More

    ಕುಂದಾಪುರದಲ್ಲಿ ಸ್ವಯಂ ಲಾಕ್‌ಡೌನ್..!

    ಕುಂದಾಪುರ: ಕರೊನಾ ವೈರಸ್ ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಜುಲೈ 13ರಿಂದ 31ರ ವರೆಗೆ ಕುಂದಾಪುರ ಪುರಸಭಾ ವ್ಯಾಪ್ತಿಯ ಬೆಳಗ್ಗೆಯಿಂದ ಮಧ್ಯಾಹ್ನ 2ರ ತನಕ ವಹಿವಾಟು ನಡೆಸಲು ಕುಂದಾಪುರ ಸಮಾನಮನಸ್ಕ ವರ್ತಕರು ನಿರ್ಧರಿಸಿದ್ದಾರೆ.

    ಕರೊನಾ ಸಾಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150 ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಮಧ್ಹಾಹ್ನ ಬಳಿಕ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವ್ಯಾಪಾರಿ ರಾಧಾಕೃಷ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದಿನಸಿ, ತರಕಾರಿ, ಹಣ್ಣು, ಎಲೆಕ್ಟ್ರಿಕಲ್ ಶೋರೂಂ, ಮೊಬೈಲ್, ಬಟ್ಟೆ, ಬೇಕರಿ, ಜ್ಯೂಸ್ ಪಾರ್ಲರ್, ಸೆಲೂನ್, ಬ್ಯೂಟಿ ಪಾರ್ಲರ್‌ಗಳು, ಚಿನ್ನದ ಮಳಿಗೆಗಳು ಸೇರಿದಂತೆ ಎಲ್ಲ ಅಂಗಡಿಗಳು ಜುಲೈ ಅಂತ್ಯದವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ಬಂದ್ ಇರಲಿವೆ. ಮೆಡಿಕಲ್, ಹಾಲು ಮಾರಾಟ ಅಂಗಡಿ, ಹೋಟೆಲ್ ತೆರೆದಿರುತ್ತವೆ.
    ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತದೊಂದಿಗೆ ನಮ್ಮ ಹೊಣೆಗಾರಿಕೆಯೂ ಇದೆ. ಸ್ವಯಂಪ್ರೇರಿತ ಬಂದ್ ಕುರಿತಂತೆ ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದು ವಕೀಲ ಶ್ರೀಧರ್ ಪಿ.ಎಸ್.ತಿಳಿಸಿದರು.
    ಜುವೆಲ್ಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೇಟ್, ವರ್ತಕರಾದ ವಿಜಯ ಕುಮಾರ್ ಶೆಟ್ಟಿ, ಹುಸೇನ್ ಹೈಕಾಡಿ, ಅಬು ಮಹಮ್ಮದ್, ತಬ್ರೈಜ್, ಸಂತೋಷ್, ಸತೀಶ್ ಹೆಗ್ಡೆ, ಜಸ್ವಂತ್ ಸಿಂಗ್, ಸುರೇಂದ್ರ ಶೇಟ್ ಉಪಸ್ಥಿತರಿದ್ದರು.

    ಕರ್ಕಾಟಕ ಅಮಾವಾಸ್ಯೆ ಜಾತ್ರೆ ರದ್ದು: ಮಳೆಗಾಲದ ಮೊದಲ ಜಾತ್ರೆ ಉಡುಪಿ ಜಿಲ್ಲೆಯ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಜು.20ರಂದು ನಡೆಯಬೇಕಿದ್ದ ಆಷಾಢ ಅಮಾವಾಸ್ಯೆ ಜಾತ್ರೆ (ಮಾರಾಸ್ವಾಮಿ ಜಾತ್ರೆ) ರದ್ದಾಗಿದ್ದು, ಜಾತ್ರೆ ರದ್ದಾಗಿರುವುದು ಇದೇ ಪ್ರಥಮ. ವಿಜೃಂಭಣೆಯಿಂದ ನಡೆಯುತ್ತಿದ್ದ ಮರವಂತೆ ಜಾತ್ರೆಗೆ ಬೇರೆ ಬೇರೆ ಕಡೆಯಿಂದ ಸಾವಿರಾರು ಮಂದಿ ಬರುವ ನಿರೀಕ್ಷೆ ಇರುವುದರಿಂದ ಈ ಬಾರಿಯ ಜಾತ್ರೆ ಮಾಡಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ. ಜಾತ್ರೆ ರದ್ದಾದರೂ ಸಮಿತಿ ಪದಾಧಿಕಾರಿಗಳು, ಅರ್ಚಕರು ಸರಳವಾಗಿ ಧಾರ್ಮಿಕ ಕಾರ‌್ಯಕ್ರಮ ನಡೆಸಲಿದ್ದಾರೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

    ಚಿನ್ನ ಬೆಳ್ಳಿ ಮಾರಾಟ, ಕೆಲಸ ಬಂದ್: ಚಿನ್ನ, ಬೆಳ್ಳಿ ವ್ಯಾಪಾರಸ್ಥರು ಹಾಗೂ ಕೆಲಸಗಾರರು ಕರೊನಾ ಹಬ್ಬುವುದು ತಡೆಯುವ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ತನಕ ಚಿನ್ನ ಬೆಳ್ಳಿ ಮಾರಾಟ ಹಾಗೂ ಕೆಲಸ ಬಂದ್ ಮಾಡಲು ನಿಶ್ಚಯಿಸಿದ್ದಾರೆ. ತಾಲೂಕಿನಲ್ಲಿ ಕರೊನಾ ವೇಗವಾಗಿ ಹಬ್ಬುತ್ತಿರುವುದರಿಂದ ಸೋಮವಾರದಿಂದ ಬೆಳಗ್ಗೆ 9ರಿಂದ ಮಧ್ಯಾಹ್ನ 12ಗಂಟೆ ತನಕ ಚಿನ್ನ ಬೆಳ್ಳಿ ಮಾರಾಟ ಮಳಿಗೆಗಳು ಬಂದ್ ಆಗಲಿದ್ದು, ಕರೊನಾ ಆರ್ಭಟ ತಗ್ಗಿದ ನಂತರ ಮುಂದೇನು ಎನ್ನುವುದು ನಿರ್ಧರಿಸಲಾಗುತ್ತದೆ. ಚಿನ್ನ ಬೆಳ್ಳಿ ಮಾರಾಟ ಹಾಗೂ ಕೆಲಸಗಾರರು ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಚಿನ್ನಬೆಳ್ಳಿ ಮಾರಾಟ ಮಧ್ಯಾಹ್ನದವರೆಗೆ ನಡೆಯಲಿದ್ದು, ಇದಕ್ಕೆ ಕೆಲಸಗಾರರು ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಜುವೆಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts