರೆ, ಈಗ ಮಧುಗಿರಿ ಪುರಸಭೆಯೂ ಇದೇ ಸಾಧನೆಯ ಹಾದಿಯಲ್ಲಿ ಸಾಗಿದೆ, ಸ್ವಚ್ಛ ಸರ್ವೇಕ್ಷಣಾ ಅಭಿಯಾನ-2020ರಲ್ಲಿ ರಾಜ್ಯದಲ್ಲೇ 4ನೇ ಸ್ಥಾನ ಗಳಿಸುವ ಮೂಲಕ ಮತ್ತೊಂದು ಗರಿ ಮುಡಿದಿದೆ.

    ಎಲ್ಲೆಡೆ ಕಸ ವಿಲೇವಾರಿಯೇ ಬಹುದೊಡ್ಡ ಸಮಸ್ಯೆ, ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿರುವ ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರ ಸಹಕಾರದೊಂದಿಗೆ ಇಡೀ ಪಟ್ಟಣವನ್ನೇ ಸ್ವಚ್ಛವಾಗಿರಿಸಿದ್ದಾರೆ, ಕಸದ ರಾಶಿ ತುಂಬಿಕೊಂಡಿದ್ದ ಮಧುಗಿರಿಯ ಚಿತ್ರಣವನ್ನೇ ಹಂತ-ಹಂತವಾಗಿ ಬದಲಾಯಿಸಿ ಇಂದು ಸ್ವಚ್ಛ ನಗರಿಯನ್ನಾಗಿ ಮಾರ್ಪಡಿಸಿರುವ ಪುರಸಭೆ ಯಶೋಗಾಥೆ ಇತರ ಪುರಸಭೆಗಳಿಗೆ ಮಾದರಿಯಾಗಿದೆ. ಕಸ ವಿಲೇವಾರಿ ಘಟಕವೆಂದರೆ ಅದು ರೋಗ-ರುಜಿನಗಳ ತಾಣ ಎನ್ನುವಂತಿರುತ್ತದೆ. ಆದರೆ, ಮಧುಗಿರಿ ಕಸ ವಿಲೇವಾರಿ ಘಟಕ ಯಾವುದೋ ಫಾರ್ಮ್‌ಹೌಸ್‌ನಂತೆ ಭಾಸವಾದರೆ ಅಚ್ಚರಿಯಿಲ್ಲ.

    ಕಸ ವಿಲೇವಾರಿ ಘಟಕ: ಒಂದೆಡೆ ಕಸ ವಿಲೇವಾರಿ ಮತ್ತೊಂದೆಡೆ ಆದಾಯ ಎಂಬುದನ್ನು ಕಂಡುಕೊಂಡಿರುವ ಪುರಸಭೆ, ಸಂಗ್ರಹವಾದ ಕಸವನ್ನು ವಿಲೇವಾರಿ ಘಟಕದಲ್ಲಿ ಹಸಿ, ಒಣ, ಬಯೋಮೆಡಿಕಲ್ ಮತ್ತು ಸ್ಯಾನಿಟರಿ ಕಸವೆಂದು 4 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಹಸಿ ಕಸದಿಂದ ಮಧುಗೋಲ್ಡ್ ಗೊಬ್ಬರ ತಯಾರಿಸಲಾಗುತ್ತದೆ, ಒಣಕಸವನ್ನು ಕಲಬುರಗಿಯಲ್ಲಿನ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಸಾಗಿಸುವ ಯೋಜನೆ ಸಿದ್ಧವಾಗಿದೆ, ಈ ಮೂಲಕ ಆದಾಯದ ಮೂಲವನ್ನೂ ಕಂಡುಕೊಳ್ಳಲಾಗಿದೆ. 12 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು, ಉಳಿದ ಜಮೀನಿನಲ್ಲಿ ಇದೇ ಮಧುಗೋಲ್ಡ್ ಗೊಬ್ಬರ ಬಳಸಿ ತರಕಾರಿ, ಸೊಪ್ಪು ಬಳಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.

    ಮಧುಗೋಲ್ಡ್‌ಗೆ ಬಾರಿ ಬೇಡಿಕೆ : ಹಸಿ ಕಸಕ್ಕೆ ಸಗಣಿ ನೀರು ಮಿಶ್ರಣ ಮಾಡಿ 45 ದಿನ ಸಂಗ್ರಹಿಸಿಟ್ಟು, ನಂತರ ಅದಕ್ಕೆ ಎರೆಹುಳುಗಳನ್ನು ಬಿಡಲಾಗುತ್ತದೆ. ಇದರಿಂದ ಉತ್ತಮ ಸಾವಯವ ಗೊಬ್ಬರ ತಯಾರಾಗುತ್ತಿದ್ದು, ಈ ಗೊಬ್ಬರವನ್ನು ಮಧುಗೋಲ್ಡ್ ಹೆಸರಿನಲ್ಲಿ 25 ಕೆ.ಜಿ.ಗೊಬ್ಬರಕ್ಕೆ 175 ರೂ. ನಂತೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಈ ಸಾವಯವ ಗೊಬ್ಬರಕ್ಕೆ ಬಾರಿ ಬೇಡಿಕೆಯಿದೆ. ಘಟಕದಲ್ಲಿ ಎರಡು ಗುಜರಾತ್‌ನ ಗಿರ್ ಮತ್ತು ಕಾಂಕ್ರೀಜ್ ತಳಿಯ 12 ಹಸುಗಳನ್ನು ಸಾಕಿದ್ದು, ಮದುವೆ, ಹಬ್ಬ-ಹರಿದಿನ ಇತರ ಕಾರ್ಯಕ್ರಮಗಳಲ್ಲಿ ಬಳಸಿ ಬಿಸಾಡುವ ಬಾಲೆಎಲೆಯಂತವುಗಳನ್ನು ಈ ಹಸುಗಳಿಗೆ ಮೇವನ್ನಾಗಿ ಬಳಸುತ್ತಿದ್ದು, ಇವುಗಳ ಸಗಣಿಯನ್ನು ಗೊಬ್ಬರದ ಮಿಶ್ರಣಕ್ಕೆ ಬಳಸಲಾಗುತ್ತಿದೆ. ಘಟಕದಲ್ಲಿ ಬಾತುಕೋಳಿಗಳನ್ನು ಸಾಕಲಾಗಿದೆ, ಹಸಿ ಮಾಂಸವನ್ನು ಇವುಗಳಿಗೆ ಆಹಾರವನ್ನಾಗಿ ನೀಡುವ ಮೂಲಕ ಕೋಳಿತ್ಯಾಜ್ಯ ವಿಲೇವಾರಿಗೆ ವಿನೂತನ ಮಾರ್ಗ ಕಂಡುಕೊಳ್ಳಲಾಗಿದೆ.

    ಕಲಬುರಗಿಗೆ ಒಣತ್ಯಾಜ್ಯ : ಕಲಬುರಗಿಯಲ್ಲಿನ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಒಣ, ಪ್ಲಾಸ್ಟಿಕ್ ಕಸವನ್ನು ಸಾಗಿಸುವ ಯೋಜನೆ ಸಿದ್ಧಪಡಿಸಿ, ಆದಾಯದ ಮೂಲ ಕಂಡುಕೊಳ್ಳಲಾಗಿದೆ. ಇನ್ನು ಪಟ್ಟಣದ ಹಳೇ ಡಿವೈಎಸ್.ಪಿ ಕಚೇರಿ ಆವರಣದಲ್ಲಿ ಡಂಪಿಂಗ್ ಯಾರ್ಡ್‌ಗಳನ್ನು ನಿರ್ಮಿಸಲಾಗಿದೆ. ತಿಂಗಳಿಗೆ 60 ಟನ್ ಕಸ ಸಂಗ್ರಹಣೆಯಾಗುತ್ತದೆ. ಇದಕ್ಕೆ ಗಂಜಲ, ಸಗಣಿ ನೀರು ಹಾಕಿ ಮುಚ್ಚಿಟ್ಟರೆ 30 ದಿನಗಳ ನಂತರ 10 ರಿಂದ 15 ಟನ್ ಗೊಬ್ಬರ ಸಿಗುತ್ತದೆ. ಇಂತಹ ವಿನೂತನ ಯೋಜನೆಗಳಿಂದ ಮಧುಗಿರಿ ಪುರಸಭೆ ಇತರರಿಗೆ ಮಾದರಿಯಾಗಿದ್ದು, ಪಟ್ಟಣವನ್ನು ಕಸಮುಕ್ತವನ್ನಾಗಿಸಿದ ದಿಟ್ಟ ಕ್ರಮಗಳಾಗಿವೆ.

    ಮಧುಗಿರಿಯನ್ನು ಸ್ವಚ್ಛ ನಗರಿಯನ್ನಾಗಿ ಪರಿವರ್ತಿಸಲು ಪುರಸಭೆ ನಿರಂತರ ಪ್ರಯತ್ನ ನಡೆಸುತ್ತಿದ್ದು, ಅದರ ಫಲವಾಗಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಮಧುಗಿರಿಗೆ ರಾಜ್ಯದಲ್ಲೇ 4ನೇ ಸ್ಥಾನ ಮತ್ತು ದಕ್ಷಿಣ ಭಾರತ ವಲಯದಲ್ಲಿ 18ನೇ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನ ಗಳಿಸಲು ಯೋಜನೆ ರೂಪಿಸುತ್ತಿದ್ದು, ಪಟ್ಟಣದ ಜನತೆ ಸಹಕಾರ ಅಗತ್ಯ.
    ಅಮರ್ ನಾರಾಯಣ್
    ಪುರಸಭೆ ಮುಖ್ಯಾ ಧಿಕಾರಿ, ಮಧುಗಿರಿ

    ಪಟ್ಟಣದ 23 ವಾರ್ಡ್‌ಗಳಿಂದ ಸಂಗ್ರಹವಾಗುವ ಕಸವನ್ನು 2014ರಿಂದಲೇ ತ್ಯಾಜ್ಯ ವಿಂಗಡಣೆ ಬಗ್ಗೆ ಕ್ರಮ ಕೈಗೊಂಡಿದ್ದರಿಂದ ಎರೆಹುಳಗೊಬ್ಬರ ಮತ್ತು ಎರೋಬಿಕ್‌ನ ಉತ್ತಮ ಗೊಬ್ಬರ ಮಾಡಲು ಸಹಕಾರಿಯಾಗಿದೆ.
    ಸೌಮ್ಯಾ ಪರಿಸರ ಅಭಿಯಂತರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts