More

    ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಖರೀದಿಗೆ 6ರಿಂದ ನೋಂದಣಿ

    ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಸಲು ಫೆ.6ರಿಂದ ನೋಂದಣಿ ಹಾಗೂ ಹೊಸ ದುರ್ಗ,ಹಿರಿಯೂರಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು. ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕಾರ‌್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿ,ಕೇಂದ್ರ ಸರ್ಕಾರ ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್‌ಗೆ 11750 ರೂ.ಬೆಂಬಲ ಬೆಲೆ ಘೋಷಿಸಿದೆ.

    ರಾಜ್ಯಸಹಕಾರ ಮಾರಾಟ ಮಹಾ ಮಂಡಳದಿಂದ ಹೊಸದುರ್ಗ ಹಾಗೂ ಹಿರಿಯೂರು ಎಪಿಎಂಸಿ ಆವರಣದಲ್ಲಿ 15 ದಿನಗಳ ಒಳಗೆೆ ಖರೀದಿ ಪ್ರಾರಂಭಿಸಬೇಕು. ಮಾರ್ಗಸೂಚಿಯಂತೆ ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಉಂಡೆ ಕೊಬ್ಬರಿ ಖರೀದಿಸಲು ಅವಕಾಶವಿದೆ.

    ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರುವ ರೈತರು 6ರಿಂದ ಮಾರ್ಚ್ 12ರವರೆಗೆ ಹೆಸರು ನೋಂದಾಯಿಸ ಬಹುದು ಹಾಗೂ ಖರೀದಿ ಪ್ರಕ್ರಿಯೆ ಜುಲೈ 27ರವರೆಗೂ ನಡೆಯಲಿದೆ. ಖರೀದಿಗಾಗಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕೆಂದರು. ಜಂಟಿಕೃಷಿ ನಿರ್ದೇಶಕ ರಮೇಶ್‌ಕುಮಾರ್ ಮಾತನಾಡಿ,ಸದ್ಯ ಮಾರುಕಟ್ಟೆಯಲ್ಲಿ

    ಉಂಡೆಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 9500ರಿಂದ 10600 ರೂ.ವರೆಗೆ ಧಾರಣೆ ಇದೆ. ಸರ್ಕಾರ 11750 ರೂ. ಬೆಂಬಲ ಬೆಲೆ ನಿಗದಿಪಡಿಸಿರುವುದರಿಂದ,ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೋಬರಿಗೆ ಮಾರಾಟಕ್ಕೆ ಮುಂದಾ ಗಬಹುದೆಂದರು. ಚಿತ್ರದುರ್ಗ ಎಪಿಎಂಸಿ ಉಪನಿರ್ದೇಶಕ ಎಸ್.ಎನ್.ಪತ್ತಾರ್ ಮಾತನಾಡಿ,ಖರೀದಿಗಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

    ರಾಜ್ಯಸಹಕಾರ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಬಸವರಾಜ್ ಮಾತನಾಡಿ,ರೈತರು ತರುವ ಕೊಬ್ಬರಿಯನ್ನು ಬೇರೆ ಚೀಲ ದಲ್ಲಿ ಪ್ಯಾಕಿಂಗ್ ಮಾಡಲಾಗುವುದು. ಕಳೆದ ವರ್ಷ ಜಿಲ್ಲೆಯಲ್ಲಿ 2075 ಕ್ವಿಂಟಾಲ್ ಕೊಬ್ಬರಿ ಖರೀದಿಸಲಾಗಿತ್ತು. ಈ ವರ್ಷ ಜಿಲ್ಲೆಯಲ್ಲಿ 2500 ಕ್ವಿಂಟಾಲ್ ಉಂಡೆಕೊಬ್ಬರಿ ಖರೀದಿಯಾಗುವ ಸಾಧ್ಯತೆ ಇದೆ ಎಂದರು.

    ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಯ್ಯ ಹಿರೇಮಠ,ರಾಜ್ಯಉಗ್ರಾಣ ನಿಗಮದ ಅಧಿಕಾರಿ ಮಾರುತಿ,ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಮೂರ್ತಿ,ಎಪಿಎಂಸಿ ಕಾರ‌್ಯದರ್ಶಿಗಳಾದ ಗೌತಮ್,ಅತಾವುಲ್ಲ, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕ ರಾಗ್ಯಾನಾಯ್ಕ ಇತರರು ಇದ್ದರು.
    —-
    ಕೋಟ್
    ನೋಂದಣಿ,ಎಫ್‌ಎಕ್ಯೂ ಗುಣಮಟ್ಟ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಗೊಂದಲಗಳಾಗದಂತೆ ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸ ಬೇಕು.ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ಪಾವತಿಸ ಬೇಕು.ರೈತರಿಂದ ಮಾತ್ರ ಉಂಡೆ ಕೊಬ್ಬರಿ ಖರೀದಿಸ ಬೇಕು,ಇದರಲ್ಲಿ ಯಾವುದೇ ದುರುಪಯೋಗ ಆಗಬಾರದು.
    ಜಿಆರ್‌ಜೆ ದಿವ್ಯಾಪ್ರಭು,ಡಿಸಿ,ಚಿತ್ರದುರ್ಗ.

    ಜಿಲ್ಲೆಯಲ್ಲಿ ತೆಂಗಿನ ಬೆಳೆ ವಿವರ

    ತಾಲೂಕು-ಹೆಕ್ಟೇರ್
    ಹೊಸದುರ್ಗ-28315
    ಹಿರಿಯೂರು-10037
    ಚಳ್ಳಕೆರೆ-822
    ಚಿತ್ರದುರ್ಗ-1049
    ಹೊಳಲ್ಕೆರೆ-5762
    ಮೊಳಕಾಲ್ಮೂರು-138
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts