More

    ನೋಡಬನ್ನಿ ಜಂಬೂಸವಾರಿ ದಿಬ್ಬಣ

    ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
    ಮನಮೋಹಕ, ರಮ್ಯವಾದ ಜಂಬೂಸವಾರಿ ದಿಬ್ಬಣವನ್ನು ಕಣ್ತುಂಬಿಕೊಳ್ಳಲು ಕರುನಾಡು, ದೇಶ-ವಿದೇಶಗಳಿಂದ ಬಂದಿರುವ ಲಕ್ಷಾಂತರ ಜನರು ಕುತೂಹಲದಿಂದ ಕಾಯುತ್ತಿದ್ದಾರೆ…!

    ಚಿತ್ತಾಕರ್ಷಕವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂತಿಮ ಘಟ್ಟ ತಲುಪಿದೆ. ವೈಭೋಗದ ವಿಜಯದಶಮಿ ಮೆರವಣಿಗೆಗೂ ಕ್ಷಣಗಣನೆ ಆರಂಭವಾಗಿದೆ.

    ನೃತ್ಯ, ಸಂಗೀತ, ಕವಿಗೋಷ್ಠಿ, ಕ್ರೀಡೆ, ಕುಸ್ತಿ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಸಡಗರದಲ್ಲಿ ಮುಳುಗಿರುವ ಸಾಂಸ್ಕೃತಿಕ ನಗರಿ ಇದೀಗ ಈ ಘಳಿಗೆಗಾಗಿ ತವಕದಿಂದ ಎದುರುನೋಡುತ್ತಿದೆ. ಮೆರವಣಿಗೆಗಾಗಿ ಮೈಸೂರು ಸಕಲ ರೀತಿಯಲ್ಲೂ ಸಿದ್ಧವಾಗಿದೆ. ನಾಡಿಗೆ ಬರ, ಕಾವೇರಿ ಸಂಕಷ್ಟ ಆವರಿಸಿದ್ದರೂ ವೈಭವ, ಪಾರಂಪರಿಕ ಮೆರುಗಿಗೆ ಕೊರತೆಯಾಗದಂತೆ ನಾಡಹಬ್ಬವನ್ನು ಆಚರಿಸಲಾಗುತ್ತಿದ್ದು, ಇದರಿಂದಾಗಿ ಜಂಬೂಸವಾರಿ ಆಡಂಬರಕ್ಕಿಲ್ಲ ಬರ! ‘ಶಕ್ತಿ’ ಯೋಜನೆಯಿಂದಾಗಿ ವಿವಿಧ ಜಿಲ್ಲೆಗಳಿಂದ ಜನಸಾಗರ ಹರಿದು ಬರುವ ನಿರೀಕ್ಷೆ ಇದೆ. ಜನದಟ್ಟಣೆ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ಪೊಲೀಸರು ಅಗತ್ಯ ಕ್ರಮ ವಹಿಸಿದ್ದಾರೆ.

    ಅರಮನೆಯಲ್ಲೂ ಸಂಭ್ರಮ: ಅರಮನೆ ಒಳಗೂ ಸಡಗರ ಮೇಳೈಸಿದೆ. ಅ. 23ರಂದು ಆಯುಧಪೂಜೆ ಸಂದರ್ಭದಲ್ಲಿ ವಿವಿಧ ಆಯುಧಗಳು, ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸು, ವಿವಿಧ ವಾಹನಗಳಿಗೆ ಪೂಜೆ, ಶಮಿಪೂಜೆ ನೆರವೇರಲಿದೆ. ವಿಜಯದಶಮಿ ದಿನದಂದು(ಅ.24) ರೋಚಕವಾದ ವಜ್ರಮುಷ್ಟಿ ಕಾಳಗ, ವಿವಿಧ ಧಾರ್ವಿುಕ ಪೂಜೆ ಜರುಗಲಿವೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳ್ಳಿರಥದಲ್ಲಿ ಮೆರವಣಿಗೆ ಹೊರಡುವ ಮೂಲಕ ಖಾಸಗಿ ದರ್ಬಾರ್ ಸಂಪನ್ನಗೊಳ್ಳಲಿದೆ.

    ನಾಡದೇವಿಗೆ ಪುಷ್ಪನಮನ: ಅ. 24ರಂದು ಮಧ್ಯಾಹ್ನ 1.46ರಿಂದ 2.08ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಗುತ್ತದೆ. ತದನಂತರ ವಿಜಯದಶಮಿ ಮೆರವಣಿಗೆಗೆ ಅರಮನೆ ಒಳಾವಣರದಲ್ಲಿ ಚಾಲನೆ ದೊರೆಯಲಿದೆ. ಅಭಿಮನ್ಯು ಆನೆ ಹೊತ್ತ ಅಂಬಾರಿ ಮೇಲೆ ಪ್ರತಿಷ್ಠಾಪಿತ ಚಾಮುಂಡಿ ದೇವಿಗೆ ಸಂಜೆ 4.40ರಿಂದ 5ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸುವರು. ಈ ಕ್ಷಣಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ. 12 ಸಾಲಾಂಕೃತ ಆನೆಗಳು, ನಾಡಿನ ಸಂಸ್ಕೃತಿ ಅನಾವರಣಗೊಳಿಸುವ ವಿವಿಧ ಕಲಾತಂಡಗಳು, ಸ್ತಬ್ಧಚಿತ್ರಗಳು ಅಂದಾಜು 5 ಕಿ.ಮೀ. ದೂರದ ಬನ್ನಿಮಂಟಪದವರೆಗೆ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಲಿವೆ.

    ಅಂಬಾರಿ ಹೊರಲು ಅಭಿಮನ್ಯು ರೆಡಿ: ಪ್ರಮುಖ ಆಕರ್ಷಣೆಯಾದ ಗಜಪಡೆ ವಿಜಯದಶಮಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದೆ. 4ನೇ ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಆನೆ ಸಜ್ಜಾಗಿದೆ. ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯ ಮುಂದಾಳತ್ವ ವಹಿಸುವ ಈ ಆನೆ 2012ರಿಂದಲೇ ದಸರಾದಲ್ಲಿ ಭಾಗಿಯಾಗುತ್ತಿದ್ದು, ಅನುಭವಿ ಆಗಿರುವ ಇದು 2020ರಿಂದ ಅಂಬಾರಿ ಹೊರುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದೆ. ಮಾವುತ ಜೆ.ಎಸ್.ವಸಂತ ಅವರು ಅಭಿಮನ್ಯುವನ್ನು ಮುನ್ನಡೆಸಲಿದ್ದಾರೆ. ಇದರ ಅಕ್ಕಪಕ್ಕದಲ್ಲಿ ಸಾಗುವ ವಿಜಯ ಮತ್ತು ವರಲಕ್ಷ್ಮೀ ಹೆಣ್ಣಾನೆಗಳು ನಾಯಕನನ್ನು ಹದ್ದುಬಸ್ತಿನಲ್ಲಿ ಇಡಲು ನೆರವಾಗಲಿವೆ. ಉಳಿದಂತೆ, ಮಾಜಿ ನಾಯಕ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಲಕ್ಷ್ಮೀ, ಪ್ರಶಾಂತ, ಸುಗ್ರೀವ್ ಸೇರಿ 12 ಆನೆಗಳು ಪಾಲ್ಗೊಳ್ಳಲಿವೆ. ಹೊಸ ಆನೆಗಳಾದ ರೋಹಿತ್, ಹಿರಣ್ಯಾ ಕಾಯ್ದಿಡಲಾಗಿದೆ. 14 ಆನೆಗಳೂ ಒಂದೂವರೆ ತಿಂಗಳಿನಿಂದ ತಾಲೀಮು ನಡೆಸಿ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿವೆ.

    ಪಂಜಿನ ಕವಾಯತಿನ ರೋಚಕತೆ: ಮೈನವಿರೇಳಿಸುವ ಪಂಜಿನ ಕವಾಯತು (ಟಾರ್ಚ್​ಲೈಟ್ ಪರೇಡ್) ಸಮಾರಂಭಕ್ಕಾಗಿ ಬನ್ನಿಮಂಟಪದಲ್ಲಿ ಸಮಗ್ರ ತಯಾರಿ ಮಾಡಿಕೊಳ್ಳಲಾಗಿದೆ. ಈ ಸಲ ವಿಜಯದಶಮಿ ಮೆರವಣಿಗೆ ತಡವಾಗಿರುವುದರಿಂದ ಪಂಜಿನ ಕವಾಯತು ಅರ್ಧ ಗಂಟೆ ವಿಳಂಬವಾಗಿ ಶುರುವಾಗಲಿದೆ. ಮಂಗಳವಾರ ರಾತ್ರಿ 7.30ಕ್ಕೆ ಜರುಗುವ ದಸರಾ ಅಂತಿಮ ಕಾರ್ಯಕ್ರಮವಾದ ಇದರಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪೊಲೀಸರು, ವಿವಿಧ ತುಕಡಿಗಳಿಂದ ಗೌರವವಂದನೆ ಸ್ವೀಕರಿಸುವರು. ಸೇನೆಯಿಂದ ಮೋಟಾರ್​ಸೈಕಲ್ ಸಾಹಸ, ಅಶ್ವದಳದಿಂದ ಸಾಹಸ ಪ್ರದರ್ಶನ ಪ್ರೇಕ್ಷಕರಿಗೆ ರಸದೌತಣವನ್ನೇ ಉಣಬಡಿಸಲಿದೆ.

    ಸ್ತಬ್ಧಚಿತ್ರಗಳಲ್ಲಿ ಗ್ಯಾರಂಟಿ ಘಮಲು: ಸ್ತಬ್ಧಚಿತ್ರಗಳಲ್ಲೂ ಗ್ಯಾರಂಟಿ ಯೋಜನೆಗಳು ಮಿಂಚಲಿವೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಸ್ತಬ್ಧಚಿತ್ರಗಳ ಮೂಲಕ ಪರಿಚಯಿಸಲಾಗುತ್ತಿದೆ. ಜತೆಗೆ, ನಾಡಿನ ಕಲೆ, ಪರಂಪರೆ, ವೈವಿಧ್ಯತೆಯೂ ಗರಿ ಬಿಚ್ಚಲಿದೆ. ರಾಜ್ಯದ ವಿವಿಧ ಜಿಪಂಗಳ 31, ಇತರ ಸರ್ಕಾರಿ ಸಂಸ್ಥೆಗಳ 18 ಸೇರಿ ಒಟ್ಟು 49 ಟ್ಯಾಬ್ಲೋಗಳು ನೋಡಲು ಲಭ್ಯವಾಗಲಿವೆ. ನಗರದ ಎ.ಪಿ.ಎಂ.ಸಿ ಆವರಣದಲ್ಲಿ ಇವುಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮಂಗಳವಾರದ ಹೊತ್ತಿಗೆ ಅಂತಿಮವಾಗಲಿವೆ.

    ಸಾಂಸ್ಕೃತಿಕ ವೈಭೋಗ: ಸಾಂಸ್ಕೃತಿಕ ಕಲಾತಂಡಗಳು ಸಹ ಸಮಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಇನ್ನಷ್ಟು ಅಂದ ತಂದುಕೊಡಲಿವೆ. ಅಂದಾಜು 1200 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಕರುನಾಡಿನ ಸಂಸ್ಕೃತಿಯನ್ನು ಪರಿಚಯಿಸಲಿದ್ದಾರೆ.

    ಬಿಗಿಭದ್ರತೆ: ಪ್ರಮುಖ ಸ್ಥಳಗಳಲ್ಲಿ ಬಿಗಿಭದ್ರತೆ ಕಲ್ಪಿಸಲಾಗಿದೆ. ಜಂಬೂಸವಾರಿ, ಪಂಜಿನ ಕವಾಯತು ಭದ್ರತೆಗಾಗಿ ಸ್ಥಳೀಯ 2000, ಹೊರ ಜಿಲ್ಲೆಗಳಿಂದ 4200, ಸಶಸ್ತ್ರ ಪಡೆಗಳು ಸೇರಿದಂತೆ ಒಟ್ಟು 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸಶಸ್ತ್ರ ಪಡೆಗಳು, ವಿಧ್ವಂಸಕ ಕೃತ್ಯ ಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ, ವಿಶೇಷ ಗರುಡ ಪಡೆ ಸಹ ಪಹರೆ ಕಾಯಲಿವೆ. ಆದ್ದರಿಂದ ಸಾರ್ವಜನಿಕರು, ಪ್ರವಾಸಿಗರು ನಿರಾತಂಕವಾಗಿ ಜಂಬೂಸವಾರಿ ವೀಕ್ಷಣೆಗೆ ಬನ್ನಿ ಎಂದು ಪೊಲೀಸ್ ಇಲಾಖೆ ಭರವಸೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts