More

    ಲೋಕಸಭಾ ಚುನಾವಣೆಯ ಬಿರುಸಿನ ಚಟುವಟಿಕೆ, ಸಾರ್ವಜನಿಕರು ಪರದಾಡುತ್ತಿರುವುದೇತಕ್ಕೆ?

    ಚಿಕ್ಕಬಳ್ಳಾಪುರ:•ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಬಿರುಸಿನ ಚಟುವಟಿಕೆಯ ನಡುವೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳ ಮುಂದೂಡಿಕೆಯ ಅಳಲು ಕೇಳಿ ಬರುತ್ತಿದೆ.
    ಹೌದು! ಬಹುತೇಕ ಇಲಾಖೆಯ ಅಧಿಕಾರಿಗಳು ಸ್ವೀಪ್ ಚಟುವಟಿಕೆ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ, ಚುನಾವಣಾ ಪ್ರಕ್ರಿಯೆಗಳ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದರಿಂದ ಬಹುತೇಕ ಸಾರ್ವಜನಿಕ ಕೆಲಸಗಳನ್ನು ಮುಂದೂಡುತ್ತಿದ್ದು ಕಚೇರಿಗಳಿಗೆ ಜನರು ಹಲವು ಬಾರಿ ಅಲೆದು ತೊಂದರೆ ಅನುಭವಿಸುವಂತಾಗಿದೆ.
    ಪ್ರಸ್ತುತ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರ ಇದೆ. ಕುಡಿಯುವ ನೀರಿನ ಹಾಹಾಕಾರ ಹೆಚ್ಚಳವಾಗಿ, ಅಲ್ಲಲ್ಲಿ ಖಾಲಿ ಕೊಡಗಳೊಂದಿಗೆ ಸ್ಥಳೀಯರು ಧರಣಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ವೈಫಲ್ಯ, ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಸಮರ್ಪಕವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಿಲ್ಲ. ಹೀಗೆ ಜಿಲ್ಲಾದ್ಯಂತ ವಿವಿಧ ಸಮಸ್ಯೆಗಳು ಕಾಡುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಚುನಾವಣಾ ಒತ್ತಡದಲ್ಲಿ ಜನರ ಅಳಲು ಆಲಿಸುತ್ತಿಲ್ಲ. ಮತ್ತೊಂದೆಡೆ ಅವಶ್ಯಕವಿರುವ ಹಲವು ದಾಖಲೆಗಳನ್ನು ಪಡೆಯಲು ಜನರು ಪರದಾಡುವಂತಾಗಿದೆ.

    * ಚುನಾವಣೆಯಲ್ಲಿ ತಲ್ಲೀನ
    ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನದ ಗುರಿ ಸಾಧನೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯ ಸಿಬ್ಬಂದಿ ನಿರತರಾಗಿದ್ದು ವಿವಿಧ ಇಲಾಖೆಗಳ ಬಹುತೇಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಾ.ಪಂ.ಇಒಗಳು, ಪೌರಾಯುಕ್ತರು, ಗ್ರಾ.ಪಂ.ಪಿಡಿಒಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
    ಜಿಲ್ಲೆಯಲ್ಲಿನ ತಾಲೂಕು ಕಚೇರಿಗಳಲ್ಲಿ ತಹಸೀಲ್ದಾರ್‌ಗಳು, ಉಪ ತಹಸೀಲ್ದಾರ್‌ಗಳು ಮತದಾರ ಪಟ್ಟಿ ಪರಿಷ್ಕರಣೆ, ಮತದಾರರಿಗೆ ವಿತರಿಸಲು ಸ್ಲೀಪ್‌ಗಳು ತಯಾರು, ರಾಜಕೀಯ ಚಟುವಟಿಕೆಗೆ ಅನುಮತಿ ನೀಡುವುದು, ದಾಖಲೆಗಳ ಪರಿಶೀಲನೆ, ಸ್ಥಳಕ್ಕೆ ಭೇಟಿ ನೀಡುವುದು ಸೇರಿದಂತೆ ನಾನಾ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಇದರ ನಡುವೆ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ವಿವಿಧ ಹಂತದ ತರಬೇತಿ, ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ಭೇಟಿ, ಜಿಲ್ಲಾ ಕೇಂದ್ರಗಳಲ್ಲಿ ನಿರಂತರ ಸಭೆಗಳಲ್ಲಿ ಭಾಗಿ ಸೇರಿದಂತೆ ಬಿಡುವಿಲ್ಲದ ಕೆಲಸಗಳು ಒತ್ತಡ ಹೆಚ್ಚಿಸುತ್ತಿವೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಓಡಾಡಿಕೊಂಡು ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿ, ಸುಸ್ತಾಗಿ ಕಚೇರಿಗಳಲ್ಲಿ ಇತರ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುತ್ತಿದ್ದಾರೆ.

    * ಮತ್ತೆ ಬನ್ನಿ ಎನ್ನುವುದು ಸಾಮಾನ್ಯ
    ಬಹುತೇಕ ಸರ್ಕಾರಿ ಕಚೇರಿಯಲ್ಲೂ ಸಿಬ್ಬಂದಿ ಜನರನ್ನು ಮತ್ತೆ ಬರಲು ಹೇಳಿ, ವಾಪಸ್ ಕಳುಹಿಸುತ್ತಿದ್ದಾರೆ. ಹಲವರಿಗೆ ಚುನಾವಣಾ ಒತ್ತಡದಲ್ಲಿರುವುದರಿಂದ ಕೆಲಸ ಮುಗಿಯಲು ಇನ್ನೂ ಜಾಸ್ತಿ ದಿನಬೇಕಾಗುತ್ತದೆ ಎಂಬ ಮಾತನ್ನು ಹೇಳಲಾಗುತ್ತಿದೆ.
    ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಇದಕ್ಕೆ ಪ್ರಚಾರದ ಒತ್ತಡದಲ್ಲಿ ಜನರ ಮನಸ್ಸನ್ನು ನೋಯಿಸದೇ ಚುನಾವಣೆ ತಲೆ ನೋವು ಮುಗಿಯುತ್ತಿದ್ದಂತೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನಾಯಕರು ಜನರಿಗೆ ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts